ಪ್ರತಿ ಮನೆಯಲ್ಲಿ ವಿದ್ಯುತ್ ಉಳಿತಾಯ ಅಗತ್ಯವಿದೆ

ಲೋಕದರ್ಶನ ವರದಿ

ಬೈಲಹೊಂಗಲ 11: ವಿದ್ಯುತ್ ಬೇಡಿಕೆ ಅಧಿಕವಾಗುತ್ತಿದೆ, ಪ್ರತಿ ಮನೆಯಲ್ಲಿ ಉಳಿತಾಯದ ಅಗತ್ಯವಿದೆ, ಅದಕ್ಕಾಗಿ ವಿದ್ಯುತ್ ಹೊಸ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್  ಅಣ್ಣಪ್ಪ ಲಮಾಣಿ ಹೇಳಿದರು. 

ಪಟ್ಟಣದ   ಹೆಸ್ಕಾಂ ಶಾಖೆಯಲ್ಲಿ ಸೋಮವಾರ ನಡೆದ ವಿದ್ಯುತ್ ಸುರಕ್ಷತಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿದ್ಯುಚ್ಛಕ್ತಿಯನ್ನು ಅವಶ್ಯಕತೆಗೆ ತಕ್ಕಂತೆ ಮಾತ್ರ ಬಳಕೆ ಮಾಡಬೇಕು ವಿದ್ಯುತ್ ಬಳಕೆಯಲ್ಲಿ ಉಳಿತಾಯ ಮಾಡುವುದರ ಜೊತೆಗೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕೆಂದು ಮತ್ತು ಗ್ರಾಹಕರು ಸೌರಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡು ವಿದ್ಯುತ್ ಜಾಲಕ್ಕೆ ವಿತರಿಸಿ ಲಾಭ ಗಳಿಸಿಕೊಳ್ಳಬೇಕಂದರು. ಶಾಖಾಧಿಕಾರಿ ಎಸ್.ಜಿ. ಬಡಿಗೇರ, ತಾಂತ್ರಿಕ ಸಹಾಯಕರಾದ ಆರ್.ಆರ್. ಭಾವಿಮನಿ ಮಾತನಾಡಿ, ರೈತರು ಹೊಲಗಳಲ್ಲಿ ಬೆಳೆಗಳಿಗೆ ನೀರು ಹಾಯಿಸುವಾಗ, ಪಂಪ್ಸೆಟ್ ಆರಂಭಿಸುವಾಗ, ಮನೆಬಳಕೆ, ವಾಣಿಜ್ಯ ಬಳಕೆ ಹಾಗೂ ಉದ್ದಿಮೆ ಬಳಕೆ ಸ್ಥಾವರಗಳಲ್ಲಿ ಐಎಸ್ಐ ಗುಣಮಟ್ಟದ ವಿದ್ಯುತ್ ಉಪಕರಣಗಳನ್ನು ಬಳಸಿದರೆ ವಿದ್ಯುತ್ ಉಳಿತಾಯ ಮತ್ತು ಸುರಕ್ಷತೆ ಇರುತ್ತದೆ.  ಮನೆಗಳಲ್ಲಿ ಕಡ್ಡಾಯವಾಗಿ ಎಲ್.ಇ.ಡಿ. ಬಲ್ಬ್ಗಳನ್ನು ಬಳಸಬೇಕು, ಅನಾವಶ್ಯಕವಾಗಿ ವಿದ್ಯುತ್ ಬಳಕೆ ಮಾಡಬಾರದು.  ಸುರಕ್ಷತೆಯನ್ನು ಕಾಯ್ದುಕೊಳ್ಳುವುದಕ್ಕೆ ಎಲ್ಲ ಸ್ಥಾವರಗಳಿಗೂ ಎಂ.ಸಿ.ಬಿ ಮತ್ತು ಇ.ಎಲ್.ಸಿ.ಬಿ. ಅಳವಡಿಸಿಕೊಂಡು ಸುರಕ್ಷತೆಯನ್ನು ಅಗತ್ಯವಾಗಿ ಅನುಸರಿಸಬೇಕು ಎಂದರು. ಪುರಸಭೆ ಸದಸ್ಯರಾದ ರಾಜಶೇಖರ ಮೂಗಿ, ಬಸವರಾಜ ಜನ್ಮಟ್ಟಿ, ಗುರು ಮೆಟಗುಡ್ಡ, ವಕೀಲ ಮಹಾಂತೇಶ ಮತ್ತಿಕೊಪ್ಪ, ಎಸ್.ಕೆ. ಕಾಂಬಳೆ, ಎಸ್.ವ್ಹಿ. ಕೋಟಗಿ, ಎಸ್.ವ್ಹಿ. ಕೋಡಬಳೆ, ವೀರಪ್ಪ ಅಜ್ಜಪ್ಪನವರ, ಮೃತ್ಯುಂಜಯ ಮೆಟಗುಡ್ಡ ಹಾಗೂ ಗ್ರಾಹಕರು ಇದ್ದರು. ಶೇಖರ ಮಾನಶೆಟ್ಟಿ ಪ್ರಾರ್ಥಿಸಿದರು, ಜೆ.ಯು.ಶಿರವಂತಿ ನಿರೂಪಿಸಿ, ವಂದಿಸಿದರು.