ದೇಶ ದಿವಾಳಿಯಾದರೂ ಪರವಾಗಿಲ್ಲ ನಾವು ಮಾತ್ರ ಆಡಳಿತ ಮಾಡಬೇಕು...!
ಈ ಜಗತ್ತಿನ ಅತ್ಯಂತ ವಿಚಿತ್ರ ಸಂಗತಿ ಇದು. ತಿನ್ನುವುದಕ್ಕೆ ಅನ್ನವಿರದೇ ಇದ್ದರೂ ಪರವಾಗಿಲ್ಲ ಬದುಕುತ್ತೇವೆ. ಆದರೆ ಒಂದು ದಿನ ಖುರ್ಚಿ ಇಲ್ಲ ಎಂದರೆ ಬಹುಶಃ ನಮ್ಮ ಬದುಕೇ ಮುಗಿದು ಹೋಗಬಹುದು. ಅದಕ್ಕೆ ಸದಾ ನಮಗೆ ಖುರ್ಚಿ ಬೇಕೆ ಬೇಕು. ಅದನ್ನು ಯಾವುದೇ ಬೆಲೆ ಕೊಟ್ಟಾದರೂ ನಾವು ಪಡೆಯುತ್ತೇವೆ. ಅದಕ್ಕೆಂದು ಮತ ಹಾಕಿದ ಜನಗಳಾದರೂ ಸರಿಯೇ, ಮಹತ್ತರವಾದ ಬದುಕು ಕಲ್ಪಿಸಿಕೊಟ್ಟ ದೇಶವಾದರೂ ಸರಿಯೇ ಅವುಗಳನ್ನು ಬಲಿಕೊಟ್ಟಾದರೂ ನಾವಂದುಕೊಂಡ ಅಧಿಕಾರದ ಯಜ್ಞದಿಂದ ಫಲ ಪಡೆದೇ ಪಡೆಯುತ್ತೇವೆ. ಈ ತರಹದ ಧೋರಣೆ ಉಳ್ಳವರು ನಮ್ಮ ನಾಯಕರುಗಳು. ಚುನಾವಣೆಯಲ್ಲಿ ‘ಎಲ್ಲ ಉಚಿತ, ನಾಳೆ ನಾಡಿನ ಬರ್ಬಾದಿ ಖಚಿತ’ ಎನ್ನುವ ಘೋಷಣೆಗಳೊಂದಿಗೆ ಪ್ರಚಾರಕ್ಕಿಳಿಯುವ ಪ್ರತಿನಿಧಿಗಳು ವಾಸ್ತವವನ್ನು ಅಷ್ಟೇ ಆಲೋಚನೆ ಮಾಡುತ್ತಾರೆ. ಭವಿಷ್ಯವನ್ನು ಮುಲಾಜಿಲ್ಲದೆ ಮರೆತು ಬಿಡುತ್ತಾರೆ. ಅಲ್ಲಿಗೆ ದೇಶದ ಭವಿಷ್ಯ ಎನ್ನುವುದು ವರ್ತಮಾನದಲ್ಲಿಯೇ ಮಕಾಡೆ ಮಲಗಿ ಬಿಡುತ್ತದೆ. ಇಲ್ಲಿ ನಾನೇನು ಹೇಳಲು ಹೊರಟಿದ್ದೇನೆ ಎನ್ನುವುದು ಬಹುಶಃ ನಿಮಗೆ ಗೊಂದಲವಾಗುತ್ತಿದೆ ಅಲ್ಲವೆ? ನಿಜಾ...ಸರ್...! ನಿಮಗೆ ಕೇವಲ ನನ್ನ ನಾಲ್ಕು ಸಾಲುಗಳು ಗೊಂದಲ ಉಂಟು ಮಾಡುತ್ತಿವೆ. ಆದರೆ ನನಗೆ ನಮ್ಮ ನಾಯಕರುಗಳು ಆಡುತ್ತಿರುವ ಆಟಗಳು, ಹೇಳುತ್ತಿರುವ ಮಾತುಗಳನ್ನು ಕೇಳಿ ಒಂದು ಕ್ಷಣ ತಲೆ ತಿರುಗಿ ಹೋಗುತ್ತಿದೆ. ಇವರೇನು ನಾಡು ಕಟ್ಟುವವರೋ ಇಲ್ಲ ದೇಶ ಮೆಟ್ಟುವವರೋ ಗೊತ್ತಾಗುತ್ತಿಲ್ಲ. ಅದನ್ನೇ ಹೇಳುವುದಕ್ಕೆ ತಮ್ಮೆದುರು ಬಂದಿದ್ದೇನೆ. ಚುನಾವಣಾ ಪ್ರಚಾರ ಎಂದಾಕ್ಷಣ ಒಬ್ಬರು ಜನಗಳ ಭಾಗ್ಯದ ಬಾಗಿಲು ತೆರೆಯುವುದಕ್ಕೆ ಭಾಗ್ಯಗಳ ಸರಮಾಲೆಯನ್ನು ತರುತ್ತಾರೆ. ಮತ್ತೆ ಕೆಲವರು ಉಚಿತ ಉಚಿತ ಎಲ್ಲವೂ ಉಚಿತ. ನಾವು ಅಧಿಕಾರಕ್ಕೆ ಬಂದರೇ ನೀವು ದುಡಿಯುವುದೇ ಬೇಡ ಎಲ್ಲವನ್ನು ನಾವೇ ಕೊಟ್ಟು ಬಿಡುತ್ತೇವೆ. ಎನ್ನುವ ಮಟ್ಟದಲ್ಲಿ ಚುನಾವಣಾ ಪ್ರನಾಳಿಕೆಯನ್ನು ಮುಂದೆ ತಂದು ಬಿಡುತ್ತಾರೆ. ಇದನ್ನು ನೋಡಿದಾಗ ಇವರೇನು ಉದ್ಧಾರ ಮಾಡುವುದಕ್ಕೆ ಬಂದಿದ್ದಾರೋ ಇಲ್ಲ ಅಳಗಾಲ ಮಾಡುವುದಕ್ಕೆ ನಿಂತಿದ್ದಾರೋ ಎನಿಸುತ್ತದೆ. ಚುನಾವಣಾ ಪ್ರಚಾರದಲ್ಲಿ ಅಬ್ಬರಿಸಿ ಬೊಬ್ಬಿಳಿಯುವ ಬರದಲ್ಲಿ ಉಚಿತ ಯೋಜನೆಗಳನ್ನು ಘೋಷಿಸುವ ಪುಣ್ಯಾತ್ಮರಿಗೆ ಆ ಒಂದು ದೇಶದ ಕುರಿತು ಪರಿಚಯಿಸಬೇಕಿರುವುದು ಅತ್ಯಂತ ಅಗತ್ಯವಾಗಿದೆ. ಎಲ್ಲಿ ಉಚಿತವಿದೆಯೋ ಅಲ್ಲಿ ನಾಶ ಖಚಿತವಿದೆ ಎನ್ನುವುದಕ್ಕೆ ದಿವಾಳಿಯಾದ ಆ ಒಂದು ದೇಶದ ಕುರಿತು ತಿಳಿದುಕೊಳ್ಳಲೇ ಬೇಕಿದೆ.
ನನಗೇ ಈಗಲೂ ಅರ್ಥವಾಗುತ್ತಿಲ್ಲ. ಚುನಾವಣಾ ಪ್ರಚಾರ ಕಣದಲ್ಲಿ ವಿದ್ಯುತ್ ಉಚಿತ, ಪಡಿತರ ಉಚಿತ, ಸಾಲ ಮನ್ನಾ ಸೇರಿದಂತೆ ಉಚಿತ ವಿಚಾರಗಳನ್ನು ತೆಗೆದುಕೊಂಡು ಬರುತ್ತಾರಲ್ಲ ನಿಜಕ್ಕೂ ಇವರು ಈ ಎಲ್ಲ ಯೋಜನೆಗಳನ್ನು ಹೇಗೆ ಉಚಿತವಾಗಿ ನೀಡುತ್ತಾರೆ ಎನ್ನುವುದೇ ಅರ್ಥವಾಗುತ್ತಿಲ್ಲ. ಮನುಷ್ಯ ಸಾಯುತ್ತೇನೆಂದರೂ ಸಾವು ಕೂಡ ಉಚಿತವಾಗಿ ಸಿಗದೇ ಇರುವ ಈ ಜಗತ್ತಿನಲ್ಲಿ ಇವರು ಉಚಿತ ಘೋಷಣೆಗಳ ಮೂಲಕ ದೇಶವನ್ನು ಶೋಷಣೆ ಮಾಡುತ್ತಾರೆ ಎನ್ನುವುದು ನಮ್ಮ ಜನಗಳಿಗೆ ಅರ್ಥವಾಗುತ್ತಿಲ್ಲ. ಸಾವು ಪಡೆದುಕೊಳ್ಳಬೇಕು ಎಂದರೆ ಜೀವ ಕೊಡಬೇಕಾಗುತ್ತದೆ ಅಂದ ಮೇಲೆ ಇವರೇನು ಉಚಿತ ನೀಡುತ್ತಾರೆ ಹೇಳಿ? ಇವರ ಉಚಿತದ ಹಿಂದಿರುವ ಖಚಿತತೆ ಕುರಿತು ನಿಮಗೆ ಹೇಳಬೇಕೆಂದಾಗ ನನಗೊಂದು ಕಥೆ ನೆನಪಾಗುತ್ತಿದೆ. ಒಂದು ಹೋಟೆಲ್ ಮುಂದೆ “ನೀವು ನಮ್ಮ ಹೋಟೇಲ್‌ನಲ್ಲಿ ತಿಂದು ಹೋದ ಆಹಾರದ ಬಿಲ್ಲನ್ನು ಮುಂದೆ ನಿಮ್ಮ ಮೊಮ್ಮಕ್ಕಳ ಕೈ ಯಿಂದ ವಸೂಲಿ ಮಾಡಲಾಗುವುದು” ಎಂದು ಬರೆಯಲಾಗಿತ್ತು. ಇದನ್ನು ಓದಿದ ಒಬ್ಬ ವ್ಯಕ್ತಿ ನಾನು ತಿಂದಿದ್ದಕ್ಕೆ ನನ್ನ ಮೊಮ್ಮಕ್ಕಳು ಬಿಲ್ಲು ತೆರುತ್ತಾರೆ. ಅಲ್ಲಿಯವರೆಗೂ ಏನಾಗುತ್ತದೆ ಯಾರಿಗೆ ಗೊತ್ತು ಸಿಕ್ಕ ಅವಕಾಶವನ್ನು ಬಿಟ್ಟರೆ ಕೆಟ್ಟೆ ಎಂದು ಲೆಕ್ಕ ಹಾಕುತ್ತ ಹೋಟೇಲ್ ಸೇರಿ ಹೊಟ್ಟೆ ಬಿರಿಯುವಷ್ಟು ತಿಂದು ತೇಗಿದೆ. ಇನ್ನೇನು ಎದ್ದು ಹೊರಡಬೇಕು ಎನ್ನುವಷ್ಟರಲ್ಲಿ ವೇಟರ್ ಬಂದು ಬಿಲ್ಲು ಕೊಟ್ಟ. ಅದನ್ನು ಕಂಡು ಕೆಂಡಾ ಮಂಡಲವಾದ ಈ ವ್ಯಕ್ತಿ ಹೊರಗಡೆ ಏನೆಂದು ಬೋರ್ಡು ಹಾಕಿದ್ದೀರಿ? ನಾನು ತಿಂದ ಆಹಾರದ ಬಿಲ್ಲನ್ನು ನನ್ನ ಮೊಮ್ಮಕ್ಕಳಿಂದ ವಸೂಲಿ ಮಾಡಲಾಗುತ್ತದೆ ಎಂದು ಹೇಳಿದ್ದೀರಿ ತಾನೆ? ಅಂದ ಮೇಲೆ ಈ ಬಿಲ್ಲನ್ನು ಮುಂದೆ ನನ್ನ ಮೊಮ್ಮಕ್ಕಳಿಗೆ ನೀಡಿ ಎಂದನು. ಇದೆಲ್ಲವನ್ನು ಶಾಂತವಾಗಿ ಕೇಳಿಸಿಕೊಂಡ ವೇಟರ್ ಇದು ನೀವು ತಿಂದ ಬಿಲ್ ಅಲ್ಲಾ ಸರ್ ಅದನ್ನು ನಾವು ತಮ್ಮ ಮೊಮ್ಮಕ್ಕಳಿಂದಲೇ ಪಡೆಯುತ್ತೇವೆ. ಆದರೆ ಈ ಬಿಲ್ ನಿಮ್ಮ ಅಜ್ಜ ನಮ್ಮ ಹೋಟೇಲ್‌ನಲ್ಲಿ ತಿಂದು ಹೋಗಿದ್ದು ನಮ್ಮ ಹೋಟೇಲ್ ಯೋಜನೆಯಂತೆ ನಿಮ್ಮ ಅಜ್ಜ ತಿಂದು ಹೋದ ಆಹಾರದ ಬಿಲ್ಲನ್ನು ಅವರ ಮೊಮ್ಮಗನಾದ ತಮ್ಮಿಂದ ವಸೂಲಿ ಮಾಡುತ್ತಿದ್ದೇವೆ ಅಷ್ಟೆ ಎಂದು ಹೇಳಿದ. ಈ ಮಾತನ್ನು ಕೇಳಿ ಹೊಟ್ಟೆ ಬಿರಿಯುವ ಹಾಗೆ ತಿಂದು ತೇಗಿದ್ದ ಆ ವ್ಯಕ್ತಿ ಕಂಗಾಲಾಗಿ ಹೋದನು. ಈ ಉಚಿತ ಘೋಷಣೆ ಮಾಡುವ ವಮಹ್ಮಾರ ಕಥೆಯೂ ಇದಕ್ಕೆ ಹೊರತಾಗಿಲ್ಲ ಬಿಡಿ. ಇಂದು ಉಚಿತ ನಾಳೆ ಶೋಷಣೆ ಖಚಿತ ಎನ್ನುವುದನ್ನು ಇದು ತಿಳಿಸುತ್ತದೆ.
ಜನಪ್ರೀಯ ಯೋಜನೆಗಳು ಎನ್ನುವ ಹೆಸರಿನಲ್ಲಿ ಬರುವಂತ ಈ ಉಚಿತ ಕಾರ್ಯಕ್ರಮಗಳಿಂದ ಮತ ಪಡೆಯಬಹುದೇ ಹೊರತು ಈ ದೇಶದಲ್ಲಿ ಅಭಿವೃದ್ಧಿಯನ್ನು ನೀರೀಕ್ಷಿಸಲು ಸಾಧ್ಯವಿಲ್ಲ. ಉಚಿತ ಘೋಷಣೆಗಳಿಂದ ಸಮಸ್ಯೆಗಳು ಸೃಷ್ಠಿಯಾಗುತ್ತವೆಯೇ ಹೊರತು ಬದಲಾವಣೆ ಮಾತ್ರ ಶೂನ್ಯವಾಗುತ್ತದೆ. ಇದನ್ನು ಮೊದಲೇ ಅರಿತುಕೊಂಡ ಭಾರತದ ಅರ್ಥಶಾಸ್ತ್ರದ ಭೀಷ್ಮ ‘ಚಾಣಕ್ಯ’ “ಒಂದು ದೇಶದ ಪ್ರಜೆಗಳಿಗೆ ಕಷ್ಟವನ್ನು ಪಡದೆ ಎಲ್ಲವೂ ಸಿಗುವಂತಾದರೆ ಆ ದೇಶ ಕೆಲವೇ ವರ್ಷಗಳಲ್ಲಿ ಸೋಮಾರಿಗಳ ತವರುಮನೆಯಾಗುತ್ತದೆ ಅಥವಾ ಅಲ್ಲಿ ದಂಗೆಗಳು ಶುರುವಾಗುತ್ತವೆ. ದೇಶ ವಿನಾಶದಂಚಿಗೆ ಬಂದು ತಲುಪುತ್ತದೆ” ಎಂದು ಅಂದೇ ಹೇಳಿ ಬಿಟ್ಟಿದ್ದಾರೆ. ಆದರೆ ಇದ್ಯಾವುದನ್ನು ಅರಿಯದ ಜಾಣ ಪೆದ್ದರಂತೆ ವರ್ತಿಸುವ ನಮ್ಮ ನಾಯಕರುಗಳು ಚುನಾವಣಾ ಪ್ರನಾಳಿಕೆಯಲ್ಲಿ ಉಚಿತ ವಿಚಾರಗಳನ್ನೇ ಸೇರಿಸಿ ಖಚಿತ ನಾಶಕ್ಕೆ ಮುಹೂರ್ತ ಸಿದ್ಧಪಡಿಸುವ ಕಾರ್ಯ ಮಾಡುತ್ತಾರೆ. ದೆಹಲಿಯಲ್ಲಿ ಆಪ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಕೇಜ್ರಿವಾಲಾ ಅವರು ಅನೇಕ ಉಚಿತ ಯೋಜನೆಗಳನ್ನು ಜಾರಿಗೆ ತೆಗೆದುಕೊಂಡು ಬಂದಿದ್ದಾರೆ. ಅದರಿಂದ ಬಡವರಿಗೆ ಅನುಕೂಲವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಅರ್ಥಶಾಸ್ತ್ರಜ್ಞರ ಲೆಕ್ಕಾಚಾರದಂತೆ ಉಚಿತ ಯೋಜನೆಗಳಿಂದ ಆ ಕ್ಷಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತದೆ. ಆದರೆ ಅದರಿಂದ ಆರ್ಥಿಕ ಕ್ಷೇತ್ರದ ಮೇಲಾಗುವ ಪರಿಣಾಮ ಸೂದೀರ್ಘವಾಗಿರುತ್ತದೆ. ಕೆಲವೊಮ್ಮೆ ಅದನ್ನು ಸುಧಾರಿಸುವುದಕ್ಕೂ ನಮ್ಮಿಂದ ಸಾಧ್ಯವಾಗದೇ ದೇಶವೇ ದಿವಾಳಿಯಾಗುವ ಮಟ್ಟ ತಲುಪುತ್ತದೆ. ಆದರೆ ಅಧಿಕಾರ ಉಳಿಸಿಕೊಳ್ಳುವುದಕ್ಕೆ ಬೇರೆ ಮಾರ್ಗವೇ ಇಲ್ಲ ಎಂದುಕೊಂಡಿರುವಾಗ ಮುಂದಾಗುವ ಗಂಭೀರ ಪರಿಣಾಮದ ಕುರಿತು ಇವರೆಲ್ಲ ಇಂದೇ ಏಕೆ ವಿಚಾರ ಮಾಡುತ್ತಾರೆ ಹೇಳಿ? ಹೀಗಾಗಿಯೇ ಚುನಾವಣೆ ವೇಳೆಯಲ್ಲಿ ಉಚಿತ ಘೋಷಣೆಗಳನ್ನು ಮಾಡುತ್ತ ಅಬ್ಬರಿಸುತ್ತಾರೆ. ಇದು ಕೇವಲ ಕೇಜ್ರಿವಾಲಾ ಅವರ ವಿಚಾರವಲ್ಲ ಬದಲಿಗೆ ಎಲ್ಲ ರಾಜಕೀಯ ನಾಯಕರುಗಳ ಲೆಕ್ಕಾಚಾರವೇ ಹೀಗೆ ಇರುತ್ತದೆ. ಒಬ್ಬರಿಗಿಂತ ಒಬ್ಬರು ಜನಪ್ರೀಯ ಯೋಜನೆಗಳ ಹೆಸರಲ್ಲಿ ಅವೈಜ್ಞಾನಿಕ ಮತ್ತು ಅತಾರ್ಕಿಕ ಲೆಕ್ಕಾಚಾರದ ಯೋಜನೆಗಳನ್ನು ಘೋಷಿಸಿ ಭವಿಷ್ಯದಲ್ಲಿ ದೇಶವನ್ನು ಸಂಕಷ್ಟಕ್ಕೆ ಎಡೆ ಮಾಡುತ್ತಾರೆ.
ಇದಕ್ಕೆ ಒಂದು ದೇಶದ ಉದಾಹರಣೆಯನ್ನು ನೀಡಬಹುದು. ಅದೊಂದು ರಾಷ್ಟ್ರದಲ್ಲಿ ಅಪಾರವಾದ ನೈಸರ್ಗಿಕ ಸಂಪತ್ತಿತ್ತು. ನದಿಗಳು ತುಂಬಿ ಹರಿಯುತ್ತಿದ್ದವು. ಪೆಟ್ರೋಲಿಯಂ ನಿಕ್ಷೇಪಗಳಿಂದ ಸಾವಿರಾರು ಕೋಟಿ ರೂಪಾಯಿಗಳ ಆದಾಯ ದೇಶಕ್ಕೆ ದೊರೆಯುತ್ತಿತ್ತು. ಜಗತ್ತಿನ ಹಿರಿಯಣ್ಣ ಎಂದು ಕರೆಸಿಕೊಳ್ಳುವ ಅಮೇರಿಕಾಗೆ ಸೆಡ್ಡು ಹೊಡೆದು ವಿಶ್ವ ಸಂಸ್ಥೆಯಲ್ಲಿ ಆ ದೇಶದ ಅಧ್ಯಕ್ಷನನ್ನು ಡೆವಿಲ್ ಎಂದು ಸಂಬೋಧಿಸುವ ಮಟ್ಟಕ್ಕೆ ಆ ದೇಶ ಇತ್ತು ಎಂದರೆ ನೀವದನ್ನು ಒಪ್ಪೊಕೊಳ್ಳಲೇ ಬೇಕು. ಏಕೆಂದರೆ ಆ ದೇಶ ಅಷ್ಟೊಂದು ಶ್ರೀಮಂತವಾಗಿತ್ತು. ಆದರೆ ಪ್ರಸ್ತುತ ಆ ರಾಷ್ಟ್ರ ಅಕ್ಷರಶಃ ಭಿಕ್ಷುಕರ ನಾಡಾಗಿ ಹೋಗಿದೆ. ಹಣಕ್ಕಾಗಿ ಜನ ಹಾತೊರೆಯುತ್ತಿದ್ದಾರೆ. ತುತ್ತು ಅನ್ನಕ್ಕಾಗಿ ಮೈಮಾರಿಕೊಳ್ಳುತ್ತಿದ್ದಾರೆ. ಸಿರಿವಂತರಂತೆ ಕಂಡ ಜನರನ್ನು ಎಲ್ಲೆಂದರಲ್ಲಿ ಕೊಲ್ಲುತ್ತಿದ್ದಾರೆ. ಹಸಿವಿನಿಂದ ಕಂಗಾಲಾದ ಆ ದೇಶದ ಪ್ರಜೆಗಳು ಇಂದು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡು ರೌವರವ ನರಕ ಅನುಭವಿಸುತ್ತಿದ್ದಾರೆ. ಅಂಥ ದಯನೇಶಿ ಸ್ಥಿತಿಯಲ್ಲಿರುವ ರಾಷ್ಟ್ರದ ಹೆಸರು ವೆನಿಜುವೆಲಾ. ಇಷ್ಟೆಲ್ಲ ಶ್ರೀಮಂತವಾಗಿದ್ದ ರಾಷ್ಟ್ರ ಇಂದು ಭಿಕ್ಷೆ ಬೇಡುವಂತ ಸ್ಥಿತಿಗೆ ತಲುಪುವುದಕ್ಕೆ ಕಾರಣವಾಗಿದ್ದೇನು? ಎನ್ನುವುದನ್ನು ಅವಲೋಕಿಸಿದರೆ ಮುಂದೆ ನಮ್ಮವರು ಅದೇ ನಿಲುವನ್ನು ತಳೆದರೆ ಏನಾಗಬಹುದು ಎನ್ನುವುದರ ಸ್ಪಷ್ಟ ಚಿತ್ರಣ ದೊರೆಯುತ್ತದೆ. 1998 ರಲ್ಲಿ ವೆನಿಜುವೆಲಾದ ಅಧಿಕಾರದ ಚುಕ್ಕಾಣಿ ಹಿಡಿದ ಹ್ಯೂಗೊ ಚಾವೇಸ್ ಎನ್ನುವ ಮಹಾತ್ವಾಕಾಂಕ್ಷವುಳ್ಳ ವ್ಯಕ್ತಿ ತನ್ನ ಸಮಾಜವಾದ ಧೋರಣೆಗಳಿಂದ ಅಧಿಕಾರ ನಡೆಸಿದ. ತನ್ನ ಮೊದಲ 5 ವರ್ಷಗಳ ಅಧಿಕಾರಾವಧಿಯಲ್ಲಿ ಜನರ ಕಾರ್ಯಗಳಿಂದ ಆ ದೇಶವನ್ನು ಆರ್ಥಿಕವಾಗಿ ಸಬಲವಾಗಿಸುವಲ್ಲಿ ಯಶಸ್ವಿಯಾದ. 2004 ರಲ್ಲಿ ಚುನಾವಣೆಗಳು ಘೋಷಣೆಯಾಗುತ್ತಲೇ ಅಧಿಕಾರವನ್ನುಳಿಸಿಕೊಳ್ಳುವ ಉದ್ಧೇಶದಿಂದ ಉಚಿತ ಯೋಜನೆಗಳ ಮೊರೆ ಹೋದ ಚಾವೇಸ್ ಇಡೀ ವೆನಿಜುವೆಲಾ ರಾಷ್ಟ್ರವನ್ನು ಅಕ್ಷರಶಃ ಬರಬಾದ ಮಾಡಿಬಿಟ್ಟನು. ಜನರಿಗೆ ಅವಶ್ಯಕವಾಗಿರುವ ಎಲ್ಲ ವಸ್ತುಗಳನ್ನು ಸರ್ಕಾರವೇ ನೀಡುತ್ತದೆ ಎಂದು ಘೋಷಿಸಿದನು. ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಘೋಷಣೆ ಮಾಡಿದನು. ಆಗ ಕೆಲಸ ಕೇಳಿಕೊಂಡು ಬರುವ ಯುವಕರ ಸಂಖ್ಯೆಯೇ ಕಡಿಮೆಯಾಯಿತು. ಸರ್ಕಾರ ನೀಡುವ ಹಣದಲ್ಲಿ ವಸ್ತುಗಳನ್ನು ಖರಿದಿಸಲು ಸಾಧ್ಯವಾಗುತ್ತಿಲ್ಲ ಎಂದಾಗ ಚಾವೇಸ್ ಯಾವುದೇ ವಸ್ತುಗಳ ಬೆಲೆ ಏರಿಸದಂತೆ ಕಾನೂನು ಮಾಡಿದನು. ಇದರಿಂದ ಆಹಾರ ಉತ್ಪಾದನೆ ಮಾಡುತ್ತಿದ್ದ ಕಂಪನಿಗಳು ಆ ದೇಶದಿಂದ ಕಾಲ್ಕಿತ್ತವು. ಉತ್ಪಾದನಾ ಕ್ಷೇತ್ರ ನುಜ್ಜುಗುಜ್ಜಾಯಿತು. ಆದಾಗಲೇ ಜನರು ಕೆಲಸ ಮಾಡುವುದನ್ನು ನಿಲ್ಲಿಸಿದ್ದರು. ಸರ್ಕಾರದ ಭತ್ಯೆಯಲ್ಲಿಯೇ ಬದುಕು ಮಾಡಲು ಪ್ರಾರಂಭಿಸಿದ್ದರು. ತೈಲೋತ್ಪಾನೆ ಹೆಚ್ಚು ಮಾಡಿ ಸಮಸ್ಯೆ ಸರಿದೂಗಿಸಲು ಮುಂದಾದ ಸರ್ಕಾರ 2007-08 ರಲ್ಲಿ ಜಾಗತಿಕವಾಗಿ ತೈಲಬೆಲೆ ಕುಸಿತದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಆದರೂ ತನ್ನ ಉಚಿತ ಯೋಜನೆಯ ವಿಚಾರವನ್ನು ಕೈಬಿಡಲು ಮನಸ್ಸು ಮಾಡಲಿಲ್ಲ. ಇಂಥ ಯೋಜನೆಗಳ ಹಣೆ ಬರಹವೇ ಹಿಗಿದೆ. ಯೋಜನೆಗಳನ್ನು ಜಾರಿಗೊಳಿಸಬಹುದೇ ಹೊರತು ಅದನ್ನು ಮರಳಿ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಒಂದು ವೇಳೆ ಮರಳಿ ಪಡೆದುಕೊಂಡರೆ ಆ ಸರ್ಕಾರ ಅಧಿಕಾರದಲ್ಲಿಯೇ ಇರುವುದಿಲ್ಲ. ಹೀಗಾಗಿಯೆ ಆರ್ಥಿಕ ಮುಗ್ಗಟ್ಟಿನ ಮಧ್ಯದಲ್ಲಿ ಉಚಿತ ಯೋಜನೆಗಳನ್ನು ನೀಡುತ್ತಲೇ ಚಾವೇಸ್ ಸರ್ಕಾರ ದೇಶದ ಆರ್ಥಿಕ ಸ್ಥಿತಿಯನ್ನು ಪಾತಾಳಕ್ಕೆ ಕುಸಿಯುವಂತೆ ಮಾಡಿ ಬಿಟ್ಟನು. ಇದರ ಮಧ್ಯದಲ್ಲಿ ಚಾವೇಸ್ ನಿಧನ ಹೊಂದಿದನು. ಮುಂದೆ ಅಧಿಕಾರಕ್ಕೆ ಬಂದ ನಿಕೋಲಸ್ ಮಡುರೋ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ವೆನಿಜುವೆಲಾದ ಕರೆನ್ಸಿ ವ್ಯವಸ್ಥೆಗೆ ಕೈ ಇಟ್ಟು ಹೆಚ್ಚು ಹೆಚ್ಚು ಹಣವನ್ನು ಮುದ್ರಣ ಮಾಡಿ ಜನರ ಕೈ ಸೇರುವಂತೆ ಮಾಡಿದನು. ಪರಿಣಾಮ ಹಣದುಬ್ಬರ ಉಂಟಾಗಿ ಇಡೀ ದೇಶದ ಅರ್ಥ ವ್ಯವಸ್ಥೆ ಸಮಾಧಿಯಾಗಿ, ಜನರ ಬದುಕು ಬೀದಿ ಪಾಲಾಯಿತು. ಅದು ಎಷ್ಟರ ಮಟ್ಟಿಗೆ ಎಂದರೆ ಇಂದು ವೆನಿಸಜುವೆಲಾ ರಾಷ್ಟ್ರಕ್ಕೆ ಯಾರೂ ಪ್ರವಾಸಕ್ಕೆ ತೆರಳಬಾರದು ಎಂದು ಹಲವು ರಾಷ್ಟ್ರಗಳು ತಮ್ಮ ರಾಷ್ಟ್ರದ ಪ್ರಜೆಗಳಿಗೆ ತಿಳಿಸುತ್ತಿದ್ದಾರೆ. ಒಂದು ಕಾಲದಲ್ಲಿ ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಮೆರೆಯುತ್ತಲಿದ್ದ ರಾಷ್ಟ್ರ ಇಂದು ಅಕ್ಷರಶಃ ದಿವಾಳಿಯಾಗಿ ಹೀನಾಯ ಸ್ಥಿತಿಯಲ್ಲಿ ಬದುಕು ಮಾಡುತ್ತಿದೆ. ಇದಕ್ಕೆಲ್ಲ ಕಾರಣವಾಗಿದ್ದೇನು? ಬೇರೆನು ಅಲ್ಲ ಜನಪ್ರೀಯ ಯೋಜನೆಗಳ ಹೆಸರಲ್ಲಿ ಎಲ್ಲವನ್ನು ಉಚಿತವಾಗಿ ನೀಡುವುದಕ್ಕೆ ಮುಂದಾಗಿದ್ದು.
ವೆನಿಸಜುವೆಲಾ ರಾಷ್ಟ್ರದ ಉದಾಹರಣೆ ಕಣ್ಣಮುಂದಿದ್ದರು ಕೂಡ ನಮ್ಮ ದೇಶದ ಹಲವು ಜನ ನಾಯಕರಿಗೆ ಇನ್ನೂ ಬುದ್ದಿ ಬರುತ್ತಿಲ್ಲ. ಮಾತೆತ್ತಿದರೆ ಅಧಿಕಾರಕ್ಕೆ ಬರಲು ಉಚಿತ ಯೋಜನೆಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ನಮ್ಮ ದೇಶವು ಎಲ್ಲಿ ವೆನಿಜುವೆಲಾದ ದಾರಿ ಹಿಡಿಯುತ್ತದೆಯೇ ಎನ್ನುವ ಭಯ ನಮ್ಮನ್ನು ಕಾಡದೇ ಇರಲಾರದು. ಪ್ರತಿಯೊಬ್ಬ ಭಾರತೀಯನ ಅಕೌಂಟಿಗೆ ಇಷ್ಟು ಸಾವಿರ ಹಣ ಹಾಕುತ್ತೇವೆ ಎನ್ನುವ ಇವರು ಆರ್ಥಿಕ ವ್ಯವಸ್ಥೆಯ ಹೆಣ ಎತ್ತುತ್ತಾರೆ ಎನ್ನುವುದನ್ನು ಮರೆತಿದ್ದಾರೆ. ಸಾಲ ಮನ್ನಾ ಮಾಡುವ ಘೋಷಣೆ ಮಾಡುವ ಇವರು ಆ ಸಾಲವನ್ನು ತೀರಿಸುವುದಕ್ಕೆ ಬೇರೆ ಮಾರ್ಗದಲ್ಲಿ ಸಾಲ ಮಾಡುತ್ತಾರೆ. ಇದು ಜನ ಸಾಮಾನ್ಯನಿಗೆ ಎಲ್ಲಿ ಅರ್ಥವಾಗಬೇಕು ಹೇಳಿ? ಅವನದೋ ತನಗೆ ಉಚಿತವಾಗಿ ಯಾರು ಏನು ನೀಡುತ್ತಾರೋ ಅದನ್ನು ಸ್ವೀಕಾರ ಮಾಡಿ ಅದನ್ನು ನೀಡಿದ ಪಕ್ಷದ ಪರವಾಗಿ ಹಾಡಿ ಹೊಗಳುವುದಷ್ಟೆ. ಇಂದು ಅವರು ಉಚಿತವಾಗಿ ನೀಡುವ ಪ್ರತಿಯೊಂದು ಯೋಜನೆಗೂ ಮುಂದೊಂದು ದಿನ ಭಾರಿ ಬೆಲೆ ತೆರಬೇಕಾಗುತ್ತದೆ ಎನ್ನುವುದು ಪಾಪ ಅವನಿಗೆ ಗೊತ್ತಿಲ್ಲ. ಅದಕ್ಕೆ ಸರ್ಕಾರ ನೀಡುವ ಎಲ್ಲ ಭಾಗ್ಯಗಳನ್ನು ಪಡೆದುಕೊಂಡು ಮುಂದೆ ದಿವಾಳಿ ಭಾಗ್ಯಕ್ಕೆ ಅರ್ಹತೆ ಪಡೆದುಕೊಳ್ಳುತ್ತಾನೆ. ಈಗ ಗುಜರಾತ ಚುನಾವಣೆ ಘೊಷಣೆಯಾಗಿದೆ. ಪ್ರತಿಬಾರಿ ಅಲ್ಲಿ ಕೇವಲ ಭಾಜಪ ಮತ್ತು ಕಾಂಗ್ರೇಸ್ ಮಾತ್ರ ಅಖಾಡಾದಲ್ಲಿ ಇರುತ್ತಿದ್ದವು. ಈ ಬಾರಿ ದೆಹಲಿ ಹಾಗೂ ಪಂಜಾಬ್‌ನಲ್ಲಿ ಪಡೆದ ಯಾಶಸ್ಸಿನಿಂದ ಉತ್ಸಾಹವನ್ನು ನೂರ್ಮಡಿಗೊಳಿಸಿಕೊಂಡಿರುವ ಆಪ್ ಗುಜರಾತಿನಲ್ಲಿ ಅಧಿಕಾರದ ಚಿಕ್ಕಾಣಿ ಹಿಡಯುವ ಲೆಕ್ಕಾಚಾರ ಹಾಕುತ್ತಿದೆ. ಅದಕ್ಕಾಗಿ ಅವರು ದೆಹಲಿ ಮಾದರಿಯಲ್ಲಿ ವಿದ್ಯೂತ್ ಉಚಿತ, ಮಹಿಳೆಯರಿಗೆ ಒಂದು ಸಾವಿರ ರೂಪಾಯಿಗಳ ಪ್ರೋತ್ಸಾಹ ಧನ, ನಿರುದ್ಯೋಗ ಭತ್ಯೆ ನೀಡುವುದಾಗಿ ಘೋಷಣೆ ಮಾಡಿದೆ. ಅದಾಗಲೇ ದೆಹಲಿಯಲ್ಲಿ ಈ ಯೋಜನೆಗಳನ್ನು ಜಾರಿಗೊಳಿಸಿದೆ. ಅದರ ಪರಿಣಾಮವಾಗಿ ವಿದ್ಯೂತ್ ಕಂಪನಿಗಳು ನಷ್ಟ ಅನುಭವಿಸುತ್ತಿವೆ. ಮುಂದೆ ಗುಜರಾತನಲ್ಲಿ ಏನಾಗಬಹುದು ಆಲೋಚಿಸಿ. ಇನ್ನು ಆಪ್ ಘೋಷಣೆ ಕೇಳಿದ ಭಾಜಾಪ ಹಾಗೂ ಕಾಂಗ್ರೇಸ್ ಪಕ್ಷಗಳು ಸಹ ಅದರ ರೀತಿಯಲ್ಲಿ ವಿಚಾರ ಮಾಡುತ್ತಿವೆ. ಇಲ್ಲಿ ಎಲ್ಲರದೂ ಅಧಿಕಾರ ಹಿಡಿಯುವ ಲೆಕ್ಕಾಚಾರವೇ ಹೊರತು ಮುಂದಾಗುವುದರ ಬಗ್ಗೆ ಯಾರೂ ಆಲೋಚನೆ ಮಾಡುತ್ತಿಲ್ಲ.
ನಮ್ಮ ಮನೆಯಲ್ಲಿ ಸಾಕಷ್ಟು ಮೀನಿದ್ದರೆ ನಮಗೆ ಬೇಕಾದಷ್ಟು ಉಳಿಸಿಕೊಂಡು ಉಳಿದಿದ್ದನ್ನು ಹಸಿದು ಬಂದವನಿಗೆ ನೀಡಬಹುದು. ಹಾಗೆಂದು ಆತ ದೀನಾಲು ಮೀನು ಕೇಳುವುದಕ್ಕೆ ನಮ್ಮ ಮನೆಗೆ ಬಂದರೆ ಎಷ್ಟು ದಿವಸ ಮೀನು ನೀಡುವುದಕ್ಕೆ ಸಾಧ್ಯವಾಗುತ್ತದೆ ಹೇಳಿ? ಒಂದು ಬಾರಿ ನಮ್ಮ ಮನೆಯಲ್ಲಿ ಮೀನೆ ಇಲ್ಲದೇ ಹೋದರೆ ಅವನಿಗೇನು ಕೊಡುತ್ತೀರಿ? ಅದಕ್ಕೆ ಹಸಿದು ಬಂದವನಿಗೆ ಮೀನು ನೀಡುವುದನ್ನು ಬಿಟ್ಟು ಮೀನು ಹಿಡಿಯುವುದನ್ನು ಕಲಿಸಿಕೊಡಬೇಕು. ಆಗ ತನಗೆ ಬೇಕಾದ ಮೀನನ್ನು ತಾನೇ ಹಿಡಿದು ತಿನ್ನುತ್ತಾನೆ. ಹಾಗೆ ನಿರುದ್ಯೋಗ ಭತ್ಯೆ ನೀಡಿ ನಿರುದ್ಯೋಗವನ್ನು ಪ್ರೋತ್ಸಾಹಿಸುವ ಬದಲು ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು, ಉದ್ಯೋಗ ಸೃಷ್ಠಿ ಮಾಡಿ, ನಿರುದ್ಯೋಗವನ್ನು ಹೋಗಲಾಡಿಸುವುದು ಉತ್ತಮವಲ್ಲವೇ? ಉಚಿತ ವಿದ್ಯೂತ್ ನೀಡುವ ಬದಲು ದುಡಿಯುವ ಕೈಗಳಿಗೆ ನೀಡುವ ವೇತನವನ್ನು ಹೆಚ್ಚಿಸಿದರೆ ಒಳಿತಲ್ಲವೇ? ರೈತನ ಸಾಲ ಮನ್ನಾ ಮಾಡುವ ಬದಲು ಆತನಿಗೆ ಬೇಕಾದ ಅಗತ್ಯವಾದ ಕೃಷಿ ವಸ್ತುಗಳನ್ನು ಕಡಿಮೆ ದರದಲ್ಲಿ ನೀಡಿ, ಅವನು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಒದಗಿಸುವುದು ಅವನ ಸಮಸ್ಯೆಗೆ ಸ್ಪಂದಿಸುವುದು ಉತ್ತಮವಲ್ಲವೇ? ಅದನ್ನು ಬಿಟ್ಟು ಎಲ್ಲವನ್ನು ಉಚಿತವಾಗಿ ನೀಡುತ್ತೇನೆ ಎನ್ನುತ್ತ ಸಾಗಿದರೆ ಅದಕ್ಕೆ ಅರ್ಥವೇ ಇರುವುದಿಲ್ಲ. ಅದೂ ಅಲ್ಲದೆ ಉಚಿತವಾಗಿ ನೀಡುವುದಕ್ಕೆ ಇವರೇನು ತಮ್ಮ ಮನೆಯಿಂದ ತಂದು ಹಾಕುತ್ತಾರಾ? ಅಥವಾ ತಾವೇ ದುಡಿದ ಹಣವನ್ನು ಖರ್ಚು ಮಾಡುತ್ತಾರಾ? ಖಂಡಿತ ಇಲ್ಲ. ಸಾರ್ವಜನಿಕರ ಹಣದಿಂದ ತಮ್ಮ ಸರ್ಕಾರದ ಅಧಿಕಾರ ಉಳಿಸಿಕೊಳ್ಳುವುದಕ್ಕೆ ಮುಂದಾಗುತ್ತಾರೆ. ಒಂದು ಬಾರಿ ಉಚಿತ ಎಂದು ಘೋಷಣೆ ಮಾಡಿದರೆ ಮುಂದೆ ಜನ ಅದನ್ನೇ ಬೇಕು ಎನ್ನುತ್ತಾರೆ. ಅಲ್ಲಿಗೆ ದೇಶ ದಿವಾಳಿಯಾದರೂ ಪರವಾಗಿಲ್ಲ ಹಾಕಿಕೊಟ್ಟ ಯೋಜನೆಗಳನ್ನು ಹಾಗೇ ಮುಂದುವರಿಸಿಕೊಂಡು ಹೋಗಬೇಕಾಗುತ್ತದೆ. ಇದು ದೇಶದ ಭವಿಷ್ಯದ ಮೇಲೆ ಕರಾಳ ಛಾಯೆ ಮುಸುಕುವಂತೆ ಮಾಡುತ್ತದೆ. ಇಂದು ನಮ್ಮವರು ಮಾಡಲು ಹೊರಟಿರುವ ತಪ್ಪನ್ನೆ ಅಂದು ವೆನಿಜುವೆಲಾ ಮಾಡಿ ಇಂದು ದಿವಾಳಿಯಾಗಿ ಹೋಗಿದೆ. ಇದು ಗೊತ್ತಿದ್ದು ನಮ್ಮ ದೇಶದ ನಾಯಕರುಗಳು ಇದನ್ನೇ ಮಾಡುವುದಕ್ಕೆ ಮುಂದಾದರೆ ಮುಂದೆ ನಮ್ಮ ದೇಶ ಏನಾಗಬಹುದು ಎನ್ನುವುದರ ಕುರಿತು ಅಲೋಚನೆ ಮಾಡಬೇಕಿದೆ. ಪಕ್ಷಕ್ಕೆ ಅಧಿಕಾರ ರಚನೆಯೇ ಮುಖ್ಯವಾದರೆ, ಜನಗಳಿಗೆ ಉಚಿತ ನೀಡುವುದೇ ಅವಶ್ಯಕವಾದರೆ, ರಾಜಕೀಯ ನಾಯಕರಿಗೆ ತಮ್ಮ ಅಧಿಕಾರ ಅಗತ್ಯವೆನಿಸಿದರೆ, ಆ ದೇಶದ ಅವನತಿ ಆರಂಭವಾದಂತೆಯೇ ಸರಿ. ಆದಾಯ ವೆಚ್ಚ ಸಮಾನಾಗಿದ್ದರೆ ಬದುಕು ಸಮನಾಗಿ ಸಾಗುತ್ತದೆ. ಆದಾಯ ಕಡಿಮೆಯಾಗಿ ವೆಚ್ಚ ಅಧಿಕಾವಾದಲ್ಲಿ ಕೊಂಚ ಸಮಸ್ಯೆಯಾಗುತ್ತದೆ. ಆದಯವೆ ಇಲ್ಲದೆ ವೆಚ್ಚ ಎನ್ನುವ ಮಟ್ಟಕ್ಕೆ ಬಂದರೆ ಅಲ್ಲಿ ವಿನಾಶ ಪ್ರಾರಂಭವಾಗುತ್ತದೆ. ಇದನ್ನು ಅರಿತುಕೊಂಡು ಉಚಿತ ಯೋಜನೆಗಳನ್ನು ಕೈ ಬಿಟ್ಟು ಉನ್ನತ ವಿಚಾರಗಳಿರುವ ಯೋಜನೆಗಳಿಗೆ ಸಿದ್ಧವಾದರೆ ನಿಜಕ್ಕೂ ಸಂಪದ್ಭರಿತ ದೇಶ ಮತ್ತಷ್ಟು ಸದೃಢವಾಗುತ್ತದೆ. ಇಲ್ಲದೇ ಹೋದಲ್ಲಿ ಮತ್ತೊಂದು ವೆನಿಸಜುವೆಲಾ ಆಗಲು ವೇದಿಕೆ ನಿರ್ಮಾಣವಾಗುತ್ತದೆ.
- * * * -