ಸೂರ್ಯನಾಗದಿದ್ದರೂ ಮನೆಯನ್ನು ಬೆಳಗುವ ದೀಪವಾಗೋಣ

ಬಾಳಿನ ಮರ್ಮ ಅರಿತವರಿಲ್ಲ. ಇದು ಹೀಗೆ ಎಂದು ಖಚಿತವಾಗಿ ನುಡಿಯುವವರು ಇಲ್ಲ. ಬಂದಂತೆ ಬದುಕುವದಷ್ಟೇ ನಾವು ಮಾಡಬಹುದಾದ ಕೆಲಸ. ಬಾಳನ್ನು ಹೀಗೇಯೇ ಬದುಕಬೇಕು ಎಂದಾಗಲಷ್ಟೇ ತೊಂದರೆಗಳು, ಆತಂಕಗಳು ಅಡ್ಡಿಯಾಗಿ ನಮ್ಮನ್ನು ಅಧೀರರನ್ನಾಗಿಸಿ ಹತಾಶಗೊಳಿಸುತ್ತವೆ. ಎಲ್ಲರೂ ಒಂದಲ್ಲ ಒಂದು ಕ್ಷಣದಲ್ಲಿ ಈ ಬಾಳನ್ನು ದೂರುತ್ತಾರೆ. ಹತಾಶರಾಗಿ ಕೈಚೆಲ್ಲುತ್ತಾರೆ. ಇಲ್ಲಸಲ್ಲದ ಅಪವಾದ ಬದುಕಿನ ಮೇಲೆ ಹೊರಿಸಿ ಆಕ್ರೋಶಗೊಳ್ಳುತ್ತಾರೆ. ಕುದಿಯುತ್ತಾರೆ, ಕೊರಗುತ್ತಾರೆ, ಬಾಳಿನಿಂದಲೇ ಎದ್ದು ಹೋಗುವ ನಿರ್ಧಾರಗೈಯುತ್ತಾರೆ. ಕಾರಣ ಬಾಳಿನ ಆಟದಲ್ಲಿ ಸೋತವರು ಮತ್ತೆ ಗೆಲ್ಲುವ ಹಠ ತೊಡುವುದಿಲ್ಲ. ಗೆದ್ದವರ ಕಂಡು ಕರಬುತ್ತಾರೆ. ಇನ್ನಿಲ್ಲದ ಕೊರತೆಗಳ ಪಟ್ಟಿಯನ್ನು ಮುಂದೊಡ್ಡಿ ಕರುಣೆ ಗಿಟ್ಟಿಸತೊಡಗುತ್ತಾರೆ. ಇಷ್ಟಪಟ್ಟ ದೇವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಕಷ್ಟದಲ್ಲಿ ನೆರವಾಗದ ಗೆಳೆಯರನ್ನು, ಬಂಧುಗಳನ್ನು ಹಿಯಾಳಿಸುತ್ತಾರೆ. ನನ್ನೀ ಸ್ಥಿತಿಗೆ ನಾನೇ ಕಾರಣ ಎಂಬ ಸತ್ಯ ಅವರಿಗೆ ಗೋಚರವಾಗುವುದಿಲ್ಲ. ನಮ್ಮ ಬದುಕನ್ನು ಯಾರೂ ಉದ್ಧರಿಸಲಾರರು ಹಾಗೂ ಹಾಳು ಮಾಡಲಾರರು ಎಂಬುದು ಅವರಿಗೆ ಮನನವಾಗುವುದಿಲ್ಲ. ನಮ್ಮ ಯಶಸ್ಸಿನ ಹಾದಿಯ ನಿರ್ಮಾಪಕರು, ಅವನತಿಯ ಸೂತ್ರಧಾರರು ನಾವೇ ಎಂಬುವುದನ್ನು ನೆನಪಿಸಿಕೊಳ್ಳುವುದಿಲ್ಲ. 

ಬಾಳನ್ನು ಸುಮ್ಮನೆ ಹಿಯಾಳಿಸಬೇಡ, ತೊಂದರೆಗಳು ಎದುರಾದಾಗ ನರಳುತ್ತಾ ಕೂರಬೇಡ. ನೀನು ಹಿಯಾಳಿಸಿದರೂ, ನೋವು ತಿಂದರೂ ಈ ಬಾಳನ್ನು ಬಾಳಲೇಬೇಕಲ್ಲವೇ? ಬಾಳಿನ ಆಟದಲ್ಲಿ ನೀನು ಪಾಲ್ಗೊಳ್ಳಲೇಬೇಕು. ಅದೆಂದಿಗೂ ನಿನ್ನ ಬಿಟ್ಟಿದ್ದಲ್ಲ. ಈ ಆಟದ ಸೂತ್ರಧಾರನು ಸೃಷ್ಟಿಕರ್ತನಾದ ಬ್ರಹ್ಮ. ಅವನು ಆಡಿಸಿದಂತೆ ನೀನು ಆಡಲೇಬೇಕು. ಅತ್ಯಂತ ಖುಷಿಯಿಂದ ಬಾಳಿನಾಟದಲ್ಲಿ ಪಾಲಗೊಳ್ಳು, ಹಿಂಜರಿಕೆ ಬೇಡ. ಈ ಜಗ್ಗತ್ತೇ ಒಂದು ನಾಟಕರಂಗ, ನಾವೆಲ್ಲ ಅದರಲ್ಲಿ ಪಾತ್ರಧಾರಿಗಳು. ಸೂತ್ರಧಾರ ಮೇಲಿದ್ದಾನೆ ಅವನಾಡಿಸಿದಂತೆ ಆಡುವದಷ್ಟೇ ನಮ್ಮ ಕೆಲಸ. ಸೂತ್ರ ಹರಿದಾಗ ಆಟದ ಅಂತ್ಯ. ಈ ಸತ್ಯದ ಅರಿವು ನಮಗಿರಬೇಕು. ವಿನಾಕಾರಣ ಬದುಕಿನ ಬಗ್ಗೆ ಹಿಯಾಳಿಸುವದಾಗಲಿ, ದೂಷಿಸುವದಾಗಲಿ ಮಾಡಬಾರದು. ಅವನು ಕೊಟ್ಟ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಬೇಕು. ಡಿ.ವಿ.ಜಿ. ಅವರು ಹೇಳುವಂತೆ ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ. ಮದುವೆಗೋ ಮಸಣಕೋ ಅವನು ಪೇಳ್ದಂತೆ ನಡೆಯುವುದು ನಮ್ಮ ಧರ್ಮ.  

ಬದುಕು ದೇವರು ಕೊಟ್ಟ ದೇಣಿಗೆ ಅದನ್ನು ವೃಥಾ ಕೊರಗುತ್ತಾ ಹಾಳು ಮಾಡಿಕೊಳ್ಳಬೇಡಿ. ಬದುಕಿರುವಷ್ಟು ಕಾಲ ಎಲ್ಲರಿಗೂ ಬೇಕಾಗಿ ಬದುಕಿ. ನಿಮ್ಮ ಕೈಯಲ್ಲಿ ಸಾಧ್ಯವಾದರೆ ಇತರರ ದುಃಖಗಳಿಗೆ ಸಾಥ್ ನೀಡಿ. ಅವರ ನಗುವಿಗೆ ಕಾರಣರಾಗಿ. ಜಗತ್ತಿಗೇ ಬೆಳಕ ನೀಡುವ ಸೂರ್ಯನಾಗದಿದ್ದರೂ, ಒಂದು ಮನೆಯನ್ನು ಬೆಳಗುವ ದೀಪವಾಗಲು ನಮ್ಮಿಂದ ಸಾಧ್ಯವಿದೆ ಎಂಬುದನ್ನು ಮರೆಯದಿರಿ. ನಿಮ್ಮ ನಂತರವೂ ಜನ ನಿಮ್ಮ ಹೆಸರನ್ನು ಸ್ಮರಿಸಿಕೊಳ್ಳಬೇಕೆಂದರೆ ಸಮಾಜಕ್ಕೆ ಒಳ್ಳೆಯದನ್ನು ಮಾಡಿ ಹೋಗಬೇಕು.  ಇದನ್ನೆಲ್ಲ ಅರ್ಥ ಮಾಡಿಕೊಳ್ಳುವವರು ನಿಜವಾದ ಜಾಣರಾಗುತ್ತಾರೆ. 

- * * * -