ಮಂಡ್ಯ, ಹಾಸನ ಆಸ್ಪತ್ರೆಗಳಲ್ಲಿ ಕೊರೊನ ವೈರಸ್ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ಸ್ಥಾಪನೆ

ಮಂಡ್ಯ / ಹಾಸನ, ಫೆ 4, ಕರೋನವೈರಸ್ ಸೋಂಕು ಪೀಡಿತರ ಚಿಕಿತ್ಸೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಡ್ಯ ವೈದ್ಯಕೀಯ ವಿದ್ಯಾಲಯ ಆಸ್ಪತ್ರೆ (ಮಿಮ್ಸ್)ಯಲ್ಲಿ ಐದು ಹಾಸಿಗೆಗಳ ಪ್ರತ್ಯೇಕ ವಾರ್ಡ್ ತೆರೆದಿದೆ.ವಾರ್ಡ್‍ನಲ್ಲಿ ಉಸಿರಾಟ ತೊಂದರೆಗಾಗಿ ವೆಂಟಿಲೇಟರ್ ಗಳು ಸೇರಿದಂತೆ ಇತರ ಚಿಕಿತ್ಸಾ ಉಪಕರಣಗಳು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಒದಗಿಸಲಾಗಿದೆ. ರೋಗಿಗಳು ಆಸ್ಪತ್ರೆಗೆ ದಾಖಲಾದರೆ ವೈದ್ಯರು ದಿನದ 24 ಗಂಟೆ ಚಿಕಿತ್ಸೆಗೆ ಹಾಜರಿರುತ್ತಾರೆ ಎಂದು ಮಿಮ್ಸ್ ವೈದ್ಯಕೀಯ ಅಧೀಕ್ಷಕ ಎಂ.ಆರ್.ಹರೀಶ್ ಮಂಗಳವಾರ ತಿಳಿಸಿದ್ದಾರೆ. 

ಫೆ 7 ರಂದು ವಿಮ್ಸ್ ನಲ್ಲಿ ಕೊರೊನ ವೈರಸ್ ಗೆ ಚಿಕಿತ್ಸೆ ನೀಡಲು ಮತ್ತು ಸೋಂಕು ತಡೆಯಲು  ವೈದ್ಯರಿಗಾಗಿ ವಿಶೇಷ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಕೊರೊನಾವೈರಸ್ ಕುರಿತು ಸಾಮಾನ್ಯ ಜನರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಸಹ ಜಿಲ್ಲೆಯಲ್ಲಿ ಆಯೋಜಿಸಲಾಗಿದೆ ಎಂದು ಹರೀಶ್ ಹೇಳಿದ್ದಾರೆ.ಈ ಮಧ್ಯೆ, ಹಾಸನ ಜಿಲ್ಲೆಯಲ್ಲೂ ಕೊರೊನವೈರಸ್ ಸೋಂಕಿನ ಪ್ರಕರಣಗಳನ್ನು ನಿಭಾಯಿಸಿ, ಸೂಕ್ತ ಚಿಕಿತ್ಸೆ ನೀಡಲು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧತೆಗಳನ್ನು ಮಾಡಿದೆ.  ಜಿಲ್ಲೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ತಲಾ ಒಂದು ಪ್ರತ್ಯೇಕ ವಾರ್ಡ್ ಕಾಯ್ದಿರಿಸಲಾಗಿದೆ ಎಂದು ಮಂಗಳವಾರ ಹೇಳಿಕೆ ತಿಳಿಸಿದೆ. 

ತೀವ್ರ ಜ್ವರ, ಕೆಮ್ಮು, ಶೀತ ಮತ್ತು ಉಸಿರಾಟದ ತೊಂದರೆಗಳು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವಂತೆ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಪ್ರಕರಣಗಳನ್ನು ನಿರ್ವಹಿಸಲು ಜಿಲ್ಲಾ ಕಣ್ಗಾವಲು ಅಧಿಕಾರಿ ಹಿರಣಯ್ಯ ನೇತೃತ್ವದಲ್ಲಿ ವೈದ್ಯರ ತಂಡ ರಚಿಸಲಾಗಿದೆ.ಸೋಂಕು ಹರಡುವುದನ್ನು ತಡೆಯಲು ಕೋಳಿ ಮತ್ತು ಇತರ ಪ್ರಾಣಿ ಸಾಕಣೆ ಕೇಂದ್ರಗಳಿಗೆ ಭೇಟಿ ನೀಡದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.