ಕಾರವಾರ 10: ಕಾರವಾರ ಎಜ್ಯುಕೇಶನ್ ಸೊಸೈಟಿಯ ‘ಬಾಲಮಂದಿರ ಪ್ರೌಢಶಾಲೆಗೆ’ ಉ.ಕ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಶ್ರೀ ಈಶ್ವರ ಕಾಂದೂ ರವರು ಭೇಟಿ ನೀಡಿ, ಶಾಲೆಯ ಕಲಿಕಾ ವಾತಾವರಣ, ಶಾಲಾ ಸುವ್ಯವಸ್ಥೆ ಹಾಗೂ ಶುಚಿತ್ವದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು, “ಶೃದ್ಧೆ ಜ್ಞಾನವನ್ನು ನೀಡಿದರೆ, ನಮ್ರತೆ ಗೌರವನ್ನು ನೀಡುತ್ತದೆ ಮತ್ತು ಯೋಗ್ಯತೆ ಸ್ಥಾನವನ್ನು ಕೊಡುತ್ತದೆ. ಯಾವ ವ್ಯಕ್ತಿ ಈ ಮೂರನ್ನು ಹೊಂದಿರುತ್ತಾನೋ ಅವನಿಗೆ ಎಲ್ಲಾ ಕಡೆಯೂ ಸನ್ಮಾನ ಸಿಗುತ್ತದೆ” ಎಂದು ನುಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಅನಿರುದ್ಧ ಹಳದಿಪುರ ಮಾತನಾಡಿ, “ಆಶಿಸಿದ ಗುರಿಯನ್ನು ಮುಟ್ಟಲು ಪ್ರೇರಣೆ, ಪ್ರೋತ್ಸಾಹ, ದೃಢತೆ, ಕಠಿಣ ಪರಿಶ್ರಮದ ಬೆವರು ಬೇಕಾಗುತ್ತದೆ. ಶೃದ್ಧೆ ಮತ್ತು ಬದ್ಧತೆಯಿಂದ ಅಡ್ಡ ಬರುವ ಬಂಡೆಯನ್ನು ಮೇಲೆರುವ ಮೆಟ್ಟಿಲನ್ನಾಗಿ ಪರಿವರ್ತಿಸಬಹುದು”. ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಪ್ರಸಕ್ತ ವರ್ಷ ನವದೆಹಲಿಯಲ್ಲಿ ನಡೆದ ಪ್ರಜಾರಾಜ್ಯೋತ್ಸವದಂದು ಜರುಗಿದ ಎನ್.ಸಿ.ಸಿ. ಪರೇಡನಲ್ಲಿ ಭಾಗವಹಿಸಿದ್ದ ಬಾಲಮಂದಿರ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಕು. ಸಾಹೀಲ್ ಎಸ್. ಲೊಲೇಕರ ಹಾಗೂ ಈಶ್ವರ ಕಾಂದೂ ರವರನ್ನು ಸನ್ಮಾನಿಸಲಾಯಿತು.
ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಜಿ.ಪಿ. ಕಾಮತ ಸ್ವಾಗತಿಸಿ, ಅತಿಥಿ ಪರಿಚಯ ಮಾಡಿದರು. ಹಿಂದೂ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಅರುಣ ರಾಣೆ, ಸುಮತಿದಾಮ್ಲೆ ಬಾಲಕಿಯರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಗಿರಿಜಾ ಎನ್. ಬಂಟ ಹಾಗೂ ಶಿಕ್ಷಕ ಸಂತೋಷ ಎಂ. ಶೇಟ್, ಶಾಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ವಂದನಾರೆ್ಣ ಸಲ್ಲಿಸಿದರು ಮತ್ತು ನಾಹಿದಾ ಎಂ. ಹನಗಿ ಕಾರ್ಯಕ್ರಮ ನಿರೂಪಿಸಿದರು.