ಲೋಕದರ್ಶನ ವರದಿ
ಬೆಳಗಾವಿ, 16: ಎಲ್ಲ ಶೋಷಿತ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಕಾಯಕ ಮತ್ತು ದಾಸೋಹದ ತಳಹದಿಯ ಮೇಲೆ ಬಸವಣ್ಣನವರು ಸ್ಥಾಪಿಸಿರುವ ಲಿಂಗಾಯತ ಧರ್ಮದ ಬಗ್ಗೆ ಶೋಷಿತ ಸಮುದಾಯಗಳು ಹೆಚ್ಚಿನ ಒಲವು ಹೊಂದಿವೆ ಎಂದು ಹಿರಿಯ ದಲಿತ ಮುಖಂಡ ರಮೇಶ ರಾಯಪ್ಪಗೋಳ ಹೇಳಿದ್ದಾರೆ.
ಬಸವ ಭೀಮ ಸೇನೆಯ ವತಿಯಿಂದ ಮಂಗಳವಾರದಂದು ನಗರದ ಶ್ರೀ ಬಸವೇಶ್ವರ ಉದ್ಯಾನದಲ್ಲಿ ಆಯೋಜಿಸಿದ್ದ ಬಸವ ಧರ್ಮ ಸಂಸ್ಥಾಪನಾ ದಿನ ಹಾಗೂ ಷಟಸ್ಥಲ ಧ್ವಜ ಜಾಗೃತಿ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಡಿ ಶೋಷಿತ ಸಮುದಾಯವು ಮೂಢ ನಂಬಿಕೆ, ಅಂಧಶ್ರದ್ದೆಯಿಂದ ಸಂಪೂರ್ಣವಾಗಿ ಮುಕ್ತವಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾಗಿದೆ. ಸಮ ಸಮಾಜದ ನಿಮರ್ಾಣವಾಗಬೇಕಾಗಿದೆ. ಈ ದಿಸೆಯಲ್ಲಿ ವಿಶ್ವಗುರು ಬಸವಣ್ಣನವರು ಆರಂಭಿಸಿದ್ದ ಚಳುವಳಿಯನ್ನು ಮುಂದುವರೆಸಲು ನಾವು ಬದ್ದರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ತೋಂಟದಾರ್ಯ ನಿಜಗುಣಪ್ರಭು ಸ್ವಾಮೀಜಿಗಳನ್ನು ನಡೆಸುತ್ತಿರುವ ಬಸವ ಧರ್ಮ ಜಾಗೃತಿ ಚಳುವಳಿಯು ಶೋಷಿತ ಸಮುದಾಯಗಳು ಮೂಢ ನಂಬಿಕೆ ಹಾಗೂ ಅಂಧಶ್ರದ್ದೆಗಳಿಂದ ಹೊರಬರುವಲ್ಲಿ ಪರಿಣಾಮಕಾರಿ ಪ್ರಭಾವ ಬೀರುತ್ತಿದೆ. ಲಿಂಗಾಯತ ಧರ್ಮದ ಬಗೆಗಿನ ಒಲವು ಇನ್ನಷ್ಟು ಹೆಚ್ಚಿಸುತ್ತಿದೆ. ಬಸವಣ್ಣನವರು ನಮಗೆ ಆದರ್ಶರಾಗುತ್ತಿದ್ದಾರೆ. ಸಮಸಮಾಜ ಚಳುವಳಿ ಮುಂದುವರೆಯಲಿದೆ ಎಂದರು.
ಷಟಸ್ಥಲ ಧ್ವಜ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸೇನೆಯ ಅಧ್ಯಕ್ಷ ಆರ್.ಎಸ್.ದಗರ್ೆ, ವಿಶ್ವದಲ್ಲಿ 14 ಅಧಿಕೃತ ಧರ್ಮಗಳಿವೆ. ಭಾರತದಲ್ಲಿ ಸಂವಿಧಾನ ಮಾನ್ಯತೆಯ 6 ಧರ್ಮಗಳಿವೆ. ಇನ್ನು ಕೆಲವೆ ದಿನಗಳಲ್ಲಿ ವಿಶ್ವದ 15 ನೇ ಹಾಗೂ ಭಾರತದ 7 ನೇ ಮತ್ತು ಕೊನೆಯ ಧರ್ಮವಾಗಿ ಈ ಕನ್ನಡ ನಾಡಿನ ಲಿಂಗಾಯತ ಧರ್ಮವು ಸ್ವತಂತ್ರ ಧರ್ಮವಾಗಿ ಹೊರಹೊಮ್ಮಲಿದೆ. ಮನುವಾದಿಗಳ ಎಲ್ಲಾ ಕುತಂತ್ರಗಳನ್ನು ಮೆಟ್ಟಿನಿಂತು ಬಸವ ಧರ್ಮ ವಿಜಯ ಸಾಧಿಸಲಿದೆ ಎಂಬುದರಲ್ಲಿ ಯಾವ ಅನುಮಾನವೇ ಬೇಡ ಎಂದ ಅವರು, ಬಸವ ಸಮಾಜದ ಪ್ರತಿಯೊಬ್ಬರ ಮನೆಯ ಮೇಲೆ ಷಟಸ್ಥಲ ಧ್ವಜ ಹಾರಾಡಬೇಕು ಎಂದು ಕರೆ ನೀಡಿದರು.
ಶಂಕರ ಪಡೆನ್ನವರ ಮಾತನಾಡಿ, ಬಸವ ಧರ್ಮ ಸಂವಿಧಾನ ಮಾನ್ಯತೆಯ ಸ್ವತಂತ್ರ ಧರ್ಮ ಆಗುವದರೊಂದಿಗೆ ಈ ನಾಡು ಮತ್ತು ಈ ದೇಶದ ಮನೆ ಮನೆಯ ಧರ್ಮ ಆಗಬೇಕು. ಮನೆ ಮನೆಯ ಧರ್ಮವಾಗಿಸಲು ನಮ್ಮ ಪ್ರಯತ್ನ ವ್ಯಾಪಕವಾಗಿ ಮುಂದುವರೆಯಲಿದೆ ಎಂದರು.
ನ್ಯಾಯವಾದಿ ಚನ್ನಬಸಪ್ಪ ಬಾಗೇವಾಡಿ ಮಾತನಾಡಿ, ಈ ದೇಶದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಇಡಿ ಶೋಷಿತ ಸಮುದಾಯ ಮತ್ತು ಮಹಿಳೆಯರನ್ನು ಒಗ್ಗೂಡಿಸಿಕೊಂಡು ವಿನೂತನ ಧರ್ಮ ನೀಡುವದರೊಂದಿಗೆ ಸಮಾನತೆಯನ್ನು ಕಲ್ಪಸಿದ ಬಸವಣ್ಣನವರ ಭಾವಚಿತ್ರವನ್ನು ಪ್ರತಿಯೊಬ್ಬ ಶೋಷಿತ ಸಮುದಾಯದವರು ಕಡ್ಡಾಯವಾಗಿ ತಮ್ಮ ತಮ್ಮ ಮನೆಗಳಲ್ಲಿ ಅಳವಡಿಸಬೇಕು ಎಂದು ಮನವಿ ಮಾಡಿದರು.
ಬಂಧು ಗ್ರಾಮೀಣ ನಗರಾಭಿವೃದ್ದಿ ಸಂಸ್ಥೆಯ ಅಂಜಲಿ ಮಾತನಾಡಿ, ಸರಕಾರಗಳು ರೂಪಿಸುವ ಯೋಜನೆಗಳು ಶೋಷಿತ ಸಮುದಾಯಗಳ ನಿಜವಾದ ಫಲಾನುಭವಿಗಳಿಗೆ ದೊರೆಯಬೇಕು. ನಿಜವಾದ ಫಲಾನುಭವಿಗಳಿಗೆ ಯೋಜನೆಗಳ ಲಾಭ ಮುಟ್ಟಿದರೆ ಮಾತ್ರ ಸಂವಿಧಾನದ ಆಶಯ ಈಡೇರುತ್ತದೆ ಎಂದರು.
ಸಂಚಾರಿ ಗುರುಬಸವ ಬಳಗದ ಮಹಾಂತೇಶ ತೋರಣಗಟ್ಟಿ ಮಾತನಾಡಿ, ಬಸವ ಭೀಮ ಸೇನೆ ಹಮ್ಮಿಕೊಳ್ಳುತ್ತಿರುವ ಇಂತಹ ಜಾಗೃತಿ ಕಾರ್ಯಕ್ರಮಗಳಿಗೆ ಸಮಾಜದ ಸಂಪೂರ್ಣ ಬೆಂಬಲ ಇದೆ ಎಂದರು.
ಬಾಗಲಕೋಟೆಯ ಗೋಪಾಲ ರೊಡ್ಡಣ್ಣವರ, ಲಕ್ಷ್ಮಣ ತಮ್ಮಣ್ಣವರ, ಶಿವರಾಜ ಮುದಕವಿ, ಎಚ್.ಲೋಕೇಶ, ಸಂಚಾರಿ ಗುರುಬಸವ ಬಳಗದ ಅಧ್ಯಕ್ಷ ಬಸವರಾಜ ಪಾಟೀಲ, ಸಿದ್ದರಾಮ ಸಾವಳಗಿ ಮುಂತಾದವರು ಉಪಸ್ಥಿತರಿದ್ದರು. ಸುಧಾಕರ ಡೊಂಕಣ್ಣವರ ನಿರೂಪಿಸಿದರು. ಯಲ್ಲಪ್ಪ ಹುದಲಿ ವಂದಿಸಿದರು.