ನಾಳಿನ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಣೆ ಅತ್ಯವಶ್ಯಕ: ಸಂಜೀವ ಸವಸುದ್ದಿ

ಮೂಡಲಗಿ 29: ‘ಪರಿಸರ ನಾಶದಿಂದ ಜೀವಸಂಕುಲ ಅವನತಿಯತ್ತ ಸಾಗುತ್ತಲಿದ್ದು, ಪ್ರತಿಯೊಬ್ಬರು ಗಿಡ, ಮರಗಳನ್ನು ಸಂರಕ್ಷಿಸಿ ಬೆಳೆಸುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಗೋಕಾಕ ವಲಯ ಅರಣ್ಯಾಧಿಕಾರಿ ಸಂಜೀವ ಸವಸುದ್ದಿ ಅವರು ಹೇಳಿದರು. 

ಇಲ್ಲಿಯ ಕಲ್ಮೇಶ್ವರ ಶಿಕ್ಷಣ ಸಂಸ್ಥೆಯ ಉಮಾಬಾಯಿ ಸ್ವಾಮಿ ಪ್ರೌಢ ಶಾಲೆ ಹಾಗೂ ಶ್ರೀಪಾದಬೋಧ ಸ್ವಾಮಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ವಲಯ ಅರಣ್ಯ ಇಲಾಖೆಯವರ ಸಹಯೋಗದಲ್ಲಿ ಆಚರಿಸಿದ ವನಮಹೋತ್ಸವವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. 

ಅಭಿವೃದ್ಧಿ ನೆಪದಲ್ಲಿ ಪ್ರಕೃತಿಯ ಮೇಲೆ ನಿರಂತರವಾಗಿ ದಾಳಿಯಾಗುತ್ತಿದ್ದು ಇದು ಮುಂದಿನ ಪೀಳಿಗೆಗೆ ಅಪತ್ತು ತರುವಂತ ಸಂಗತಿಯಾಗಿದೆ.ಶಾಲಾ ಮಕ್ಕಳು ಒಂದು ಸಸಿಯನ್ನು ನೆಟ್ಟು ಬೆಳೆಸುವ ಮೂಲಕ ಪರಿಸರಕ್ಕೆ ಕೊಡುಗೆಯನ್ನು ನೀಡಿರಿ ಎಂದರು. 

ಅಧ್ಯಕ್ಷತೆ ವಹಿಸಿದ್ದ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀಧರಬೋಧ ಸ್ವಾಮೀಜಿ ಮಾತನಾಡಿ ಇಂದು ನೆಡುವ ಸಸಿಯು ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗುತ್ತದೆ. ಸಸಿಗಳ ಪಾಲನೆ, ಪೋಷಣೆಯನ್ನು ಮಾಡಿ ಬೆಳೆಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು. 

ಅರಣ್ಯ ಇಲಾಖೆಯಿಂದ ಸಸಿ ನೆಡುವ ಅಭಿಯಾನಕ್ಕೆ ಪ್ರೇರಣೆ ನೀಡುತ್ತಿರುವುದು ವಲಯ ಅರಣ್ಯಾಧಿಕಾರಿ ಸಂಜೀವ ಸವಸುದ್ದಿ ಅವರ ಕ್ರೀಯಾಶೀಲತೆಯು ಶ್ಲಾಘನೀಯವಾಗಿದೆ ಎಂದರು. 

ಮುಖ್ಯ ಅತಿಥಿಯಾಗಿ ಬಾಲಶೇಖರ ಬಂದಿ, ಅರಣ್ಯ ಇಲಾಖೆಯ ಬೀಟ ಅಧಿಕಾರಿ ಮಹಾಂತೇಶ ಹಿಪ್ಪರಗಿ, ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಕೆ.ಆರ್‌.ಪಿರೋಜಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಂ.ಎಂ.ಕೆಂಚನ್ನವರ ಭಾಗವಹಿಸಿದ್ದರು. 

ಶಿಕ್ಷಕಿ ಶೀಲಾ ಕಮತಗಿ ಮತ್ತು ಎಸ್‌ಆರ್‌ಬಿ ಪಾಟೀಲ ನಿರೂಪಿಸಿದರು. 

ಶಾಲೆಯ ಆವರಣದಲ್ಲಿ ನೂರಕ್ಕೂ ಅಧಿಕ ಸಸಿಗಳನ್ನು ನೆಟ್ಟು ನೀರುಣಿಸಿದರು. ‘ಪರಿಸರ ಉಳಿಸಿರಿ, ಪರಿಸರ ಬೆಳೆಸಿರಿ’ ಎಂದು ಘೋಷಣೆಗಳನ್ನು ಹೇಳಿದರು.