ಬ್ಯಾಡಗಿ24: ಪರಿಸರ ಸಂರಕ್ಷಣೆ ದೇಶದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಇಬ್ರಾಹಿಂ ಮುಜಾವರ ಹೇಳಿದರು.
ಸ್ಥಳೀಯ ಪೊಲೀಸ್ ಠಾಣೆಯ ಆವರಣದಲ್ಲಿ ತಾಲೂಕಾ ಕಾನೂನು ಸೇವೆಗಳ ಸಮಿತಿ ಹಾಗೂ ನ್ಯಾಯವಾದಿಗಳ ಸಂಘ ಮತ್ತು ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಭಾರತ ಸಂವಿಧಾನ, ಮೂಲಭೂತ ಕರ್ತವ್ಯಗಳು, ಮಹಿಳೆಯರ ಸುರಕ್ಷೆ ಹಾಗೂ ಪೊಲೀಸ್ ದೌರ್ಜನ್ಯ ದೂರು ಪ್ರಾಧಿಕಾರ ಕುರಿತು ಆಯೋಜಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಸಸಿಗಳಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ನದಿ, ಸರೋವರಗಳೊಂದಿಗೆ ವನ್ಯಜೀವಿಗಳನ್ನು ಸಂರಕ್ಷಿಸಿ ಪೋಷಿಸುವ ಕುರಿತು ನಾಗರಿಕ ಹೊಣೆಗಾರಿಕೆಯ ಬಗ್ಗೆ ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿ ನಿದರ್ಿಷ್ಟಪಡಿಸಲಾಗಿದೆ ಎಂದರು.
ಕೇವಲ ಕಾನೂನುಗಳ ಬಲದಿಂದ ಮೂಲಭೂತ ಕರ್ತವ್ಯಗಳನ್ನು ಎಲ್ಲರೂ ಪಾಲಿಸುವಂತೆ ಮಾಡುವುದು ಅಸಾಧ್ಯ, ನಾವು ಹುಟ್ಟಿ ಬೆಳೆದ ಪರಿಸರ, ನಮ್ಮ ಜೊತೆ ಸಹಜೀವನ ನಡೆಸುವ ಪ್ರಾಣಿ ಪಕ್ಷಿಗಳು, ನಮ್ಮ ಬಾಯಾರಿಕೆ ತಣಿಸುವ ನದಿ, ಸರೋವರಗಳು, ಪ್ರಾಣ ವಾಯು ಪೂರೈಸುವ ಗಿಡ ಮರಗಳು ಮಾನವ ಸಂಕುಲಕ್ಕೇ ಪೂರಕವಾಗಿದ್ದು, ಅವುಗಳನ್ನು ಜತನದಿಂದ ಪೋಷಿಸಿ ಉಳಿಸಿಕೊಳ್ಳುವ ಮನೋಭಾವ ನಮ್ಮ ಆತ್ಮದಿಂದಲೇ ಹುಟ್ಟಬೇಕೇ ಹೊರತು ಬಲವಂತದಿಂದ ಮಾಡಿಸಲು ಸಾಧ್ಯವಿಲ್ಲ. ನಮ್ಮ ಅರಣ್ಯ ಸಂಪತ್ತು, ಜಲ, ವಾಯು ಮೂಲಗಳನ್ನು ಪ್ರಾಣಿ ಪಕ್ಷಿಗಳ ಸಂಕುಲವನ್ನು ಸಂರಕ್ಷಿಸುವ ದೃಢ ಸಂಕಲ್ಪವನ್ನು ನಾವೆಲ್ಲರೂ ಕೈಗೊಳ್ಳಬೇಕೆಂದು ಅವರು ಕರೆ ನೀಡಿದರು.
ಸಿಪಿಐ ಭಾಗ್ಯವತಿ ಬಂತಿ ' ಮಹಿಳೆಯರ ಸುರಕ್ಷೆ-- ಆರಕ್ಷಕರ ಶ್ರೀರಕ್ಷೆ-- ಮತ್ತು ಕಾನೂನುಗಳ ಬೆಂಗಾವಲು' ಹಾಗೂ ಪಿಎಸ್ಐ ಮಹಾಂತೇಶ 'ಪೊಲೀಸ್ ದೌರ್ಜನ್ಯ ದೂರು ಪ್ರಾಧಿಕಾರ' ಕುರಿತು ಮಾಹಿತಿ ನೀಡಿದರು. ನ್ಯಾಯವಾದಿ ಮಂಜುನಾಥ ಹಂಜಗಿ ಮಾತನಾಡಿ, ಪರಿಸರ ಸಂರಕ್ಷಣಾ ಕಾಯ್ದೆ 1986 ಮತ್ತು ಜಲ ಮಾಲಿನ್ಯ ನಿಯಂತ್ರಣ ಕಾಯ್ದೆಯ ಬಗ್ಗೆ ಉಪನ್ಯಾಸ ನೀಡಿದರು.
ತಾಲೂಕಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪಿ ಎಸ್ ಬನ್ನಿಹಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳಾದ ಸಿ.ಪಿ. ದೊಣ್ಣೇರ, ಎಂ.ಕೆ. ಕೋಡಿಹಳ್ಳಿ, ಭಾರತಿ ಕುಲಕಣರ್ಿ, ಲಕ್ಷ್ಮೀ ಗುಗ್ಗರಿ, ಎ.ಎಸ್.ಐ ಎಂ.ಎಂ. ಖಾಜಿ ಮತ್ತಿತರರು ಉಪಸ್ಥಿತರಿದ್ದರು.