ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ: ರಾಹುಲ ಶಿಂಧೆ

Ensure that there is no problem with drinking water: Rahul Shinde

ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ: ರಾಹುಲ ಶಿಂಧೆ 

ರಾಯಬಾಗ 19: ತೀವ್ರ ಬೇಸಿಗೆ ಇರುವುದರಿಂದ ಜನಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಮತ್ತ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಜಿ.ಪಂ.ಸಿ.ಇ.ಒ ರಾಹುಲ ಶಿಂಧೆ ಸೂಚಿಸಿದರು.  

ಶನಿವಾರ ಪಟ್ಟಣದ ಹೆಸ್ಕಾಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಇನ್ನು 45 ದಿನ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಪಂಚಾಯತಿಯಲ್ಲಿ ಇರುವ ಹಣದಿಂದ ಮುಂಜಾಗೃತ ಕ್ರಮವಾಗಿ ಎಲ್ಲ ಪಂಚಾಯತಯವರು 20 ಎಚ್‌.ಪಿ ಸಾಮರ್ಥ್ಯದ ಮೋಟಾರ ಖರೀದಿಸಿ ಇಟ್ಟುಕೊಂಡರೆ, ಸ್ಥಳೀಯ ಜಲ ಮೂಲದಿಂದ ನೀರನ್ನು ಪಡೆಯಲು ಅನುಕೂಲವಾಗುದು ಎಂದು ತಿಳಿಸಿದರು.  

ನೀರು ಸರಬರಾಜು ಮಾಡುವ ಮೇಲ್ಮಟ್ಟದ ಜಲಸಂಗ್ರಹವನ್ನು ಸ್ವಚ್ಛಗೊಳಿಸಬೇಕು ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಭಿಯಂತರರಿಗೆ ಮತ್ತು ಪಿಡಿಒಗಳಿಗೆ ಸೂಚಿಸಿದರು. ಅಂಗನವಾಡಿ ಕೇಂದ್ರ ಮತ್ತು ಶಾಲೆಗಳಿಗೆ ರಜೆ ಇರುವುದರಿಂದ ಈಗಲೇ ಸ್ವಚ್ಛಗೊಳಿಸಬೇಕು ಮತ್ತು ಸಂಗ್ರಹ ಇರುವ ಆಹಾರ ವಿಷಯುಕ್ತ ಆಗದಂತೆ ನೋಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನ ಎಲ್ಲ ಹೊಸ ಬಹು ಕುಡಿಯುವ ನೀರಿನ ಯೋಜನೆಗಳು ಅಂತಿಮ ಹಂತದಲ್ಲಿ ಇದ್ದು, ಅವು ಪೂರ್ಣಗೊಂಡ ನಂತರ ಬಹುತೇಕ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು. ನರೇಗಾದಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರಿಗೆ ಬೀಸಲಿನಿಂದ ರಕ್ಷಣೆ ನೀಡಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.  

ತಹಶೀಲ್ದಾರ ಸುರೇಶ ಮುಂಜೆ, ತಾ.ಪಂ.ಇಒ ಡಾ.ಸುರೇಶ ಕದ್ದು, ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್‌.ಎಮ್‌.ಪಾಟೀಲ, ಅರಣ್ಯಾಧಿಕಾರಿಗಳಾದ ಶಿವಕುಮಾರ ಡಿ, ಉಮೇಶ ಪ್ರಧಾನಿ, ಸಮಾಜ ಕಲ್ಯಾಣ ಅಧಿಕಾರಿ ವಿ.ಎಸ್‌.ಚಂದರಗಿ, ಅಬಕಾರಿ ನೀರೀಕ್ಷಕ ಕಿರಣ ಚಂದರಗಿ, ಎಇಇ ಸುಭಾಷ ಭಜಂತ್ರಿ, ಬಿಇಒ ಬಸವರಾಜಪ್ಪ ಆರ್, ಸಿಡಿಪಿಒ ಭಾರತಿ ಕಾಂಬಳೆ, ಎಸ್‌.ವಾಯ್‌.ಸನಮನಿ, ಅರುಣ ಮಾಚಕನೂರ ಹಾಗೂ ಪಿಡಿಒ ಗಳು ಇದ್ದರು.