ಜೋಹಾನ್ಸ್‌ಬರ್ಗ್, ಜ 25, ಇಡೀ ಜಗತ್ತಿಗೆ ಕ್ರಿಕೆಟ್ ಕಲಿಸಿಕೊಟ್ಟ ಇಂಗ್ಲೆಂಡ್ ಇದೀಗ ಮತ್ತೊಂದು ವಿಶಿಷ್ಠ ಸಾಧನೆ ಮಾಡುವ ಮೂಲಕ ಇತಿಹಾಸದ ಪುಟ ಸೇರಿದೆ. ಟೆಸ್ಟ್ ಕ್ರಿಕೆಟ್ ನಲ್ಲಿ 500,000 ರನ್ ಗಳನ್ನು ಕಲೆಹಾಕಿದ ವಿಶ್ವದ ಮೊದಲ ತಂಡ ಎಂಬ ಹಿರಿಮೆಗೆ ಇಂಗ್ಲೆಂಡ್ ತಂಡ ಭಾಜನವಾಗಿದೆ.ಇಲ್ಲಿನ ವಾಂಡರರ್ಸ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಂಗ್ಲರು ಈ ಸಾಧನೆ ಮಾಡಿದರು. ಶುಕ್ರವಾರ ತಂಡದ ನಾಯಕ ಜೋ ರೂಟ್ ಒಂದು ರನ್ ಪಡೆಯುವ ಮೂಲಕ ಇಂಗ್ಲೆಂಡ್ 500,000 ರನ್ ಗಳ ಕೋಟೆ ಕಟ್ಟಿತು. ಈ ಸಾಧನೆ ಮಾಡಲು ಇಂಗ್ಲೆಂಡ್ ತಂಡಕ್ಕೆ 1022 ಟೆಸ್ಟ್ ಪಂದ್ಯಗಳನ್ನು ತೆಗೆದುಕೊಂಡಿದೆ.
ಈ ಸಾಧನೆ ಮಾಡಿರುವ ಪಟ್ಟಿಯಲ್ಲಿ 432,706 ರನ್ ಗಳಿಸಿರುವ ಆಸ್ಟ್ರೇಲಿಯಾ ತಂಡ (830 ಪಂದ್ಯಗಳು) ಎರಡನೇ ಸ್ಥಾನದಲ್ಲಿದೆ. 540 ಟೆಸ್ಟ್ ಪಂದ್ಯಗಳಾಡಿರುವ ಭಾರತ ತಂಡ 273,518 ರನ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ವೆಸ್ಟ್ ಇಂಡೀಸ್( 270,441 ರನ್ ಗಳು, 545 ಪಂದ್ಯಗಳು) ಇದೆ.ಪೋರ್ಟ್ ಎಲಿಝಬೆಥ್ ನ ಸೇಂಟ್ ಜಾರ್ಜ್ ಪಾರ್ಕ್ ಅಂಗಳದಲ್ಲಿ ಇಂಗ್ಲೆಂಡ್ ವಿದೇಶಿ ನೆಲದಲ್ಲಿ 500ನೇ ಟೆಸ್ಟ್ ಪಂದ್ಯವಾಡಿದ ವಿಶ್ವದ ಮೊದಲ ತಂಡ ಎಂಬ ದಾಖಲೆ ಮಾಡಿತ್ತು. ಈ ಸಾಧನೆಯಲ್ಲೂ ಆಸ್ಟ್ರೇಲಿಯಾ(404 ಪಂದ್ಯಗಳು) ಎರಡನೇ ಸ್ಥಾನದಲ್ಲಿದೆ. ಭಾರತ 268 ಪಂದ್ಯಗಳಾಡಿದ್ದು ಇದರಲ್ಲಿ 51ರಲ್ಲಿ ಜಯ, 113 ಪಂದ್ಯಗಳಲ್ಲಿ ಸೋಲು ಹಾಗೂ 104 ಪಂದ್ಯಗಳು ಡ್ರಾನಲ್ಲಿ ಮುಕ್ತಾಯವಾಗಿದೆ.