ಕಿಂಬರ್ಲಿ, ಜ 24, ಇಂಗ್ಲೆಂಡ್ ಹಿರಿಯ ತಂಡದ ಚೊಚ್ಚಲ ಐಸಿಸಿ ಏಕದಿನ ವಿಶ್ವಕಪ್ ಗೆಲುವಿನ ಸಂಭ್ರಮ ಇನ್ನೂ ಮಾಸದೆ ಇರುವಾಗಲೇ ಕಿರಿಯರ ತಂಡ ಪ್ರಸ್ತುತ ನಡೆಯುತ್ತಿರುವ 19 ವಯೋಮಿತಿ ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿದೆ.ಗುರುವಾರ ಇಲ್ಲಿ ನಡೆದಿದ್ದ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಕೇವಲ ಎರಡು ವಿಕೆಟ್ ಗಳಿಂದ ಸೋಲು ಅನುಭವಿಸಿತು. ಇದರ ಪರಿಣಾಮ ಆಂಗ್ಲರ ಕಿರಿಯರ ತಂಡ ವಿಶ್ವಕಪ್ ಅಭಿಯಾನ ಮುಗಿಸಿತು.
ಇಂಗ್ಲೆಂಡ್ ನೀಡಿದ್ದ 253 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 47 ಓವರ್ ಗಳಿಗೆ ಎಂಟು ವಿಕೆಟ್ ಕಳೆದುಕೊಂಡು 213 ರನ್ ಗಳಿಸಿತ್ತು. ಆಸೀಸ್ ಗೆ 18 ಎಸೆತಗಳಲ್ಲಿ 40 ರನ್ ಅಗತ್ಯವಿತ್ತು. ಆ ಮೂಲಕ ಪಂದ್ಯ ಅತ್ಯಂತ ರೋಚಕತೆ ಕೆರಳಿಸಿತ್ತು. ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಕಾನರ್ ಸುಲ್ಲಿ 48ನೇ ಓವರ್ ನಲ್ಲಿ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್ ಬಾರಿಸಿದರು. ಆ ಮೂಲಕ ಪಂದ್ಯಕ್ಕೆ ದಿಕ್ಕು ಬದಲಾಯಿತು.ಕೊನೆಯ ಓವರ್ ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಕೊನೆಯ ಎರಡು ಓವರ್ ಗಳಲ್ಲಿ 18 ರನ್ ಅಗತ್ಯವಿತ್ತು. 49ನೇ ಓವರ್ ನಲ್ಲಿ ಆಸೀಸ್ ಎಂಟು ರನ್ ತನ್ನ ಖಾತೆಗೆ ಸೇರಿಸಿಕೊಂಡಿತು. ಎಸೆತದಿಂದ ಎಸೆತಕ್ಕೂ ಪಂದ್ಯದ ರೋಚಕತೆ ಹೆಚ್ಚುತ್ತಿತ್ತು. 50ನೇ ಓವರ್ ನಲ್ಲಿ ಅಂದರೆ, ಕೊನೆಯ ಓವರ್ ನಲ್ಲಿ ಕಾಂಗರೂಗಳು 10 ರನ್ ಗಳಿಸಿ ಗೆಲುವಿನ ತೋರಣ ಕಟ್ಟಿದರು.
ಸೋಲಿನೊಂದಿಗೆ ಇಂಗ್ಲೆಂಡ್ ಭಾರಿ ಆಘಾತದೊಂದಿಗೆ ಪೆವಿಲಿಯನ್ ಗೆ ಹೆಜ್ಜೆ ಹಾಕಿತು. ಬ್ಯಾಟಿಂಗ್ ನಲ್ಲಿ ಕೇವಲ 20 ಎಸೆತಗಳಲ್ಲಿ 35 ರನ್ ಗಳಿಸಿ ಆಸ್ಟ್ರೇಲಿಯಾ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಕಾನರ್ ಸುಲ್ಲಿ ಬೌಲಿಂಗ್ ನಲ್ಲೂ ಎರಡು ವಿಕೆಟ್ ಪಡೆದಿದ್ದರು.ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಪರ ಚಾರ್ಲ್ಸ್ ವರ್ಥ್ 82, ಡಾನ್ ಮೌಸ್ಲಿ ಅಜೇಯ 51 ರನ್ ಗಳಿಸಿದ್ದರು. ಆಸ್ಟ್ರೇಲಿಯಾ ಪರ ಮೆಕಿಂಜಿ ಹಾರ್ವಿ 65, ಲ್ಯಾಚ್ಲೆನ್ 45 ಗಳಿಸಿದ್ದರು. ಇಂಗ್ಲೆಂಡ್ ತಂಡ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಮೊದಲನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 71 ರನ್ ಗಳಿಂದ ಸೋಲು ಅನುಭವಿಸಿತ್ತು. ಆಸ್ಟ್ರೇಲಿಯಾ ಆಡಿರುವ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆಡಿರುವ ಮೂರೂ ಪಂದ್ಯಗಳಲ್ಲಿ ಗೆದ್ದಿರುವ ವೆಸ್ಟ್ ಇಂಡೀಸ್ ಅಗ್ರ ಸ್ಥಾನದಲ್ಲಿದೆ.