ನೆಲ್ಸನ್, ನ.5: ಆತಿಥೇಯ ನ್ಯೂಜಿಲೆಂಡ್ ತಂಡ ಸಂಘಟಿತ ಆಟದ ಪ್ರದರ್ಶನ ನೀಡಿದ್ದು, ಮೂರನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 14 ರನ್ ಗಳಿಂದ ಮಣಿಸಿ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡದ ಆರಂಭಿಕ ಮಾರ್ಟಿನ್ ಗುಪ್ಟಿಲ್ (33) ಭರ್ಜರಿ ಬ್ಯಾಟಿಂಗ್ ನಡೆಸಿದರು. ಕಾಲಿನ್ ಮುನ್ರೊ ಹಾಗೂ ಟಿಮ್ ಸೀಫರ್ಟ್ ತಡಕ್ಕೆ ಆಧಾರವಾಗಲಿಲ್ಲ. ರಾಸ್ ಟೇಲರ್ 27, ಜೇಮ್ಸ್ ನೀಶಾಮ್ 20 ರನ್ ಬಾರಿಸಿದರು. ಅನುಭವಿ ಕಾಲಿನ್ ಡಿ ಗ್ರ್ಯಾಂಡ್ ಹೋಮ್ 35 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ನೆರವಿನಿಂದ 55 ರನ್ ಸಿಡಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 7 ವಿಕೆಟ್ ಗೆ 180 ರನ್ ಸೇರಿಸಿತು. ಟಾಮ್ ಕರನ್ 29 ರನ್ ನೀಡಿ ಎರಡು ವಿಕೆಟ್ ಕಬಳಿಸಿದರು. ಇಂಗ್ಲೆಂಡ್ ಆರಂಭ ಸಾಧಾರಣವಾಗಿತ್ತು. ಎರಡನೇ ವಿಕೆಟ್ ಗೆ ಡೇವಿಡ್ ಮಲಾನ್ ಹಾಗೂ ಜೇಮ್ಸ್ ವಿನ್ಸ್ ಜೋಡಿ ತಂಡಕ್ಕೆ ಅರ್ಧಶತಕದ ಜೊತೆಯಾಟದ ಕಾಣಿಕೆ ನೀಡಿತು. ಜೇಮ್ಸ್ 49 ಹಾಗೂ ಡೇವಿಡ್ 55 ರನ್ ಬಾರಿಸಿ ಔಟ್ ಆದರು. ನಾಯಕ ಇಯಾನ್ ಮಾರ್ಗನ್ 18 ರನ್ ಬಾರಿಸಿದರು.