ಶ್ರೀನಗರ, ಆಗಸ್ಟ್ 16 ದಕ್ಷಿಣ ಕಾಶ್ಮೀರ ಹಿಮಾಲಯದ ಆಧ್ಯಾತ್ಮಿಕ ಪರಿಸರದಲ್ಲಿ ಧಾರ್ಮಿಕ ಶ್ಲೋಕಗಳನ್ನು ಪಠಿಸುವ ಮಧ್ಯೆ ಪವಿತ್ರ ಅಮರನಾಥ ಗುಹಾಂತರ ದೇಗುಲದ ವಾರ್ಷಿಕ ತೀರ್ಥಯಾತ್ರೆ ಶ್ರಾವಣ ಪೂರ್ಣಿಮೆ ದಿನವಾದ ಗುರುವಾರ ಮುಕ್ತಾಯಗೊಂಡಿದೆ.
ಯಾತ್ರೆಯ ಕೊನೆಯ ದಿನ ಅಮರನಾಥ ದೇಗುಲ ಮಂಡಳಿಯ ಹೆಚ್ಚುವರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನುಪ್ ಕುಮಾರ್ ಸೋನಿ ಮತ್ತು ಇತರ ಅಧಿಕಾರಿಗಳು ಗುಹಾಂತರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿದರು.
ರಾಜ್ಯದಲ್ಲಿ ನಿರಂತರ ಶಾಂತಿ, ಸಾಮರಸ್ಯ, ಪ್ರಗತಿ ಮತ್ತು ಸಮೃದ್ಧಿಗಾಗಿ ಅಧಿಕಾರಿಗಳು ಪ್ರಾರ್ಥಿಸಿದರು. ಈ ವರ್ಷದ ತೀರ್ಥಯಾತ್ರೆಯಲ್ಲಿ 3,43,587 ಯಾತ್ರಿಗಳು ಪವಿತ್ರ ಗುಹಾಂತರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ ಎಂದು ಅನುಪ್ ಕುಮಾರ್ ಸೋನಿ ತಿಳಿಸಿದ್ದಾರೆ. ಯಾತ್ರೆ ಬಲ್ತಾಲ್ ಮತ್ತು ಪಹಲ್ಗಾಮ್ ಎರಡೂ ಮಾರ್ಗಗಳಿಂದ ಜುಲೈ 1 ರಂದು ಪ್ರಾರಂಭವಾಗಿತ್ತು.
ಈ ಬಾರಿ ಯಾತ್ರೆಗೆ ಹಿಂದಿನ ವರ್ಷಗಳಿಗಿಂತ ಹೆಚ್ಚು ಸಿದ್ಧತೆಗಳನ್ನು ಮಾಡಲಾಗಿತ್ತು ಎಂದು
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮಾಂಗ್ ನರುಲಾ ಶುಕ್ರವಾರ ತಿಳಿಸಿದ್ದಾರೆ.
ಆನ್ಲೈನ್ ನೋಂದಣಿ, ಯಾತ್ರಿಕರಿಗೆ ಬಾರ್ ಕೋಡಿಂಗ್, ದೇವಸ್ಥಾನ ಮಂಡಳಿಯ ಆ್ಯಪ್, ಜೈವಿಕ ಶೌಚಾಲಯಗಳು, ನವೀಕರಿಸಿದ ಆರೋಗ್ಯ ಸೌಲಭ್ಯಗಳು, ಸುಧಾರಿತ ನೈರ್ಮಲ್ಯ ಸೌಲಭ್ಯಗಳು, ದೂರಸಂಪರ್ಕ ಸೇರಿದಂತೆ ಇತರ ಸೌಲಭ್ಯಗಳನ್ನು ಈ ಬಾರಿ ಒದಗಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. 2019ರ ಪವಿತ್ರ ಯಾತ್ರೆ ಸುಗಮವಾಗಿ ಪೂರ್ಣಗೊಂಡಿರುವುದಕ್ಕೆ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರು ಅನಂತ್ನಾಗ್ ಮತ್ತು ಗಂದರ್ ಬಾಲ್ ಜಿಲ್ಲೆಗಳ ನಾಗರಿಕರು ಮತ್ತು ಪೊಲೀಸ್ ಆಡಳಿತಗಳು, ರಾಜ್ಯ ಪೊಲೀಸ್, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ಸೇನೆ, ವಿವಿಧ ರಾಜ್ಯ ಸರ್ಕಾರಿ ಇಲಾಖೆಗಳು ಮತ್ತು ಇತರ ಎಲ್ಲ ಸಂಸ್ಥೆಗಳನ್ನು ಅಭಿನಂದಿಸಿದ್ದಾರೆ.
ಯಾತ್ರೆಗೆ ಸ್ಥಳೀಯ ಜನರ ಬೆಂಬಲವನ್ನು ರಾಜ್ಯಪಾಲರು ಶ್ಲಾಘಿಸಿದ್ದಾರೆ.