ನರೇಗಾ: ಒಂದೇ ದಿನದಲ್ಲಿ 66,670 ಮಾನವ ದಿನ ಸೃಜಿಸಿ ದಾಖಲೆ :ಗೋವಿಂದ ರೆಡ್ಡಿ

ವಿಜಯಪುರ ಜು. 2: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿನ್ನೆ ದಿನಾಂಕ 30-06-2020 ರಂದು ಒಂದೇ ದಿನದಲ್ಲಿ 66,670 ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ದಾಖಲೆಯ ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹೊನವಾಡ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿದ ನಂತರ ಈ ವಿಷಯ ತಿಳಿಸಿದ ಅವರು ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಇಷ್ಟು ಬೃಹತ್ ಪ್ರಮಾಣದ ಮಾನವ ದಿನ ಸೃಜನೆ ಆಗಿಲ್ಲ, ಮುಂದೆಯೂ ಕೂಡ ಈ ಸಾಧನೆ ಮೀರಿಸಲು ಅಸಾಧ್ಯ ಎಂದಿರುವ ಅವರು ಒಂದೇ ದಿನದಲ್ಲಿ 66,670 ಮಾನವ ದಿನ ಸೃಜನೆ ಮಾಡಿರುವುದು ಐತಿಹಾಸಿಕ ದಾಖಲೆ ಮತ್ತು ಸಾಧನೆಯಾಗಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಒಂದು ವರ್ಷಕ್ಕೆ 50 ಲಕ್ಷ ಮಾನವ ದಿನ ಸೃಜನೆಯ ಗುರಿ ಹೊಂದಲಾಗಿದೆ. ಒಂದೇ ದಿನದಲ್ಲಿ ಮೇಲಿನ ಸಾಧನೆ ಮಾಡಲಾಗಿದ್ದು, ಜೂನ್ ಮಾಹೆ ಒಂದರಲ್ಲೇ 5.72 ಲಕ್ಷ ಮಾನವ ದಿನ ಸೃಜನೆಯ ಗುರಿ ಹೊಂದಿ, 8.57 ಲಕ್ಷ ಮಾನವ ದಿನ ಸೃಜನೆಯ ಸಾಧನೆ ಮಾಡಿ ಶೇ 150% ರಷ್ಟು ಸಾಧನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಕೋವಿಡ್ -19 ಲಾಕ್ಡೌನ್ ಹಿನ್ನೆಲೆಯಲ್ಲಿ ಎಪ್ರೀಲ್ ಹಾಗೂ ಮೇ ಮಾಹೆಯಲ್ಲಿ ಈ ಯೋಜನೆಯಡಿ ಕಡಿಮೆ ಪ್ರಗತಿ ಸಾಧಿಸಿದ್ದರಿಂದ ಇದನ್ನು ಸರಿದೂಗಿಸಲು ಎಪ್ರೀಲ್ದಿಂದ ಜೂನ್ ಅಂತ್ಯಕ್ಕೆ 16 ಲಕ್ಷ ಮಾನವ ದಿನ ಸೃಜನೆಯ ಗುರಿ ಹೊಂದಿ 14.38 ಲಕ್ಷ ರಷ್ಟು ಮಾನವ ದಿನ ಸೃಜನೆ ಮಾಡಿ ಶೇ 90% ರಷ್ಟು ಮಾನವ ದಿನ ಸೃಜಿಸಿ ಸಾಧನೆ ಮಾಡಿದೆ ಎಂದು ಅವರು ತಿಳಿಸಿದರು.

ಅದರಂತೆ ಕಳೆದ ಎಪ್ರೀಲ್ ಒಂದರಿಂದ ಈವರೆಗೆ 12228 ಹೊಸ ಉದ್ಯೋಗ ಚೀಟಿಗಳನ್ನು ಸಹ ವಿತರಿಸಲಾಗಿದೆ ಎಂದು ಹೇಳಿದರು. ಇಂದು ಹೊನವಾಡದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 342 ಕಾಮರ್ಿಕರು ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ತಾವು ಭೇಟಿ ನೀಡಿ ಪರಿಶೀಲನೆ ಸಹ ನಡೆಸಲಾಯಿತೆಂದು ಅವರು ತಿಳಿಸಿದರು.