ಭೂಮಿ ಫಲವತ್ತತೆ ಸಂರಕ್ಷಣೆಗೆ ಸಾವಯವ ಗೊಬ್ಬರ ಬಳಕೆಗೆ ಒತ್ತು ನೀಡಿ: ಐಹೊಳೆ

Emphasis on use of organic manures for conservation of soil fertility: Aihole

ರಾಯಬಾಗ 06: ರೈತರು ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ, ಸಾವಯವ ಗೊಬ್ಬರ ಬಳಕೆಗೆ ಹೆಚ್ಚಿನ ಒತ್ತು ನೀಡಿ ಭೂಮಿ ಫಲವತ್ತತೆಯನ್ನು ಸಂರಕ್ಷಣೆ ಮಾಡಬೇಕೆಂದು ಶಾಸಕ ಡಿ.ಎಮ್‌.ಐಹೊಳೆಯವರು ಹೇಳಿದರು. 

ಗುರುವಾರ ಸಾಯಂಕಾಲ ತಾಲೂಕಿನ ಭಿರಡಿ ಗ್ರಾಮದ ಮಹಾದೇವ ದೇವಸ್ಥಾನ ಕಾರ್ಯಾಲಯದಲ್ಲಿ ಕೃಷಿ ಇಲಾಖೆ, ನ್ಯಾಷನಲ್ ಫರ್ಟಿಲೈಜರ್ ಮತ್ತು ವೀರಭದ್ರೇಶ್ವರ ಫರ್ಟಿಲೈಜರ್ ಸಹಯೋಗದಲ್ಲಿ ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಣ್ಣಿನ ಆರೋಗ್ಯ ವಿಚಾರ ಮತ್ತು ರೈತರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಿರಂತರ ರಾಸಾಯನಿಕ ಬಳಕೆಯಿಂದ ಭೂಮಿಯು ತನ್ನ ಸತ್ವವನ್ನು ಕಳೆದುಕೊಂಡು ಭೂಮಿ ಸವಳು ಜವಳು ಆಗುತ್ತದೆ. ರೈತರು ಕಬ್ಬಿನ ಬೆಳೆ ಜೊತೆಗೆ ದ್ವಿದಳ ಧಾನ್ಯಗಳನ್ನು ಬೆಳೆಯಬೇಕೆಂದರು.ವಿಜಯಪುರ ಕೃಷಿ ಸಹ ವಿಸ್ತಾರನ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ಶೇ.90 ರಷ್ಟು ಜೀವಿಗಳು ಮಣ್ಣಿನ ಮೇಲೆ ಅವಲಂಬಿತವಾಗಿವೆ. ಮಣ್ಣಿನ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ. ಹಲವಾರು ಕಾರಣಗಳಿಂದ ಸಾಗುವಳಿ ಭೂಮಿ ಕಡಿಮೆಯಗುತ್ತಿದೆ. ನಮ್ಮ ಬೆಳೆಗಳಿಗೆ 13 ಪೋಷಕಾಂಶಗಳ ಅವಶ್ಯಕತೆ ಇದೆ. ಪ್ರತಿಯೊಬ್ಬ ರೈತರು ಮಣ್ಣಿನ ಪರೀಕ್ಷೆ ಮಾಡಿಸಿ ಮಣ್ಣಿನ ಫಲವತ್ತತೆ ಹೆಚ್ಚಿಸಿ, ಸಾವಯವ ಗೊಬ್ಬರ ಹೆಚ್ಚು ಬಳಕೆ ಮಾಡುವುದರಿಂದ ಉತ್ತಮ ಇಳುವರಿ ಪಡೆಯಬಹುದು ಎಂದರು.  

ರಾಯಬಾಗ ಸಹಾಯಕ ಕೃಷಿ ನಿರ್ದೇಶಕ ವಿನೋದ ಮಾವರಕರ ಮಾತನಾಡಿ, ರೈತರು ವಾಣಿಜ್ಯ ಬೆಳೆಗಳ ಜೊತೆಗೆ ಜೀವನೋಪಾಯಕ್ಕೆ ಬೇಕಾದ ಪರ್ಯಾಯ ಬೆಳೆಗಳನ್ನು ಬೆಳೆಯಬೇಕೆಂದು ಹೇಳಿದರು. 

ಕಬ್ಬಿನ ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆದ ರೈತರನ್ನು ಸತ್ಕರಿಸಲಾಯಿತು. ಚಿಕ್ಕೋಡಿ ಸಿ.ಬಿ.ಕೆ.ಎಸ್‌.ಎಸ್‌.ಕೆ ಉಪಾಧ್ಯಕ್ಷ ತಾತ್ಯಾಸಾಬ ಕಾಟೆ, ನಿರ್ದೇಶಕರಾದ ಭರತೇಶ ಬನವಣೆ, ಮಲ್ಲಪ್ಪ ಮೈಶಾಳೆ, ಬೆಳಗಾವಿ ಎನ್‌.ಎಫ್‌.ಎಲ್‌. ಸಹಾಯಕ ವ್ಯವಸ್ಥಾಪಕ ಭರತ ಪಾಟೀಲ, ಮಹಾದೇವ ಬೋರಗಾಂವೆ, ಸದಾಶಿವ ಘೋರೆ​‍್ಡ, ಅಣ್ಣಾಸಾಹೇಬ ಖೆಮಲಾಪೂರೆ, ಮಹಾದೇವ ಸಂಕೇಶ್ವರ, ಶಾಂತನು ಇನಾಮದಾರ, ಜೆ.ಜೆ.ಇನಾಮದಾರ, ಶಂಕರ ಗಡ್ಕರಿ, ಎಸ್‌.ಕೆ.ಕುಂಬಾರಸೇರಿ ಗ್ರಾಮದ ರೈತರು ಭಾಗವಹಿಸಿದ್ದರು.