ವೈಜ್ಞಾನಿಕೋದ್ಯಮದ ಗುಣಮಟ್ಟ, ಪ್ರಸ್ತುತತೆಗೆ ಒತ್ತು ಅಗತ್ಯ: ರಾಷ್ಟ್ರಪತಿ

  ನವದಹಲಿ, ಫೆ 28 :    ಶುಕ್ರವಾರ ದೇಶದ ವೈಜ್ಞಾನಿಕೋದ್ಯಮದ ಗುಣಮಟ್ಟ ಹಾಗೂ ಪ್ರಸ್ತುತತೆ ಹೆಚ್ಚಿಸುವ ಮೂಲಕ ಜನತೆಯ ಅಭಿವೃದ್ಧಿ ಹಾಗೂ ಏಳಿಗೆಗೆ ಕೊಡುಗೆ ನೀಡುವ ಅಗತ್ಯವಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದ್ದಾರೆ.

  ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ರಾಷ್ಟ್ರೀಯ ವಿಜ್ಞಾನ ದಿನದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೋವಿಂದ್, “ನಾವು ಎಲ್ಲ ಬಗೆಯ ಜ್ಞಾನ ಮತ್ತು ಉಪಕರಣಗಳು, ಮಾನವಶಕ್ತಿ, ವಿಶ್ವವಿದ್ಯಾಲಯಗಳು ಮತ್ತು ಪ್ರಯೋಗಾಲಯಗಳೊಂದಿಗೆ ವಿಜ್ಞಾನ ಹಾಗೂ ವಿಶಾಲ ಸಮಾಜದ ಎಲ್ಲ ಮಧ್ಯಸ್ಥದಾರರನ್ನೂ ತಲುಪುವ ಗುರಿ  ಹೊಂದಬೇಕು” ಎಂದು ಸಲಹೆ ನೀಡಿದರು.

  “ವಿಜ್ಞಾನ ಮತ್ತು ತಂತ್ರಜ್ಞಾನದ ಮುಖೇನ ಪರಿಸರ, ಆರೋಗ್ಯ, ಆಹಾರ ಮತ್ತು ನೀರಿನ ಭದ್ರತೆ, ಸಂಪರ್ಕ ಸೇರಿದಂತೆ ಪ್ರಸ್ತುತ ನಮ್ಮೆದುರು ಇರುವ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯ” ಎಂದು ಹೇಳಿದರು. 

  ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು ‘ವೈಜ್ಞಾನಿಕ ಸಾಮಾಜಿಕ ಜವಾಬ್ದಾರಿ’ ಎಂಬ ಪರಿಕಲ್ಪನೆಯೊಂದಿಗೆ  ಸಾಮಾಜಿಕ ಹೊಣೆಗಾರಿಕೆಯನ್ನು ಪ್ರತಿಪಾದಿಸುತ್ತಿರುವುದು ಸಂತಸ ತಂದಿದೆ.  ಇದರಿಂದ ವೈಜ್ಞಾನಿಕ ಮೂಲಸೌಕರ್ಯ, ಕಾಲೇಜು ಸಿಬ್ಬಂದಿಯ ಮಾರ್ಗದರ್ಶನ, ಸಂಶೋಧನೆಯ ಸಂಸ್ಕೃತಿಯ ಸೃಷ್ಟಿಗೆ ಅನುವಾಗುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿಪ್ರಾಯಪಟ್ಟರು.