ವಿದ್ಯುಚ್ಚಕ್ತಿ ಎನ್ನುವುದು ಈಗಿನ ಕಾಲದಲ್ಲಿ ಎಲ್ಲರಿಗೂ ಅತ್ಯವಶ್ಯಕ: ಪಂಚಾಯತಿ ಉಪಾಧ್ಯಕ್ಷ ಪ್ರಕಾಶ

ಲೋಕದರ್ಶನ ವರದಿ

ಶಿರಹಟ್ಟಿ 13: ವಿದ್ಯುಚ್ಚಕ್ತಿ ಎನ್ನುವುದು ಈಗಿನ ಕಾಲದಲ್ಲಿ ಎಲ್ಲರಿಗೂ ಅತ್ಯವಶ್ಯಕವಾಗಿ ಸರ್ವ ಕೆಲಸಗಳಿಗೂ ಅಗತ್ಯವಾದ ಅಂಗವಾಗಿದ್ದು, ಅದು ಪೋಲಾಗದಂತೆ ಸೂಕ್ತ ಕ್ರಮ ಕೈಗೊಳ್ಳುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಾಗಡಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪ್ರಕಾಶ ಕೋರಿ ಹೇಳಿದರು.

ಅವರು ಹೆಸ್ಕಾಂ ಇಲಾಖೆಯ ವತಿಯಿಂದ ತಾಲೂಕಿನ ಮಾಗಡಿ ಗ್ರಾಮದಲ್ಲಿ ನಡೆದ ವಿದ್ಯುತ ಉಳಿತಾಯ, ಬಳಕೆ ಹಾಗೂ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯುತ ಬಳಿಕೆ ಮಾಡುವಾಗ ಅದರ ಸುರಕ್ಷತಾ ಕ್ರಮಗಳನ್ನು ತಿಳಿದುಕೊಂಡು ಅವಗಡ ಆಗದಂತೆ ಎಚ್ಚರ ವಹಿಸಬೇಕು. ಅಲ್ಲದೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಜನರಿಗಾಗಿ ಹಗಲಿರುಳು ದುಡಿಯುತ್ತಿರುವ ವಿದ್ಯುತ ಇಲಾಖೆಯ ಸಿಬ್ಬಂದಿಯ ಕಾರ್ಯವೈಖರಿ ಶ್ಲಾಘನೀಯ ಎಂದು ಹೇಳಿದರು.

ನಂತರ ಇಲಾಖೆಯ ಅಧಿಕಾರಿ ಎಮ್.ಟಿ.ದೊಡ್ಡಮನಿ ಮಾತನಾಡಿ ಅವಶ್ಯವಿದ್ದಾಗ ಮಾತ್ರ ವಿದ್ಯುತ ಬಳಸುವದು ಒಂದು ಉಳಿತಾಯದ ಕ್ರಮವಾದರೆ, ಇದರ ಜೊತೆಗೆ ಐ.ಎಸ್.ಐ ಅಂಗೀಕೃತ ಸಾಮಗ್ರಿಗಳನ್ನು ಬಳಸುವದು ಮತ್ತು ವಿದ್ಯುತ ಸಂಪರ್ಕಗಳ ತೆರೆದ ಭಾಗವನ್ನು ಇನ್ಸುಲೇಷನ್ ಟೇಪನಿಂದ ಸುತ್ತುವದು ಕೂಡಾ ಉಳಿತಾಯದ ಒಂದು ಕ್ರಮವಾಗಿದೆ. ವಿದ್ಯುತ ಅವಘಡ ಸಂಭವಿಸಿದಾಗ ಕೂಡಲೆ ಇಲಾಖೆಯ ಗಮನಕ್ಕೆ ತರುವದು ಸೂಕ್ತ ಮತ್ತು ಮನೆಗಳಲ್ಲಿ ಹೆಚ್ಚು ಎಲ್.ಇ.ಡಿ ದೀಪಗಳನ್ನು ಬಳಸುವದರಿಂದ ಹೆಚ್ಚು ವಿದ್ಯುತ್ ಉಳಿತಾಯ ಮಾಡಬಹುದು ಎಂದು ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಶೇಖಪ್ಪ ಬಡ್ನಿ, ವೀರಯ್ಯ ಮಠಪತಿ, ಶಿವರಾಜಗೌಡ ಪಾಟೀಲ, ವೀರಣ್ಣ ಕೆ.ಅಂಗಡಿ, ಇಲಾಖೆಯ ಅಧಿಕಾರಿಗಳಾದ ಗುರುರಾಜ. ಸಿ ಮತ್ತು ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಇದ್ದರು. ಶಿರಹಟ್ಟಿ ವಿದ್ಯುತ ಇಲಾಖೆಯ ಶಾಖಾಧಿಕಾರಿ ವಿ.ಎಸ್.ಬಡಿಗೇರ ನಿರೂಪಿಸಿದರು.