ಗ್ರಾಮ ಪಂಚಾಯತ್‌ಗೆ ಚುನಾವಣೆ ನಡೆಸಲೇಬೇಕು; ಸಿದ್ದರಾಮಯ್ಯ

ಬೆಂಗಳೂರು, ಮೇ 22,ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಗ್ರಾಮ ಪಂಚಾಯಿತಿ  ಚುನಾವಣೆಯನ್ನು ಮುಂದೂಡಲು ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್‌ಗೆ ಈ ಚುನಾವಣೆ  ನಡೆಯಲೇಬೇಕಿದೆ‌ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ಗ್ರಾಮ ಪಂಚಾಯಿತಿ  ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ  ಮಾತನಾಡಿದ ಸಿದ್ದರಾಮಯ್ಯ,  ಈಗಾಗಲೇ ಸರ್ಕಾರ ಚುನಾವಣಾ ದಿನಾಂಕ ನಿಗದಿ ಮಾಡಬೇಕಿತ್ತು,  ಮೀಸಲಾತಿ ಘೋಷಣೆ ಮಾಡಬೇಕಿತ್ತು. ಆದರೆ ಅದ್ಯಾವುದನ್ನೂ ಮಾಡಲೇ ಇಲ್ಲ. ಗ್ರಾಮೀಣಾಭಿವೃದ್ಧಿ  ಸಚಿವ ಈಶ್ವರಪ್ಪ ಚುನಾವಣೆ ಮುಂದೂಡುವುದಾಗಿ ಹೇಳುತ್ತಲೇ ಬರುತ್ತಿದ್ದಾರೆ. ಆದರೆ ಚುನಾವಣೆ  ಮಾಡಲೇ ಬೇಕು. ಚುನಾವಣೆ ಮುಂದೂಡಬಾರದೆಂದು ರಾಜ್ಯ ಚುನಾವಣಾ ಆಯುಕ್ತರಿಗೆ ಮನವಿ  ಮಾಡಿದ್ದೇವೆ‌. ಆಯುಕ್ತರು ನಮಗೆ ಚುನಾವಣೆ ನಡೆಸುವ ಭರವಸೆ ನೀಡಿದ್ದಾರೆ ಎಂದರು.
ಕೆಪಿಸಿಸಿ  ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಕೋವಿಡ್ ಕಾರಣ ನೀಡಿ ಚುನಾವಣೆ ನಡೆಸುವುದಿಲ್ಲ  ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಸಂಬಂಧ ಎಲ್ಲಾ ಜಿಲ್ಲಾಧಿಕಾರಿಗಳಿಗೂ ರಾಜ್ಯ ಸರ್ಕಾರ  ಸೂಚನೆ ನೀಡಿದೆ. ಈ ಪಂಚಾಯತಿ ಚುನಾವಣೆಯಲ್ಲಿ ಯಾವುದೇ ಗುರುತಿನ ಮೇಲೆ ಇದು ನಡೆಯುವುದಿಲ್ಲ  ಎಂದ ಮೇಲೆ ಸರ್ಕಾರ ಏಕೆ ಚುನಾವಣೆ ಮಾಡುತ್ತಿಲ್ಲ. ಚುನಾವಣಾ ಆಯೋಗದ ಕೆಲಸ ಚುನಾವಣೆ  ನಡೆಸುವುದು. ಆದರೆ ಆಯೋಗದ ಮೇಲೆ ಸರ್ಕಾರ ಚುನಾವಣೆ ನಡೆಸದಂತೆ ಪ್ರಭಾವ ಒತ್ತಡ  ಹೇರುತ್ತಿದೆ‌. ಆದರೆ ಸರ್ಕಾರದ ಯಾವುದೇ ಒತ್ತಡಕ್ಕೂ ಚುನಾವಣಾ ಆಯೋಗ ಮಣಿಯಬಾರದು‌ ಎಂದರು.ಸದ್ಯ ಚುನಾವಣೆ ನಡೆಸದಂತೆ ಮನವಿ ನೀಡಿದ್ದೇವೆ. ಮುಂದಿನ ಕ್ರಮ ನೋಡಿಕೊಂಡು ಹೋರಾಟ ಮಾಡುವುದಾಗಿ ಶಿವಕುಮಾರ್  ಎಚ್ಚರಿಸಿದರು.