ಚೆನ್ನೈ, ಆ 5 ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತದಾನ ಪ್ರಗತಿಯಲ್ಲಿದ್ದು, ಬೆಳಗ್ಗೆ 7 ಗಂಟೆಗೆ ಬಿಗಿ ಭದ್ರತೆ ನಡುವೆ ಮತದಾನ ಆರಂಭಗೊಂಡಿದೆ. ಸಾರ್ವತ್ರಿಕ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ಕ್ಷೇತ್ರಕ್ಕೂ ಚುನಾವಣೆ ನಿಗದಿಯಾಗಿತ್ತು. ಆದರೆ ಕ್ಷೇತ್ರದಲ್ಲಿ ಭಾರೀ ಪ್ರಮಾಣದ ಅಕ್ರಮ ಹಣ ದೊರೆತ ಕಾರಣ ಚುನಾವಣೆಯನ್ನು ರದ್ದುಪಡಿಸ ಲಾಗಿತ್ತು. 9.58 ಮಹಿಳೆಯರು ಸೇರಿದಂತೆ 18.85 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹತೆ ಪಡೆದಿದ್ದು, ಇಂದು ಸಂಜೆಯವರೆಗೂ ಮತದಾನ ನಡೆಯಲಿದೆ. ಮೂವರು ಮಹಿಳಾ ಅಭ್ಯರ್ಥಿಗಳು ಸೇರಿ 28 ಮಂದಿ ಕಣದಲ್ಲಿದ್ದು, ಹೆಚ್ಚಿನವರು ಪಕ್ಷೇತರರಾಗಿದ್ದಾರೆ. ವೆಲ್ಲೂರು ಲೋಕಸಭಾ ಕ್ಷೇತ್ರವು ವೆಲ್ಲೂರು, ಅನೈಕಟ್ಟು, ಕಿಲವೈಥಿನನ್ ಕುಪ್ಪಮ್, ಗುಡಿಯಾಟ್ಟಮ್, ವಾಣಿಯಂಬಾಡಿ ಮತ್ತು ಅಂಬೂರು ಸೇರಿ 6 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, 690 ಸ್ಥಳಗಳಲ್ಲಿ 1553 ಮತಗಟ್ಟೆಗಳನ್ನು ತೆರೆಯಲಾಗಿದೆ. ಅವುಗಳಲ್ಲಿ 133 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಪರಿಗಣಿಸಲಾಗಿದೆ 3000 ಪೊಲೀಸ್ ಸಿಬ್ಬಂದಿ, 20 ಕೇಂದ್ರೀಯ ಮೀಸಲು ಪಡೆಯನ್ನು ಚುನಾವಣಾ ಭದ್ರತೆಗಾಗಿ ನಿಯೋಜಿಸಲಾಗಿದೆ. ಇವಿಎಂಗಳು ಮತ್ತು ವಿವಿ ಪ್ಯಾಟ್ಗಳನ್ನು ಎಲ್ಲಾ ಮತಗಟ್ಟೆಗಳಲ್ಲಿ ಬಳಸಲಾಗುತ್ತದೆ. ಸಾಕಷ್ಟು ಇವಿಎಂಗಳು ಮತ್ತು ವಿವಿ ಪ್ಯಾಟ್ಗಳನ್ನು ಒದಗಿಸಲಾಗಿದೆ. ಪಾರದರ್ಶಕ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಎಂದು ಚುನಾವಣಾ ಆಯೋಗ ತಿಳಿಸಿದೆ. 3732 ಇವಿಎಂಗಳು, 1886 ಕಂಟ್ರೋಲ್ ಯೂನಿಟ್, 1998 ವಿವಿಪ್ಯಾಟ್ಗಳನ್ನು ಈ ಬಾರಿಯ ಚುನಾವಣೆಯಲ್ಲಿ ಬಳಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.