ಫೆ 10 ರಿಂದ ಏಕ್ ಭಾರತ್ ಶ್ರೇಷ್ಠ್ ಭಾರತ್ ಅಭಿಯಾನ

ನವದೆಹಲಿ, ಫೆ 10, ಭಾರತದ ಏಕತೆ ಮತ್ತು ವೈವಿಧ್ಯತೆಯನ್ನು ಸಾರುವ ಏಕ್ ಭಾರತ್ ಶ್ರೇಷ್ಠ್ ಭಾರತ್ ಅಭಿಯಾನ ಸೋಮವಾರದಿಂದ ದೇಶಾದ್ಯಂತ ಆರಂಭವಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆರಂಭಿಸಿರುವ 18 ದಿನಗಳ ಈ ಅಭಿಯಾನ ಈ ತಿಂಗಳ 28 ರವರೆಗೆ ನಡೆಯಲಿದೆ. 2015 ರಲ್ಲಿ ರಾಷ್ಟ್ರೀಯ ಏಕತಾ ದಿವಸ್ ಆಚರಣೆ ಸಂದರ್ಭದಲ್ಲಿ ದೇಶದಲ್ಲಿನ ವಿವಿಧ ಪ್ರದೇಶಗಳ ಸಾಂಸ್ಕೃತಿಕ ವೈವಿಧ್ಯತೆಯನ್ನು ಸಂಪರ್ಕಿಸುವ ಈ ಚಿಂತನೆಯನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು,

ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಉತ್ಸವದಲ್ಲಿ ಭಾಗಿಯಾಗಲಿದ್ದು ಇದು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಪರಿಕಲ್ಪನೆಯನ್ನು ಉತ್ತೇಜಿಸುತ್ತದೆ.ಈ ಉತ್ಸವದ ಸಂದರ್ಭದಲ್ಲಿ ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವನ್ನು ಇತರ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಂಪರ್ಕಿಸಿ ಭಾಷೆ, ಸಂಸ್ಕೃತಿ, ಹಬ್ಬ ಹರಿದಿನ, ಪರಂಪರೆ, ಪ್ರವಾಸೋದ್ಯಮಗಳ ವೈಶಿಷ್ಠ್ಯತೆಗಳ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸಲಾಗಿದೆ. ಜಮ್ಮು ಕಾಶ್ಮೀರವನ್ನು ತಮಿಳುನಾಡಿನೊಂದಿಗೂ, ಪಂಜಾಬ್ ರಾಜ್ಯವನ್ನು ಆಂಧ್ರಪ್ರದೇಶದೊಂದಿಗೂ, ಉತ್ತರಾಖಂಡವನ್ನು ಕರ್ನಾಟಕದೊಂದಿಗೂ ಹೀಗೆ ವಿವಿಧ ರಾಜ್ಯಗಳನ್ನು ಇತರ ರಾಜ್ಯಗಳ ಜೋಡಿಯನ್ನಾಗಿ ಮಾಡಲಾಗಿದೆ. ಕರ್ನಾಟಕದಲ್ಲಿ ಉತ್ತರಾಖಂಡದ ಕಲೆ, ವೈಶಿಷ್ಠ್ಯತೆಗಳ ಪ್ರದರ್ಶನವಾದರೆ ಕರ್ನಾಟಕದ ಭವ್ಯ ಪರಂಪರೆ ಉತ್ತರಾಖಂಡದಲ್ಲಿ ಅನಾವರಣವಾಗಲಿದೆ.