ಭುವನೇಶ್ವರ, ಜ 29 : ಒಡಿಶಾದ ಗಂಜಾಂ ಜಿಲ್ಲೆಯ ಪಲುಖೇಲಾದಲ್ಲಿನ ತಪ್ತಪಾಣಿ ಘಾಟಿ ಬಳಿ ಇಂದು ಸೇತುವೆಯೊಂದರಿಂದ ಬಸ್ ವೊಂದು ಉರುಳಿಬಿದ್ದು ಎಂಟು ಮಂದಿ ಪ್ರಯಾಣಿಕರು ಮೃತಪಟ್ಟು, ಇತರ 40 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಅಪಘಾತಕ್ಕೀಡಾದ ಬಸ್ ರಾಯಗಡದಿಂದ ಬೆರ್ಹಾಂಪುರಕ್ಕೆ ಹೋಗುತ್ತಿದ್ದಾಗ ಬೆಳಗಿನ ಜಾವ 3 ಗಂಟೆಗೆ ಅಪಘಾತ ಸಂಭವಿಸಿದೆ. ಚಾಲಕ ವಾಹನದ ಮೇಲೆ ನಿಯಂತ್ರಣವನ್ನು ಕಳೆದುಕೊಂಡು ದುರ್ಘಟನೆ ಸಂಭವಿಸಿದೆ. ಬಹುಶಃ ಬ್ರೇಕ್ ವೈಫಲ್ಯದಿಂದ ಬಸ್ ಸೇತುವೆಯಿಂದ ಕೆಳಕ್ಕೆ ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಹಾನಾ, ಸಂಖೆಮುಂಡಿ, ದಿಗಾಪಹಂಡಿ ಮತ್ತು ಬೆರ್ಹಾಂಪುರದ ಅಗ್ನಿಶಾಮಕ ದಳದ ಕನಿಷ್ಠ 50 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿ ಬಸ್ ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಅಪಘಾತದ ಸ್ಥಳದಲ್ಲಿ ನೀರು ತುಂಬಿರುವುದರಿಂದ ರಕ್ಷಣಾ ಕಾರ್ಯಾಚರಣೆ ನಡೆಸಲು ಅಗ್ನಿಶಾಮಕ ಸಿಬ್ಬಂದಿ ಕಷ್ಟಪಟ್ಟಿದ್ದಾರೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಸುಕಾಂತ್ ಸೇಥಿ ತಿಳಿಸಿದ್ದಾರೆ.
ತಲಕೆಳಗಾದ ಬಸ್‌ನಿಂದ ಪ್ರಯಾಣಿಕರನ್ನು ರಕ್ಷಿಸಲು ಎಲ್ಲಾ ಆಧುನಿಕ ಸಾಧನಗಳು ಮತ್ತು ಗ್ಯಾಸ್ ಕಟ್ಟರ್‌ಗಳನ್ನು ಬಳಸಲಾಗಿದೆ ಎಂದು ಅವರು ಹೇಳಿದರು.
ಗಾಯಗೊಂಡ ಎಲ್ಲರನ್ನು ಚಿಕಿತ್ಸೆಗಾಗಿ ದಿಗಪಗಂಡಿ ಆಸ್ಪತ್ರೆ ಮತ್ತು ಬೆರ್ಹಾಂಪುರ ಎಂ ಕೆ ಸಿ ಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ದುರಂತ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.ಮೃತರ ಹತ್ತಿರ ರಕ್ತಸಂಬಂಧಿಗಳಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿರುವ ಮುಖ್ಯಮಂತ್ರಿ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ.