ಲೋಕದರ್ಶನ ವರದಿ
ಕೊಪ್ಪಳ: ನಗರದಲ್ಲಿ ಈದ್ ಮಿಲಾದ್ ಹಬ್ಬವನ್ನು ರವಿವಾರ ಶ್ರದ್ಧೆ ಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಮಹಮ್ಮದ್ ಪೈಗಂಬರ್ ಜನ್ಮದಿನದಂದು ಸಂಭ್ರಮದಿಂದ ಆಚರಿಸಲಾಗುವ ಈ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಇಸ್ಲಾಂ ಧರ್ಮ ಸಂಕೇತದ ಧ್ವಜಗಳಿಂದ ಅಲಂಕರಿಸಲಾಗಿತ್ತು.
ನಗರದ ವಿವಿಧ ಬಡಾವಣೆಗಳಲ್ಲಿರುವ ಮಸೀದಿಗಳಲ್ಲಿ ಗುಂಪುಗೂಡಿದ ಬಹುತೇಕ ಮಂದಿ ನಂತರ ಪ್ರಮುಖ ಬೀದಿಗಳಾದ ಕೋಟೆ ರಸ್ತೆ, ಗಡಿಯಾರ ಗಂಭ, ಶಾರದಾ ಚಿತ್ರಮಂದಿರ, ಸಂತೆ ಮಾರುಕಟ್ಟೆ, ಅಂಬೇಡ್ಕರ್ ವೃತ್ತ, ಕಿತ್ತೂರು ಚನ್ನಮ್ಮ ವೃತ್ತ, ಜವಾಹರ ರಸ್ತೆ ಮೂಲಕ ಮೆರವಣಿಗೆಯಲ್ಲಿ ಇಸ್ಲಾಂ ಧರ್ಮ ಸಂಕೇತದ ಧ್ವಜ, ಹಾಗೂ ಮುಸಲ್ಮಾನರ ಪವಿತ್ರ ಕ್ಷೇತ್ರಗಳಾದ ಮೆಕ್ಕಾ, ಮದೀನ ಸೇರಿದಂತೆ ಇತರ ಸ್ತಬ್ಧಚಿತ್ರ ಮಾದರಿಯ ಚಿತ್ರಗಳನ್ನು ಆಟೋ ಹಾಗೂ ಟ್ರ್ಯಾಕ್ಟರ್ನಲ್ಲಿ ಕೂರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಪುಟ್ಟ-ಪುಟ್ಟ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿ ಬಾವುಟಗಳನ್ನು ಹಿಡಿದುಕೊಂಡು ಮಹಮ್ಮದ್ ಪೈಗಂಬರ್ ಅವರನ್ನು ಸ್ಮರಿಸಿದರು. ಮೆರವಣಿಗೆಯ ಉದ್ದಕ್ಕೂ ನಗರದ ಪ್ರಮುಖ ವೃತ್ತಗಳಲ್ಲಿ ವಿವಿಧ ತರಹ ಹಣ್ಣು - ಹಂಪಲಗಳು, ಸಿಹಿ ತಿಂಡಿ ಹಾಗೂ ಶರಭತ್ ವಿತರಿಸಿದರು. ದಾರಿ ಉದ್ದಕ್ಕೂ ನೀರಿನ ಕಪ್, ತಿಂಡಿ, ತಿನಿಸುಗಳನ್ನು ತಿಂದು ಬಿಸಾಡಿದ ಪೇಪರ್ ಪ್ಲೇಟ್ ಗಳನ್ನು ಹಬ್ಬ ಮೆರವಣಿಗೆಯ ಕಾರ್ಯಕರ್ತರು ಬುಟ್ಟಿಗಳನ್ನು ಹಿಡಿದು ತಕ್ಷಣ ಅವುಗಳನ್ನು ತೆಗೆದು ಸ್ವಚ್ಛತೆಗೆ ಮಾದರಿಯಾದರು. ಮಕ್ಕಳು ಸೇರಿದಂತೆ ಹಿರಿಯರು ಹೊಸ ಉಡುಪುಗಳನ್ನು ತೊಟ್ಟು ಸಂತಸಪಟ್ಟರು. ನಂತರ ಎಲ್ಲರೂ ಸಾಮೂಹಿಕ ಮಹಮ್ಮದ್ ಪೈಗಂಬರ್ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪರಸ್ಪರ ಶುಭ ಹಾರೈಸಿದರು.
ಮೆರವಣಿಗೆಯಲ್ಲಿ ಹಲವು ಪಕ್ಷದ ಮುಖಂಡರು ಸೇರಿದಂತೆ ನೂರಾರು ಮುಸ್ಲಿಂ ಬಾಂಧವರು ಭಾಗವಹಿಸಿದರು. ಹಬ್ಬದ ದಿನ ಶಾಂತಿ ಸುವ್ಯವಸ್ಥೆಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.