ನವದೆಹಲಿ 12: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಈದ್ ಅಲ್-ಅಧಾ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿ, ಮಾನವೀಯತೆ ಪ್ರೀತಿ, ಭ್ರಾತೃತ್ವ ಮತ್ತು ಸೇವೆಯನ್ನು ಈ ಹಬ್ಬ ಸಂಕೇತಿಸುತ್ತದೆ ಎಂದಿದ್ದಾರೆ.
ದೇಶದ ಎಲ್ಲ ನಾಗರಿಕರಿಗೆ, ವಿಶೇಷವಾಗಿ ಭಾರತ ಮತ್ತು ವಿದೇಶದಲ್ಲಿರುವ ಮುಸ್ಲಿಂ ಸಹೋದರ ಸಹೋದರಿಯರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿರುವ ಕೋವಿಂದ್, ಈದ್ ಪ್ರೀತಿ, ಭ್ರಾತೃತ್ವ ಮತ್ತು ಮಾನವೀಯ ಸೇವೆಯನ್ನು ಸಂಕೇತಿಸುತ್ತದೆ. ನಮ್ಮ ಸಂಯೋಜಿತ ಸಂಸ್ಕೃತಿಯನ್ನು ಪ್ರತಿನಿಧಿಸುವ ಈ ಸಾರ್ವತ್ರಿಕ ಮೌಲ್ಯಗಳಿಗೆ ನಾವು ಬದ್ಧರಾಗಿರೋಣ ಎಂದು ಕರೆ ನೀಡಿದ್ದಾರೆ. ಈದ್ ಅಧಾಕ್ಕೆ ಶುಭ ಕೋರಿ ಟ್ವೀಟ್ ಮಾಡಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಈದ್-ಉಲ್-ಅಧಾನ ಉದಾತ್ತ ಆದರ್ಶಗಳು ನಮ್ಮ ಜೀವನವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಸಮೃದ್ಧಗೊಳಿಸಲಿ ಮತ್ತು ದೇಶಕ್ಕೆ ಸಮೃದ್ಧಿಯನ್ನು ತರಲಿ ಎಂದು ಹಾರೈಸಿದ್ದಾರೆ. ಈ ಹಬ್ಬವು ಭಕ್ತಿ, ನಂಬಿಕೆ ಮತ್ತು ತ್ಯಾಗದ ಸದ್ಗುಣಗಳಿಗೆ ಒಂದು ಸಂಕೇತವಾಗಿದೆ ಮತ್ತು ಸಹೋದರತ್ವ, ಸಹಾನುಭೂತಿ ಮತ್ತು ಐಕ್ಯತೆಯ ಭಾವನೆಗಳನ್ನು ಪ್ರೇರೇಪಿಸುತ್ತದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ, ಈದ್ ಉಲ್-ಅಧಾ ಸಂದರ್ಭದಲ್ಲಿ ದೇಶಕ್ಕೆ ನನ್ನ ಶುಭಾಶಯಗಳು. ಇದು ನಮ್ಮ ಸಮಾಜದಲ್ಲಿ ಶಾಂತಿ ಮತ್ತು ಸಂತೋಷದ ಮನೋಭಾವವನ್ನು ಹೆಚ್ಚಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ