ಮಾಸ್ಕೋ, ನ 7: ಈಜಿಪ್ಟ್, ಇಥಿಯೋಪಿಯಾ ಹಾಗೂ ಸೂಡಾನ್ ರಾಷ್ಟ್ರಗಳು ಕೊನೆಗೂ ವಿವಾದ ನೀಲಿ ನೈಲ್ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಗ್ರಾಂಡ್ ಇಥಿಯೋಪಿಯನ್ ರಿನೈಸೆನ್ಸ್ ಅಣೆಕಟ್ಟಿನ ಬಿಕ್ಕಟ್ಟನ್ನು ಮಾತುಕತೆ ಮೂಡಲಕ ಬಗೆ ಹರಿಸಿಕೊಳ್ಳಲು ಮುಂದಾಗಿವೆ. ಈ ಕುರಿತು ಮೂರು ರಾಷ್ಟ್ರಗಳ ವಿದೇಶಾಂಗ ಸಚಿವರುಗಳು ಜಂಟಿ ಹೇಳಿಕೆ ನೀಡಿದ್ದು, ಜನವರಿ 15ರೊಳಗೆ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಯತ್ನಿಸುವುದಾಗಿ ತಿಳಿಸಿದ್ದಾರೆ. ಈ ಮೂರು ನಾಯಕರು ತಮ್ಮ ತಂಡದೊಂದಿಗೆ ಬುಧವಾರ ಅಮೆರಿಕದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಭೆಯಲ್ಲಿ ಅಮೆರಿಕದ ಕಂದಾಯ ಇಲಾಖೆಯ ಸಚಿವ ಮತ್ತು ವಿಶ್ವ ಬ್ಯಾಂಕ್ ಮುಖ್ಯಸ್ಥರು ಭಾಗವಹಿಸಿದ್ದರು. ಗ್ರಾಂಡ್ ಇಥಿಯೋಪಿಯನ್ ರಿನೈಸೆನ್ಸ್ ಅಣೆಕಟ್ಟಿನ ಭರ್ತಿ ಹಾಗೂ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ 2015ರ ಸಿದ್ಧಾಂತಗಳ ಘೋಷಣೆಯ ಅನುಸಾರ ಸಮಗ್ರ, ಸಹಕಾರಿ, ಅಳವಡಿಕೆಯ, ಸುಸ್ಥಿರ ಮತ್ತು ಪರಸ್ಪರ ಲಾಭದಾಯಕ ಒಪ್ಪಂದಕ್ಕೆ ಒಳಡುವ ಜಂಟಿ ಬದ್ಧತೆಯನ್ನು ಈ ನಾಯಕರು ಪುನರುಚ್ಚರಿಸಿದರು. ಸಚಿವರುಗಳು 2020ರ ಜನವಿರ 15ರೊಳಗೆ ಅಣೆಕಟ್ಟಿನ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಒಪ್ಪಿಗೆ ಸೂಚಿಸಿದರು ಎಂದು ಜಂಟಿ ಹೇಳಿಕೆ ತಿಳಿಸಿದೆ. ಈ ಸಂಬಂಧ ಜಲ ಸಚಿವರ ಮಟ್ಟದಲ್ಲಿ ನಾಲ್ಕು ತಾಂತ್ರಿಕ ಸರ್ಕಾರಿ ಸಭೆಗಳನ್ನು ನಡೆಸಲು ನಾಯಕರು ಸಮ್ಮತ ಸೂಚಿಸಿದರು. ಎಲ್ಲಾ ನಾಯಕರು ತಮ್ಮ ದೇಶಗಳ ಅಭಿವೃದ್ಧಿಗಾಗಿ ನೈಲ್ ನದಿಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು ಎನ್ನಲಾಗಿದೆ. 2012ರಲ್ಲಿ ಇಥಿಯೋಪಿಯಾ ಆಪ್ರಿಕಾದ ಅತಿ ದೊಡ್ಡ ಜಲವಿದ್ಯುತ್ ಘಟಕ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿತ್ತು. ಆದರೆ, ಇದರಿಂದ ಅಡ್ಡಿಸ್ ಅಬಾಬ ಮತ್ತು ಕೈರೋ ನಡುವೆ ಬಿಕ್ಕಟ್ಟು ಏರ್ಪಟ್ಟಿತ್ತು. ಇದರಿಂದ ಈಜಿಪ್ಟ್ ಹಾಗೂ ಸೂಡಾನ್ ಗೆ ನೀರಿನ ಕೊರತೆ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿತ್ತು.