ಮೌಲ್ಯವಿಲ್ಲದ ಶಿಕ್ಷಣ ಅಪ್ರಯೋಜಕ: ಈಶ್ವರ ಮಮದಾಪೂರ

ಗೋಕಾಕ 19: ಮೌಲ್ಯವಿಲ್ಲದ ಶಿಕ್ಷಣ ಅಪ್ರಯೋಜಕವಾಗಿದ್ದು ಮೌಲ್ಯ ಮತ್ತು ನೀತಿಯುಕ್ತ ಶಿಕ್ಷಣದಿಂದ ಮಾತ್ರ ಸ್ವಚ್ಛ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆ. ಮಾನವೀಯ ಮೌಲ್ಯಗಳು ಮತ್ತು ಉತ್ತಮ ಸಂಸ್ಕಾರವನ್ನು ಬಿತ್ತುವ ಆ ನಿಟ್ಟಿನಲ್ಲಿ ಯುವಕರನ್ನು ಬೆಳೆಸುವ ಜವಾಬ್ದಾರಿ ಪಾಲಕರು ಹಾಗೂ ಶಿಕ್ಷಕರ ಮೇಲಿದೆ ಎಂದು ಕವಿ ಶಿಕ್ಷಕ ಈಶ್ವರ ಮಮದಾಪೂರ ಹೇಳಿದರು.         ಗೋಕಾಕದ ಬಸವಜ್ಯೋತಿ ಐ ಟಿ ಐ ಕಾಲೇಜ ದಲ್ಲಿ ಲಯನ್ಸ್‌ ಅಂತರಾಷ್ಟ್ರೀಯ ಡಿಸ್ಟ್ರಿಕ್ಸ್‌ 317 ಬಿ ಇದರಡಿಯಲ್ಲಿ  ಗೋಕಾಕ್ ಲಯನ್ಸ್‌ ಕ್ಲಬ್ ವತಿಯಿಂದ ಜರುಗಿದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. 

ಗೋಕಾಕದ ಲಯನ್ಸ್‌ ಸಂಸ್ಥೆಯು  ಅನೇಕ ಸಮಾಜ ಉಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಉತ್ತಮ ಕಾರ್ಯ ಮಾಡುತ್ತಿದ್ದು ಇದೀಗ ಶಿಕ್ಷಕರನ್ನು ಗೌರವಿಸುವುದರ ಮೂಲಕ ಒಂದು ಉತ್ತಮ ಕಾರ್ಯವನ್ನು ಮಾಡಿದ್ದು ಹೆಮ್ಮೆಯ ಸಂಗತಿ. ಶೈಕ್ಷಣಿಕ, ಸಾಹಿತ್ಯಿಕ ಕ್ಷೇತ್ರದ ಸಾಧಕರನ್ನು ಪ್ರೋತ್ಸಾಹಿಸುವ ಬೆಂಬಲಿಸುವ ಕಾರ್ಯ ಮುಂದುವರೆಯಲಿ ಎಂದು ಆಶಿಸಿದರು.  ಎಂ ಜಿ ಎಫ್ ಲಯನ್ ಎಸ್ ಜಿ ಸಿದ್ದಾಪೂರಮಠ ಮಾತನಾಡುತ್ತಾ ಗುರುವಿನ ಗುಲಾಮನಾಗುವ ತನಕ ಮುಕ್ತಿ ದೊರೆಯದು ಎಂಬ ದಾರ್ಶನಿಕರ ಮಾತನ್ನು ಮರೆಯದೆ ಗುರುಗಳ ಹಿತೋಪದೇಶವನ್ನು ಪಾಲಿಸಿದಾಗ ಮಾತ್ರ ಸಾಧನೆ ಮುಟ್ಟಲು ಸಾಧ್ಯ ಎಂದರು.  ಡಾ. ಅಶೋಕ ಎಸ್ ಪಾಟೀಲ್ ಮಾತನಾಡುತ್ತಾ ಹಿಂದೆ ಗುರುವಿನ ಬಲವಿದ್ದಾಗ ಮಾತ್ರ ಮುಂದಿನ ಗುರಿ ಸಾಧಿಸಲು ಸಾಧ್ಯವಿದೆ ಎಂದರು             

ಅಧ್ಯಕ್ಷತೆಯನ್ನು ವಹಿಸಿದ್ದ ಗೋಕಾಕ್ ಲಯನ್ಸ್‌ ಕ್ಲಬ್ ಅಧ್ಯಕ್ಷರು ಹಾಗೂ ಬಸಜ್ಯೋತಿ ಐ ಟಿ ಐ ಕಾಲೇಜಿನ ಚೇರಮನ್ ಅಶೋಕ ಲಗಮಪ್ಪಗೋಳ ಮಾತನಾಡುತ್ತಾ ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ ಕೂಡ ಆತ ಗುರುವಿನ ವಿದ್ಯಾರ್ಥಿಯೇ ಆಗಿರುತ್ತಾನೆ. ಸಂಪತ್ತು ಕಳೆದುಕೊಳ್ಳಬಹುದು ಆದರೆ ಗುರು ಕೊಟ್ಟ ಸಂಪತ್ತನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಇಂದಿನ ವಿದ್ಯಾರ್ಥಿಗಳು ಡಾ. ರಾಧಾಕೃಷ್ಣನ್, ಅಂಬೇಡ್ಕರ್, ಗಾಂಧೀಜಿ, ಕುವೆಂಪು ಮುಂತಾದವರ ಕುರಿತು ಓದಬೇಕು. ಓದುವ ಅಭಿರುಚಿ ಇಲ್ಲದೆ ಇತಿಹಾಸವನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಗೋಕಾಕ್ ಲಯನ್ಸ್‌ ಕ್ಲಬ್ ಸಾಮಾಜಿಕ ಕಾರ್ಯಗಳ ಜೊತೆಗೆ ಶಿಕ್ಷಣ ಕಾರ್ಯಗಳಿಗೂ ಹೆಚ್ಚಿನ ಆಸಕ್ತಿ ತೋರುತ್ತದೆ ಎಂದರು.  

ಇತ್ತಿಚಿಗೆ ಕಣ್ಣೊಳಗಿನ ಕಣ್ಣು ಕೃತಿಗೆ ಹಾಸನದ ಮಾಣಿಕ್ಯ ಶ್ರೀ ದತ್ತಿ ಪ್ರಶಸ್ತಿ ಪಡೆದುಕೊಂಡ ಗಜಲ್ ಕವಿ ಹಾಗೂ ಶಿಕ್ಷಕ ಈಶ್ವರ ಮಮದಾಪೂರ ಇವರನ್ನು ಲಯನ್ಸ್‌ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಿಂದ ಶಿಕ್ಷಕರಾದ ವಿಜಯ ಕಳ್ಳಿಮನಿ, ರಮೇಶ್ ಅಂಗಡಿ, ಶಿಕ್ಷಕಿಯರಾದ ಶಕುಂತಲಾ ರುದ್ರಾ​‍್ಪ ಜೋಡಟ್ಟಿ, ಜಿ ಏನ್ ಬೋರಗಾಂವಕರ,  ಮಹಾನಂದಾ ಮೇಳವಂಕಿ ಇವರನ್ನು ಸತ್ಕರಿಸಲಾಯಿತು.          

ವೇದಿಕೆಯ ಮೇಲೆ ಲಯನ್ ಡಾ. ಅಶೋಕ್ ಎಸ್ ಪಾಟೀಲ್, ಲಯನ್ ಎಸ್‌.ಜಿ.ಸಿದ್ದಾಪುರಮಠ, ಲಯನ್ ಅಶೋಕ್ ಬಿ. ಪಾಟೀಲ್, ಲಯನ್ ಅಶೋಕ್ ದೇಯನ್ನವರ್ , ಲಯನ್ ಎಸ್ ಜಿ ದೊಡಮನಿ ಉಪಸ್ಥಿತರಿದ್ದರು. ಶಿವಾನಂದ ಬ ಜನ್ಮಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಎಸ್ ಎ ಸರಕಾವಸ್ ವಂದಿಸಿದರು.