ವಿದ್ಯಾರ್ಜನೆಯೇ ವಿದ್ಯಾರ್ಥಿ ಜೀವನದ ಮುಖ್ಯ ಗುರಿ: ಆನಂದ ಹುಣಸಗಿ
ಇಂಡಿ 23:ವಿದ್ಯಾರ್ಥಿಗಳು ಶಿಕ್ಷಣಕ್ಕೆ ಮೊದಲಾದ್ಯತೆ ನೀಡಿ,ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದುವ ಜೊತೆಗೆ ಗುರುಭಕ್ತಿ, ಶ್ರದ್ಧೆ, ಆಸಕ್ತಿ, ಸ್ವಯಂ ಶಿಸ್ತಿನ ಗುಣಗಳನ್ನು ರೂಢಿಸಿಕೊಂಡುಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಶಿಕ್ಷಣ ಸಂಯೋಜಕ ಆನಂದ ಹುಣಸಗಿ ಹೇಳಿದರು. ಅವರು ಶನಿವಾರ ಸಂಜೆ ತಾಲೂಕಿನ ಬೊಳೇಗಾಂವ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಜನೆಯೇ ವಿದ್ಯಾರ್ಥಿ ಜೀವನದ ಮುಖ್ಯ ಗುರಿ. ಮಕ್ಕಳಲ್ಲಿ ಶಿಸ್ತು, ಸಂಸ್ಕಾರ ಮುಖ್ಯ. ಮಕ್ಕಳಲ್ಲಿ ಸಕಾರಾತ್ಮಕ ಯೋಚನೆ ಜಾಗೃತವಾಗಿರಬೇಕು. ಸದೃಢ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಬಹು ಮುಖ್ಯ ಎಂದು ಹೇಳಿದರು.ಇಂಡಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೈ ಟಿ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಮಯಪ್ರಜ್ಞೆ ಬಹಳ ಮುಖ್ಯ. ನಿರಂತರ ಅಧ್ಯಯನದಿಂದ ಗುರಿ ತಲುಪಲು ಸಾಧ್ಯ. ಯಾವುದೇ ಗುರಿ ತಲುಪಬೇಕಾದರೂ ಶ್ರದ್ಧೆ, ಸಂಯಮ ಹಾಗೂ ಕಠಿಣ ಪರಿಶ್ರಮ ಅತ್ಯಗತ್ಯ ಎಂದು ಹೇಳಿದರು.ಹಿರೇರೂಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಬಬಲಾದ ಮಾತನಾಡಿ, ಮಕ್ಕಳು ಕುಟುಂಬ, ಸಮಾಜ, ದೇಶದ ಆಸ್ತಿಯಾಗುವಂತೆ ಪಾಲಕರು, ಶಿಕ್ಷಕರು ಶ್ರಮಿಸಬೇಕು. ಮಕ್ಕಳಲ್ಲಿ ನಾನು ವಿಶ್ವಮಾನವನೆಂಬ ಪ್ರಜ್ಞೆ ಬೆಳೆಯಬೇಕಾಗಿದೆ. ಮಕ್ಕಳು ಪರಿಶ್ರಮ, ಪ್ರಾಮಾಣಿಕತೆ ಮತ್ತು ವಿನಯದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.ತಡವಲಗಾ ಹೀರೆಮಠ ಮಠದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಎಸ್ ಡಿ ಎಂ ಸಿ ಅಧ್ಯಕ್ಷ ಶಿವಶಂಕರ ಕಪ್ಪೆನವರ ಅಧ್ಯಕ್ಷತೆ ವಹಿಸಿದ್ದರು.ಬಿ ಆರ್ ಪಿ ಬಸವರಾಜ ಗೊರನಾಳ, ರಾಜ್ಯ ಸರ್ಕಾರಿ ನೌಕರರ ರಾಜ್ಯ ಘಟಕದ ಸಂಘಟನಾ ಮತ್ತು ಪ್ರಚಾರ ಸಮಿತಿ ಸದಸ್ಯ ರಮೇಶ ಮುಂಜಣ್ಣಿ,ಎಸ್ ಡಿ ಎಂ ಸಿ ಉಪಾಧ್ಯಕ್ಷ ಸಿದ್ದು ಹುಣಶ್ಯಾಳ, ಮಾಜಿ ಗ್ರಾಪಂ ಅಧ್ಯಕ್ಷ ಮಹಾದೇವ ಹುಣಸಗಿ ಹಾಗೂ ಎಸ್ ಡಿ ಎಂ ಸಿ ಸದಸ್ಯರು, ಗ್ರಾಪಂ ಸದಸ್ಯರು, ಗ್ರಾಮದ ಪ್ರಮುಖರು, ಮಕ್ಕಳು ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ಮಲ್ಲಪ್ಪ ಬಡದಾಳ ಸ್ವಾಗತಿಸಿದರು. ಈರಣ್ಣ ಹುಣಸಗಿ ನಿರೂಪಿಸಿದರು. ಕುಮಾರಿ ರಾಜೇಶ್ವರಿ ಕೊಳೆಕರ ವಾರ್ಷಿಕ ವರದಿ ಮಂಡಿಸಿದರು. ಮಲ್ಲಮ್ಮ ಹುಣಸಗಿ, ಕೆ ಡಿ ಬಿರಾದಾರ, ಸಂತೋಷ ಬಿರಾದಾರ, ಶಂಕರ ಹುಣಸಗಿ, ಸಂಜೀವ ಜಾಲಗೇರಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿದರು. ಎಸ್ ಎಂ ಅಂಗಡಿ ವಂದಿಸಿದರು.