ರಾಣೇಬೆನ್ನೂರು: ಮೇ 8 ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪ್ರತಿಯೊಂದರಲ್ಲಿ ಸ್ಪರ್ಧೆಯನ್ನು ಎದುರಿಸಿಯೇ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ಶಿಕ್ಷಣವೇ ದೊಡ್ಡ ಆಸ್ತಿಯಾಗಬೇಕಿದೆ ಎಂದು ಗ್ರಾಮೀಣಿ ಟ್ರಸ್ಟ್ ಅಧ್ಯಕ್ಷೆ ಶ್ವೇತಾ ಎನ್. ವೈಕುಂಠೆ ಹೇಳಿದರು.
ತಾಲೂಕಿನ ಕಜ್ಜರಿ ಗ್ರಾಮದ ಶ್ರೀ ಮಾಲತೇಶ ಪ್ರೌಢಶಾಲೆಯಲ್ಲಿ ಗ್ರಾಮೀಣಿ ಟ್ರಸ್ಟ್ ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿಂತಾಶದ ಹಿನ್ನೆಲೆ ಮುಖ್ಯೋಪಾದ್ಯಾಪಯರಿಗೆ ಅಭಿನಂದಿಸಿ, ಪ್ರೋತ್ಸಾಹ ನಿಧಿ ವಿತರಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿನ ಮಕ್ಕಳು ಕೂಡ ಬಹಳಷ್ಟು ಪ್ರತಿಭಾವಂತರಿರುತ್ತಾರೆ. ಆದರೆ ಅವರಿಗೆ ಸೂಕ್ತ ಸೌಲಭ್ಯ ಹಾಗೂ ಅವಕಾಶಗಳು ದೊರೆಯಬೇಕಿದೆ. ಶಾಲೆಯ ಎಲ್ಲ ಸಿಬ್ಬಂದಿ ಎಸ್‌ಎಸ್‌ಎಲ್ಸಿ ಫಲಿತಾಂಶ ಸುಧಾರಣೆಗೆ ಸಾಕಷ್ಟು ಶ್ರಮವಹಿಸಿ, ವಿಶೇಷ ಕಾಳಜಿ ತೋರಿದ್ದು ಶ್ಲಾಘನೀಯ ಎಂದರು. ತಮ್ಮ ತಂದೆ ನಾರಾಯಣರಾವ್ ವೈಕುಂಠೆ ಅವರು ಕೂಡ ಶಿಕ್ಷಣ ಇಲಾಖೆಯಲ್ಲಿ ನಾಲ್ಕು ದಶಕಕ್ಕೂ ಅಧಿಕ ಕಾಲದಿಂದ ಸೇವೆ ಸಲ್ಲಿಸಿದ್ದರು. ವಿಶೇಷವಾಗಿ ಬಡಮಕ್ಕಳ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದರು. ಸೌಲಭ್ಯ ವಂಚಿತ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಈ ಕಾರಣದಿಂದ ನಮ್ಮ ತಂದೆಯವರ ಆಶಯದಂತೆ ನಮ್ಮ ಸಂಸ್ಥೆಯಿಂದ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ದಿ. ನಾರಾಯಣರಾವ್ ವೈಕುಂಠೆ ಸ್ಮರಣಾರ್ಥ ಪ್ರೋತ್ಸಾಹ ನಿಧಿ ನೀಡಲು ತೀರ್ಮಾನಿಸಲಾಗಿದೆ. ಎಂದರು.
ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆ ಮೂಡಿಸಿ ಕಲಕೆಯಲ್ಲಿ ಹೆಚ್ಚು ಆಸಕ್ತಿ ತೋರುವಂತೆ ಮಾಡುವುದು, ಈ ಮೂಲಕ ನಮ್ಮ ತಂದೆಯವರ ಆಶಯ ಈಡೇರಿಸುವ ಉದ್ದೇಶ ಹೊಂದಲಾಗಿದೆ ಎಂದರು.ಮುಖ್ಯ ಶಿಕ್ಷಕ ಅಶೋಕ ಯು. ಕಡ್ಲಿಮಟ್ಟಿ ಮಾತನಾಡಿ, ಮಕ್ಕಳು ಪರಿಶ್ರಮದಿಂದ ನಿರಂತರ ಅಧ್ಯಯನದಲ್ಲಿ ತೊಡಗಿದಾಗ ಮಾತ್ರ ಯಶಸ್ಸು ಸಾಧ್ಯ. ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು. ಅಂದಾಗ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯವಾಗುತ್ತದೆ ಎಂದರು.
ಈ ವೇಳೆ ಎಸ್‌ಎಸ್‌ಎಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಶ್ರಮಿಸಿದ ಶಾಲಾ ಸಿಬ್ಬಂದಿಗಳ ಪರವಾಗಿ ಶಾಲೆಯ ಮುಖ್ಯ ಶಿಕ್ಷಕರನ್ನು ಟ್ರಸ್ಟ್ ವತಿಯಿಂದ ಗೌರವಿಸಿ, ಪ್ರೋತ್ಸಾಹ ನಿಧಿ ಮೊತ್ತ ನೀಡಲಾಯಿತು. ಟ್ರಸ್ಟ್ ಉಪಾಧ್ಯಕ್ಷೆ ಶೋಭಾ ವೈಕುಂಠೆ, ಬಿ.ಎನ್. ಗೊರವರ, ಸಾಕ್ಷಿ ಕೆ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಶಾಲೆಯ ಸಿಬ್ಬಂದಿ ಇದ್ದರು.