ಶಿಕ್ಷಣ, ಸಮಾಜ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು - ಪೂಜಾರ
ರಾಣೇಬೆನ್ನೂರು 28 : ಫೆ 28ಸಂತ ಸೇವಾಲಾಲ್ ಅವರು ಬಂಜಾರ ಸಮುದಾಯಕ್ಕೆ ಸೀಮಿತವಾಗದೇ ವಿಶ್ವಕ್ಕೆ ಸಂದೇಶ ಸಾರಿದವರು. ಅವರ ಸಂದೇಶಗಳನ್ನು ಸಮಾಜಕ್ಕೆ ಪಸರಿಸೋಣ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು. ಅವರು ಇಲ್ಲಿನ ಸೇವಾಲಾಲ್ ಉದ್ಯಾನವನದಲ್ಲಿ ಬಂಜಾರ ಸಮುದಾಯ ಆಯೋಜಿಸಿದ್ದ ಸೇವಾಲಾಲ್ ರ 286ನೇ ಜಯಂತೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬಂಜಾರ ಲಂಬಾಣಿ ಸಮುದಾಯಕ್ಕೆ ವೇದ ಇತಿಹಾಸಕಾಲಗಳಿಂದಲೂ ತಮ್ಮದೇ ಆದ ಸಂಸ್ಕೃತಿ ಇದೆ. ಅದನ್ನು ಮರೆಯದೆ, ಸಂಸ್ಕೃತಿ ಮತ್ತು ಸಂಸ್ಕಾರ ಅಳವಡಿಸಿಕೊಂಡು ಸಮಾನತೆ ಸಾಧಿಸಲು ಮುಂದಾಗಬೇಕು ಎಂದು ಪೂಜಾರ ಕರೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಪ್ರಕಾಶ್ ಕೋಳಿವಾಡ ಅವರು ಸೇವಾಲಾಲ್ ಅವರ ಸಂದೇಶಗಳನ್ನು ಬಂಜಾರ ಸಮುದಾಯದವರು ಜೀವನಲ್ಲಿ ಅಳವಡಿಸಿಕೊಂಡು ಪ್ರಗತಿಯತ್ತ ಸಾಗಬೇಕು ಎಂದರು. ಸರ್ಕಾರ ಬಂಜಾರ ಸಮಾಜದ ಅಭಿವೃದ್ದಿಗೆ ಮುಂದಾಗಿದೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಸಮರ್ಥವಾಗಿ ಬಳಸಿಕೊಂಡು, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕತೆ ಮತ್ತು ಸಮಾನತೆ ಸಾಧಿಸಿಕೊಳ್ಳಲು ಮುಂದಾಗಬೇಕು ಎಂದರು.ಪವಾಡ ಪುರುಷ ಸೇವಾಲಾಲ್ ಅವರ ಬದುಕು ಮತ್ತು ಜೀವನ ಸಮಾಜಕ್ಕೆ ನೀಡಿದ ಧಾರ್ಮಿಕ ಕೊಡುಗೆ ವಿಷಯವಾಗಿ ಚಿತ್ರದುರ್ಗದ ಬಂಜಾರ ಗುರುಪೀಠ ಪೀಠಾಧ್ಯಕ್ಷ ಸರ್ಧಾರ ಸೇವಾಲಾಲ್ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶಿಕ್ಷಣ ಮತ್ತು ಸಮಾಜ ಸಂಘಟನೆಗೆ ಹೆಚ್ಚಿನ ಆಧ್ಯತೆ ನೀಡಬೇಕು. ಸಮಾಜದಲ್ಲಿನ ಮೌಡ್ಯತೆ ದೂರವಾಗಬೇಕು. ರಾಜಕೀಯವಾಗಿ ಬೆಳೆಯಬೇಕು ಎಂದರು.ಸೇವಾ ಸಮಿತಿ ಅಧ್ಯಕ್ಷ ಚಂದ್ರ್ಪ ಶಾಮಸಿಂಗ್ ಲಮಾಣಿ, ರಾಮಣ್ಣ ನಾಯಕ, ಡಾಕೇಶ ಲಮಾಣಿ, ರಮೇಶ ಡಿ.ಎಲ್.ನಾಯಕ, ಚಂದ್ರು ಲಮಾಣಿ, ಬೀರ್ಪ ಲಮಾಣಿ, ಈರೇಶ ಲಮಾಣಿ, ಮಾರುತಿ ಲಮಾಣಿ, ಲಲಿತಾ ಜಾಧವ, ಓಬಾ ನಾಯಕ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.ಬಂಜಾರ ಸಮುದಾಯದ ಯುವಕರು ಮತ್ತು ಮಹಿಳೆಯರು ಲಂಬಾಣಿ ಉಡುಪು ಧರಿಸಿ ಸೇವಾಲಾಲ ಅವರ ಭಾವಚಿತ್ರದ ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ಡಿಜೆ ಹಾಡಿಗೆ ಹೆಜ್ಜೆ ಹಾಕಿದ್ದು ಸಾರ್ವಜನಿಕರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ನೂರಾರು ಮಾಲಾಧಾರಿಗಳು ಪಾಲ್ಗೊಂಡಿದ್ದರು. ಕ್ಯಾಪ್ಶನ್ :- ರಾಣೇಬೆನ್ನೂರಿನ ಸೇವಾಲಾಲ್ ಉದ್ಯಾನವದ ಸೇವಾಲಾಲ್ ದೇವಸ್ಥಾನ ಆವರಣದಲ್ಲಿ ಸೇವಾಲಾಲ್ ಅವರ 286ನೇ ಜಯಂತಿಯನ್ನು ಶಾಸಕ ಪ್ರಕಾಶ ಕೋಳಿವಾಡ ಮತ್ತು ಮಾಜಿ ಶಾಸಕ ಅರುಣಕುಮಾರ ಪೂಜಾರ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು.