ಲೋಕದರ್ಶನ ವರದಿ
ಶಿರಹಟ್ಟಿ 13: ಪ್ರಸ್ತುತ ದಿನಮಾನದಲ್ಲಿ ನಾವೆಲ್ಲರೂ ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಕಾಲಾನುಸಾರ ಬೆಳೆಯುವ ಹಣ್ಣು ತರಕಾರಿಗಳನ್ನು ಸೇವಿಸುವದರೊಂದಿಗೆ ಆರೋಗ್ಯದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಾ ಯೋಜನಾಧಿಕಾರಿ ಎಸ್. ಶಿವಣ್ಣ ಅವರು ಕರೆ ನೀಡಿದರು.
ತಾಲೂಕಿನ ದೇವಿಹಾಳ ಗ್ರಾಮದಲ್ಲಿ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟನ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ನಡೆದ ಪೌಷ್ಠಿಕ ಆಹಾರ ಮೇಳದ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡುತ್ತಾ, ಮಾಸದ ಕಾಲಾನುಸಾರ ಪ್ರಕೃತಿಯಲ್ಲಿ ಸಿಗುವ ಹಣ್ಣುಗಳು ತರಕಾರಿಗಳು ಮತ್ತು ಕಾಲಾನುಸಾರ ಪೂರ್ವಜರು ನಡೆಸಿಕೊಂಡು ಹಬ್ಬ ಹರಿದಿನಗಳಲ್ಲಿ ವಿಶೇಷ ಪೌಷ್ಠಿಕ ಆಹಾರವನ್ನು ತಯಾರಿ ಮಾಡಿ ಸೇವಿಸುವುದರಿಂದ ಸಂಪ್ರಾದಾಯವು ಉಳಿಯುತ್ತದೆ ಮತ್ತು ಆರೋಗ್ಯದ ಗುಣಮಟ್ಟವನ್ನು ಕಾಯ್ದಿರಿಸಿಕೊಳ್ಳಲಾಗುತ್ತದೆ ಅಲ್ಲದೇ ಈಗಿನ ಪ್ಯಾಶನ್ ಯುಗದಲ್ಲಿ ಆಹಾರದಲ್ಲಿ, ಯಾವುದೇ ರೀತಿಯ ಫ್ಯಾಶನನ್ನು ಬಳಸದೇ ಸಾಂಪ್ರಾದಾಯಿಕ ಪದಾರ್ಥಗಳಾದ ಜೋಳದ ರೊಟ್ಟಿ, ರಾಗಿ ರೊಟ್ಟಿ, ಮುದ್ದೆ ಸಾರು, ಉರಿಚಲು ಚಟ್ನಿ ಮೊಸರನ್ನ ಮತ್ತು ವಿವಿಧ ಬಗೆಯ ತರಕಾರಿಗಳಿಂದ ಮನೆಯಲ್ಲಿಯೇ ತಯಾರಿಸಿ ಆಹಾರವನ್ನು ಸೇವಿಸಬೇಕೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಸ್ವಪ್ನ ಮಾತನಾಡಿ ಬೀದಿ ಬದಿಯಲ್ಲಿ ತಯಾರಿಸಲ್ಪಟ್ಟ ಕರಿದ ತಿಂಡಿಗಳನ್ನು ತಿನ್ನುವುದರಿಂದ ಮಕ್ಕಳಲ್ಲಿ ಕ್ರೀಯಾಶೀಲತೆ ಕಡಿಮೆಯಾಗುತ್ತದೆ ಮತ್ತು ಚಿಕ್ಕ ವಯಸ್ಸಿನ ಮಕ್ಕಳಿಗೆ ಹೃದಯರೋಗ, ಸಕ್ಕರೆ ಖಾಯಿಲೆ, ರಕ್ತದೊತ್ತಡ ಇಂತಹ ರೋಗಗಳು ಬರುವುದನ್ನು ತಡೆಗಟ್ಟಬಹುದಾಗಿದೆ ಹಾಗಾಗಿ ಮಕ್ಕಳಿಗೆ ಬೇಕರಿ ಮತ್ತು ರಸ್ತೆ ಬದಿಯ ತಿಂಡಿಗಳನ್ನು ತಿನಿಸದೆಯೇ ತಾಯಂದಿರು ಮನೆಯಲ್ಲಿಯೇ ಜಿಡ್ಡು ರಹಿತ ಪೌಷ್ಟಿಕ ಆಹಾರವನ್ನು ಉಪಯೋಗಿಸಬೇಕೆಂದು ತಿಳಿಸಿದರು.
ಆಹಾರ ಮೇಳದಲ್ಲಿ ಉತ್ತಮ ಪೌಷ್ಠಿಕ ಆಹಾರ ಮಾಡಿಕೊಂಡ ಬಂದ ಮಹಿಳೆಯರನ್ನು ಅಭಿನಂದಿಸಲಾಯಿತು. ಊರಿನ ಗ್ರಾಮಸ್ಥರು ಸ್ವ ಸಹಾಯ ಸಂಘದ ಮಹಿಳೆಯರು ಮತ್ತು ಮುಖ್ಯ ಅಥಿತಿಗಳಾಗಿ ಗ್ರಾಮ ಪಂಚಾಯತ ಉಪಾಧ್ಯಕ್ಷ ದುರ್ಗಪ್ಪ, ವಕೀಲರಾದ ಮಹೇಶ, ಚಂದ್ರಕಲಾ, ಗಂಗಾ ಉಪಸ್ಥಿತರಿದ್ದರು.