ಬೆಂಗಳೂರು, ಆ 30 ನವದೆಹಲಿಯ ಮನೆಗಳಲ್ಲಿ 8 ಕೋಟಿಗೂ ಹೆಚ್ಚು ಮೌಲ್ಯದ ಅನಧಿಕೃತ ನಗದು ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ರದ್ದುಗೊಳಿಸಲು ನಿರಾಕರಿಸಿದ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಮಾಜಿ ಸಚಿವ ಹಾಗೂ ಶಾಸಕ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಮೆಮೋ ಅನ್ನು ಹೈಕೋರ್ಟ್ ತಿರಸ್ಕರಿಸಿದೆ.
ಹೈಕೋರ್ಟ್ ತೀರ್ಪುನ ಬೆನ್ನಲ್ಲೇ ಇಡಿ ಅಧಿಕಾರಿಗಳು, ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೀಡಿದ್ದ ನೋಟಿಸ್ ಗೆ ತಡೆ ನೀಡುವಂತೆ ಮಾಡಿದ್ದ ಮನವಿಯನ್ನು ಕೂಡ ನ್ಯಾಯಪೀಠ ತಿರಸ್ಕರಿಸಿದೆ.
ಐಪಿಸಿ ಸೆಕ್ಷನ್ 120 ಬಿ ಅನುಸಾರ ಬೇನಾಮಿ ಆಸ್ತಿ ತಡೆ ಕಾಯ್ದೆಯಡಿ ಈ ಪ್ರಕರಣ ವಿಚಾರಣೆಗೆ ಸೂಕ್ತವಾಗಿದೆ. ಆರೋಪಿಗಳು ತನಿಖಾಧಿಕಾರಿಯ ಮುಂದೆ ಹಾಜರಾಗಿ ತನ್ನ ಅಹವಾಲು ಸಲ್ಲಿಸಬಹುದು ಎಂದು ತೀಪು ನೀಡಿದ್ದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಸಸದಸ್ಯ ಪೀಠದ ತೀರ್ಪನ್ನು ಮರುಪರಿಶೀಲಿಸುವಂತೆ ಡಿ.ಕೆ.ಶಿವಕುಮಾರ್ ಶುಕ್ರವಾರ ಅರ್ಜಿ ಸಲ್ಲಿಸಿದ್ದರು.
ಆದರೆ, ಈ ಮೆಮೋ ಅನ್ನು ಮತ್ತೊಮ್ಮೆ ತಿರಸ್ಕರಿಸಿರುವ ನ್ಯಾಯಪೀಠ, ಪ್ರಕರಣದ ಎಲ್ಲಾ ಅಂಶಗಳನ್ನು ಪರಿಗಣಿಸಿಯೇ ತೀಪು ನೀಡಲಾಗಿದೆ. ಆದ್ದರಿಂದ ಯಾವುದೇ ತಿದ್ದುಪಡಿ ತರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.