ದತ್ತಪೀಠ ಹಿಂದೂಗಳಿಗೆ ಒಪ್ಪಿಸುವಂತೆ ಆಗ್ರಹಿಸಿ ಇದೇ 13ರಂದು ದತ್ತಮಾಲಾ ಅಭಿಯಾನ: ಮುತಾಲಿಕ್

 ಬೆಂಗಳೂರು, ಅ.10:   ಚಿಕ್ಕಮಗಳೂರು ದತ್ತ ಪೀಠ ಹಿಂದುಗಳಿಗೆ ಒಪ್ಪಿಸಲು ಆಗ್ರಹಿಸಿ ಇದೇ ದತ್ತ ಮಾಲಾ ಅಭಿಯಾನದ ಶೋಭಯಾತ್ರೆ ಇದೇ ತಿಂಗಳ 13ರಂದು ಚಿಕ್ಕಮಗಳೂರಿನ ಶಂಕರಮಠದ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ "ಚಂದ್ರದ್ರೋಣ" ಪರ್ವತದಲ್ಲಿರುವ ಶ್ರೀಗುರು ದತ್ತಾತ್ರೇಯರ,ತಾಯಿ ಅರುಂಧತಿ, ಅತ್ರಿ ಋಷಿಗಳ ಪವಿತ್ರ ತಪೋಭೂಮಿ. ಆದರೆ ಕೆಲವು ಆಕ್ರಮಣಕಾರರು ಈ ಪವಿತ್ರ ಸ್ಥಳ ಆಕ್ರಮಿಸಿಕೊಂಡು "ಬಾಬಾಬುಡನ್" ಎಂದು ಹೇಳಿತ್ತಿರುವುದು ಅತ್ಯಂತ ಖಂಡನಿಯವಾಗಿದೆ. ಇತಿಹಾಸಕ್ಕೆ,ಸತ್ಯಕ್ಕೆ ಬಗೆಯುವ ದ್ರೋಹವಾಗಿದೆ.ಬಾಬಾಬುಡನ್ ದರ್ಗಾ ನಾಗೇನಹಳ್ಳಿಯಲ್ಲಿದೆ. ಇದಕ್ಕೆ ಸರ್ಕಾರದ ದಾಖಲೆಗಳೇ ಸಾಕ್ಷಿಯಾಗಿದೆ."ಇನಾಂ ದತ್ತಾತ್ರೇಯ ಪೀಠ " ಅನ್ನುವ ಸರ್ಕಾರಿ ದಾಖಲೆಯಲ್ಲಿ ಇಂದಿಗೂ ಇದೆ. ಜೊತೆಗೆ ನ್ಯಾಯಾಲಯದ 7 ತೀಪುಗಳು ಇದಕ್ಕೆ ಪುಷ್ಠಿ ನೀಡಿದೆ. ಇಷ್ಟೆಲ್ಲ ದಾಖಲೆ, ತೀಪು,ಇತಿಹಾಸ ಇದ್ದರೂ ಹಿಂದೂ ಭಕ್ತರಿಗೆ ದ್ರೋಹ ಬಗೆದು ,ಹಿಂದುಗಳಿಗೆ ಈ  ಪೀಠ ಒಪ್ಪಿಸದಿರುವುದು ಅತ್ಯಂತ ಖಂಡನಾರ್ಹವಾಗಿದೆ ಎಂದು ತಿಳಿಸಿದರು. ಹಿಂದುಗಳ ತಾಳ್ಮೆ ಪರೀಕ್ಷಿಸದೇ ತಕ್ಷಣ ಈ ಪೀಠ ಹಿಂದುಗಳಿಗೆ ಹಸ್ತಾಂತರಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ. ತಾವೂ ಸಹ ಹಿಂದೆ ಈ ಹೋರಾಟದಲ್ಲಿ ಭಾಗವಹಿಸಿ ದತ್ತಪೀಠದಲ್ಲಿ ಹಿಂದೂಗಳಿಗೆ ಆದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದು ಸರ್ವವಿದಿತವಾಗಿದೆ. ಈಗ ತಮಗೆ ಅನ್ಯಾಯ ಸರಿಪಡಿಸುವ ಸುವರ್ಣ ಅವಕಾಶವಿದ್ದು ತಾವು ಹಿಂದುಗಳ ಹೋರಾಟಕ್ಕೆ  ನ್ಯಾಯ ನೀಡುತ್ತೀರಿ ಎನ್ನುವ ವಿಶ್ವಾಸ ಹೊಂದಿದ್ದೇವೆ. ಜೊತೆಗೆ ತಾವು ಶ್ರೀಗುರು ದತ್ತಾತ್ರೇಯರ ಪರಮ ಭಕ್ತರಿದ್ದು ತಮ್ಮ ಆದೇಶದಿಂದ ದತ್ತಪೀಠಕ್ಕೆ ನ್ಯಾಯ ಒದಗಿಸಿ ಗುರು ಕೃಪೆಗೆ ಪಾತ್ರರಾಗುತ್ತಿರಿ ಎಂದು ನಂಬಿದ್ದೇವೆ ಎಂದು ಅವರು ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ. ದತ್ತಪೀಠ ಸಂಪೂರ್ಣ ಹಿಂದುಗಳಿಗೆ ಒಪ್ಪಿಸಬೇಕು. ಅಲ್ಲಿರುವ ಅನಧಿಕೃತ ಘೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಬೇಕು, ಹಿಂದೂ ಅರ್ಚಕರನ್ನು ನೇಮಿಸಬೇಕು. ಮುಜಾವರನನ್ನು ತಗೆಯಬೇಕು. ತ್ರಿಕಾಲ ಪೂಜೆ ನಡೆಯಬೇಕು ಹಾಗೂ ಉರೂಸು ನಿಲ್ಲಬೇಕು. ಪೀಠದ ನೂರಾರು ಎಕರೆ ಅತಿಕ್ರಮಣ ತೆರವುಗೊಳಿಸಬೇಕು ಹಾಗೂ ಅಮೂಲ್ಯ ವಸ್ತುಗಳು ಕಣ್ಮರೆಯಾದ ಬಗ್ಗೆ ತನಿಖೆ ನಡೆಸಬೇಕು. ಭಕ್ತರಿಗೆ,ಪೂಜ್ಯ ಸ್ವಾಮಿಜಿಗಳಿಗೆ ಅಡೆತಡೆ ಇಲ್ಲದೇ ದರ್ಶನ, ಪೂಜೆಗೆ ಮುಕ್ತ ಅವಕಾಶ ನೀಡಬೇಕು, ಭಕ್ತರಿಗೆ ಉಚಿತ ಅನ್ನದಾನ ವ್ಯವಸ್ಥೆ ಮಾಡಬೇಕು ಎಂದು ಅವರು ಇದೇ ವೇಳೆ ಆಗ್ರಹಿಸಿದರು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಡಿಸಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. 370ನೆ ವಿಧಿ ರದ್ದುಪಡಿಸಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಜಮ್ಮುವಿನ ರಾಹುಲ್ ಎಂಬ ಯುವ ನಾಯಕ ಉದ್ಘಾಟಿಸಲಿದ್ದಾರೆ. ಬೆಂಗಳೂರು ನಗರದಿಂದ 12ರಂದು 500 ಮಂದಿ ದತ್ತಮಾಲಾಧಾರಿಗಳು ಚಿಕ್ಕಮಗಳೂರಿಗೆ ಹೊರಡಲಿದ್ದಾರೆ. ಯಡಿಯೂರಪ್ಪ ಅವರಿಗೆ ದತ್ತಪೀಠದ ಬಗ್ಗೆ ಸಂಪೂರ್ಣ ಮಾಹಿತಿ ಇದ್ದು, ಅವರ ಅವಧಿಯಲ್ಲೇ ಇದನ್ನು ಹಿಂದೂಗಳಿಗೆ ಒಪ್ಪಿಸುವ ಕಾರ್ಯ ನಡೆಯಬೇಕು ಎಂದು ಅವರು ಒತ್ತಾಯಿಸಿದರು.