ಧೂಳಿನಿಂದ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ವಿರೋಧಿಸಿ ಮನವಿ

ಬೈಲಹೊಂಗಲ 10:  ಹದಗೆಟ್ಟ ರಸ್ತೆಗಳನ್ನು ದುರಸ್ಥಿಗೊಳಿಸಿ ಪಟ್ಟಣದ ಜನತೆಯನ್ನು ಧೂಳಿನಿಂದ ಮುಕ್ತ ಮಾಡುವಂತೆ  ಒತ್ತಾಯಿಸಿ ಬೀದಿ ವ್ಯಾಪಾರಸ್ಥರ ಹಾಗೂ ನಾನಾ ಸಂಘಟನೆಗಳು ಮಂಗಳವಾರ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಯಿತು. ಪಟ್ಟಣದಲ್ಲಿ ಸಿಕ್ಕಾಪಟ್ಟೆ ಧೂಳಿನಿಂದ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮೂಗು ಮುಚ್ಚಿಕೊಂಡು ತಿರಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವ್ಯಾಪಾರಸ್ಥರಿಗೆ, ಕಾರ್ಮಿಕರಿಗೆ, ಚಾಲಕರಿಗೆ ಹಾಗೂ ನಾಗರಿಕರಿಗೆ ಇದರಿಂದ ತುಂಬಾ ತೊಂದರೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಕ್ರಮ ಕೈಕೊಂಡು ಧೂಳು ಮುಕ್ತ ಬೈಲಹೊಂಗಲ ಮಾಡಬೇಕು. 

ವೀರರಾಣಿ ಕಿತ್ತೂರು ಚನ್ನಮ್ಮ ಅಶ್ವಾರೂಢ  ಮೂರ್ತಿಯಿಂದ ರಾಯಣ್ಣನ ವೃತ್ತವರೆಗಿನ ರಸ್ತೆಯಂತೂ ತೀರಾ ಹದಗೆಟ್ಟಿದ್ದು, ಕೇಂದ್ರ ಬಸ್ ನಿಲ್ದಾಣ, ಶಾಲಾ, ಕಾಲೇಜುಗಳು, ಆಸ್ಪತ್ರೆಗಳು ಈ ರಸ್ತೆಗೆ ಹೊಂದಿಕೊಂಡಿವೆ ಅಲ್ಲದೆ ಈ ರಸ್ತೆಯೂ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯಾಗಿದ್ದು ಬಿದ್ದ ತೆಗ್ಗುಗಳನ್ನು ಮರಳು ಮಿಶ್ರಿತ ಕೆಂಪು ಮಣ್ಣಿನಿಂದ ಮುಚ್ಚಲಾಗುತ್ತಿದೆ. ಇದರಿಂದ ಬೃಹತ ಗಾತ್ರದ ವಾಹನದ ಹಿಂದೆ ಬರುವ ವಾಹನ ಸವಾರರು, ಪಾದಚಾರಿಗಳು ಕಣ್ಣು ಮತ್ತು ಮೂಗಿನಲ್ಲಿ ಮಣ್ಣಿನ ಧೂಳನ್ನು ತುಂಬಿಕೊಂಡು ಅಲರ್ಜಿಯಾಗಿ ಆಸ್ಪತ್ರೆಗೆ ದಾಖಲಾಗುವ  ಪರಿಸ್ಥಿತಿ  ನಿರ್ಮಾಣವಾಗಿದೆ ಕೂಡಲೇ ಕ್ರಮ ಜರುಗಿಸಬೇಕೆಂದು  ಮನವಿ ಮೂಲಕ ಒತ್ತಾಯಿಸಿದರು.

      ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಮಾತನಾಡಿ, ಸಾರ್ವಜನಿಕರ ಜೀವನದಲ್ಲಿ ಅಧಿಕಾರದ ಮದದಿಂದ ಅಹಂ ಪ್ರದರ್ಶಿಸುತ್ತಿರುವ ಅಧಿಕಾರಿಗಳನ್ನು ಎಚ್ಚರಿಸಿ ಅವರಿಗೆ ಕರ್ತವ್ಯದ ಕಡೆಗೆ ಗಮನ ಹರಿಸುವಂತೆ ಸೂಚಿಸುವುದಾಗಬೇಕು. ಶೀಘ್ರ ಸಮಸ್ಯೆಗೆ ಪರಿಹಾರ ಸೂಚಿಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಈ ಬೇಡಿಕೆಗಳಿಗೆ ಆಗ್ರಹಿಸಿ ಆಮರಣ ಉಪವಾಸ ಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು. ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ, ಅಂಬೇಡ್ಕರ ಯುವ ಸೇನೆ ರಾಜ್ಯ ಘಟಕ ಉಪಾಧ್ಯಕ್ಷ ಪರಶುರಾಮ ರಾಯಭಾಗ ಮಾತನಾಡಿ, ಬೈಲಹೊಂಗಲ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ರಸ್ತೆಗಳು ತೀರಾ ಹದಗೆಟ್ಟಿದ್ದು ಜನಪ್ರತಿನಿಧಿಗಳು ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ರಸ್ತೆಯ ತುಂಬೆಲ್ಲಾ 3-4 ಅಡಿಯ ತೆಗ್ಗುಗಳು ಬಿದ್ದು ವಾಹನ ಸವಾರರು ಹರಸಾಹಸ ಪಡುವಂತಾಗಿದೆ. ಸರ್ಕಾರ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೋಟ್ಯಾಂತರ ರೂ.ಗಳ ವೆಚ್ಚದ ಮಾಡುತ್ತಿದ್ದು ಆದರೆ ಬೈಲಹೊಂಗಲ ನಗರದಲ್ಲಿ ಇದಕ್ಕೆ ವಿರುದ್ದವಾಗಿದೆ. ಪುರಸಭೆ, ಲೋಕೋಪಯೋಗಿ ಇಲಾಖೆಗಳು ಯಾವುದೇ ಕ್ರಮ ಜರುಗಿಸಿಲ್ಲ. 

        ಇನ್ನೂ ರಾಯಣ್ಣ ವೃತ್ತದಿಂದ ಅಂಬೇಡ್ಕರ ಉದ್ಯಾನವನದ ರಸ್ತೆಯು ಇಕ್ಕಟ್ಟಾದ ರಸ್ತೆಯಾಗಿದ್ದು, ಬೈಲಹೊಂಗಲ ಪಟ್ಟಣದ ಪ್ರಮುಖ ವ್ಯಾಪಾರ, ವಹಿವಾಟು, ಶುಕ್ರವಾರ ಸಂತೆ ನಡೆಯುವ ರಸ್ತೆಯಾಗಿದ್ದು ರೂ. 3 ಕೋಟಿ ವೆಚ್ಚದಲ್ಲಿ ರಸ್ತೆ ದುರಸ್ತಿ ಕಾಮಗಾರಿ ಆರಭಿಸಲಾಗಿದೆ. ಇಕ್ಕಟ್ಟಾದ ರಸ್ತೆಯನ್ನು ಸುಧಾರಿಸುವ ಬದಲಿಗೆ ರಸ್ತೆ ಅಗಲೀಕರಣ ಮಾಡಿ ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕಾಗಿತ್ತು. ಇದಲ್ಲದೆ ತಾಲೂಕಿನ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ತುಂಬ ಹದಗೆಟ್ಟಿದ್ದು ಪ್ರಮುಖ ತಾಲೂಕಾ, ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸಲು ಅಸಾಧ್ಯವಾಗುತ್ತಿದೆ. ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ಈ ವಿಷಯ ಗೊತ್ತಿದ್ದರೂ ಕೂಡಾ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಕೂಡಲೇ ಈ ಕುರಿತು ಸಭೆ ಕರೆದು ರಸ್ತೆ ಅಭಿವೃದ್ದಿ ಕಾಮಗಾರಿ ಆರಂಭಿಸಬೇಕೆಂದು ತಿಳಿಸಿದರು. ಅಂಬೇಡ್ಕರ ಯುವ ಸೇನೆ ಮುಖಂಡ ಮಾರುತಿ ಕೊಂಡುರ, ಬೀದಿ ವ್ಯಾಪಾರಸ್ಥರಾದ ಇಸ್ಮಾಯಿಲ್ ಬಡೇಘರ, ಈರಪ್ಪ ಬೈಲವಾಡ, ಮಹ್ಮದಹನೀಫ ಬಾಗವಾನ, ಅನ್ವರ ಅತ್ತಾರ, ಮಂಜುನಾಥ ಹೊಸೂರ, ಜನ್ನತಬಿ ಧಾರವಾಡ, ಮಹ್ಮದಲಿ ಬಾಗೇವಾಡಿ, ಗೌಸಸಾಬ ನಂದಗಡ, ಹನೀಫ ಕರಡಿ, ಬಸವರಾಜ ಹೊಟಕರ, ಇಮ್ರಾನ ಸತ್ತಿಗೇರಿ, ಬಿಬಿಜಾನ ಉಡಕೇರಿ, ಅನಸವ್ವಾ ಚಳಕೊಪ್ಪ, ಮಮತಾಜ ನದಾಫ,  ಜರೀನಾ ಆನಿಗೋಳ  ಮತ್ತಿತರರು ಇದ್ದರು.