ಬರಗಾಲದ ಆತಂಕ: ಪರ್ಯಾಯ ಬೆಳೆ ಯೋಜನೆ ಹಾಗೂ ರೈತರ ಜಾಗೃತಿ ಸಭೆ ನಡೆಸಲು ಜಿಲ್ಲಾಧಿಕಾರಿ ಸೂಚನೆ

ಬರಗಾಲದ ಆತಂಕ: ಪರ್ಯಾಯ ಬೆಳೆ ಯೋಜನೆ ಹಾಗೂ ರೈತರ ಜಾಗೃತಿ ಸಭೆ ನಡೆಸಲು ಜಿಲ್ಲಾಧಿಕಾರಿ ಸೂಚನೆ Drought concerns: Deputy Commissioner directs officials to implement alternative crop plans and hold

ಲೋಕದರ್ಶನ ವರದಿ 

 ಬಳ್ಳಾರಿ, ಜು.16: ಜಿಲ್ಲೆಯಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು.  ನಗರದ ನೂತನ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಶೇ.100ರಷ್ಟು ಬಿತ್ತನೆ ಗುರಿ ಸಾಧಿಸಬೇಕಾಗಿದ್ದರೂ, ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಹಿನ್ನಡೆ ಅನುಭವಿಸಿವೆ. ಮುಂದಿನ ಒಂದು ವಾರದಿಂದ ಹತ್ತು ದಿನಗಳವರೆಗೆ ಮಳೆಯ ಸಾಧ್ಯತೆ ಕಡಿಮೆ ಇರುವುದರಿಂದ, ತಾಲೂಕು ಪಂಚಾಯಿತಿ ಇಒ, ತಹಶೀಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ರೈತರ ತುರ್ತು ಸಭೆಗಳನ್ನು ನಡೆಸಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.  

ಜಿಲ್ಲೆಯಲ್ಲಿ ಒಟ್ಟು 1.65 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದರೂ, ಇದುವರೆಗೆ ಕೇವಲ 55,539 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ. ಇದು ಒಟ್ಟು ಗುರಿಯ ಶೇ.34ರಷ್ಟೇ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಿತ್ತನೆ ಪ್ರಮಾಣದಲ್ಲಿ ಶೇ.15ರಷ್ಟು ಕುಸಿತ ಕಂಡುಬಂದಿದೆ.  

ತುಂಗಭದ್ರಾ ಜಲಾಶಯದಲ್ಲಿ ಕನಿಷ್ಠ 60 ಟಿಎಂಸಿ ನೀರು ಸಂಗ್ರಹವಾಗಿರಬೇಕಾದರೆ, ಪ್ರಸ್ತುತ ಕೇವಲ 25 ರಿಂದ 28 ಟಿಎಂಸಿ ನೀರು ಮಾತ್ರ ಲಭ್ಯವಿದೆ. ನೀರಿನ ಕೊರತೆಯಿಂದ ಭತ್ತದ ನಾಟಿ ಕಾರ್ಯಗಳು ಸ್ಥಗಿತಗೊಂಡಿದ್ದು, ರೈತರು ಆತಂಕದಲ್ಲಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕರು ಮಾಹಿತಿ ನೀಡಿದರು.  

ಕೃಷಿ ಇಲಾಖೆಯು ಸಿದ್ಧಪಡಿಸಿರುವ ಪರ್ಯಾಯ ಬೆಳೆಗಳ ಮಾರ್ಗಸೂಚಿಗಳನ್ನು ಗ್ರಾಮ ಮಟ್ಟದಲ್ಲಿ ಜಾರಿಗೆ ತರಬೇಕು. ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ರೈತರಿಗೆ ಸೂಕ್ತ ಸಲಹೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.  

ಬರಗಾಲದ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ಬೆಳೆ ವಿಮೆ ಯೋಜನೆಯ ನೋಂದಣಿ ಪ್ರಮಾಣವನ್ನು ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬೆಳೆ ವಿಮೆಯ ಮಹತ್ವದ ಬಗ್ಗೆ ಗ್ರಾಮ ಮಟ್ಟದಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳುವಂತೆಯೂ ಸೂಚಿಸಿದರು.