ಬೆಂಗಳೂರು, ಡಿ. 17 : ರಾಜ್ಯದಲ್ಲಿ ಸುರಕ್ಷತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಗೃಹ ಇಲಾಖೆ ರಾತ್ರಿ ಹೊತ್ತು ಸಂಚರಿಸುವ ಪೊಲೀಸ್ ಗಸ್ತು ವಾಹನಗಳಿಗೆ ಹೆಚ್ಚು ಮಹತ್ವ ನೀಡಿದ್ದು, 15ಕೋಟಿ ರೂ.ವೆಚ್ಚದಲ್ಲಿ 88 ಹೊಸ ಗಸ್ತು ವಾಹನಗಳನ್ನು ಖರೀದಿಸಿದೆ.ವಿಧಾನಸೌಧದ ಮುಂಭಾಗದಲ್ಲಿ ಹೊಸ ವಾಹನಗಳಿಗೆ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಸಿರು ನಿಶಾನೆ ತೋರಿದರು. ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೈಬರ್, ಎಕನಾಮಿಕ್ ಅಂಡ್ ನಾರ್ಕೊಟಿಕ್ (ಸೆನ್) ಪೊಲೀಸ್ ಠಾಣೆಗಳ ಮತ್ತು ಭಯೋತ್ಪಾದಕ ನಿಗ್ರಹ ದಳದ ಹೊಸ ಕೊಠಡಿಗಳಿಗೆ ಉದ್ಘಾಟನೆ ನೆರವೇರಿಸಿದರು.ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಉಪಮುಖ್ಯಮಂತ್ರಿ ಲಕ್ಷ್ಮಣಸವದಿ, ಶಾಸಕ ರಿಜ್ವಾನ್ ಅರ್ಷದ್, ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿರಾಜು, ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್, ಗೃಹ ಕಾರ್ಯದರ್ಶಿ ರಜನೀಶ್ ಗೋಯಲ್ ಮತ್ತಿತರರು ಭಾಗಿಯಾಗಿದ್ದರು.ಯಡಿಯೂರಪ್ಪ ಮಾತನಾಡಿ, ರಾಷ್ಟ್ರದಲ್ಲೇ ಅತ್ಯಂತ ಉತ್ತಮ ಕಾನೂನು ಸುವ್ಯವಸ್ಥೆ ಹೊಂದಿರುವ ರಾಜ್ಯ ಕರ್ನಾಟಕ. ರಾಜ್ಯ ಪೊಲೀಸರ ಕಾರ್ಯವೈಖರಿ ಮಾದರಿಯಾಗಿದೆ. ಬೆಂಗಳೂರಿನಲ್ಲಿ ಸೈಬರ್ ಕ್ರೈಂ, ಸರಗಳ್ಳತನ, ಕೊಲೆ, ಸುಲಿಗೆ ಪ್ರಕರಣಗಳು ಹೆಚ್ಚುತ್ತಿವೆ. ಅವುಗಳ ನಿಗ್ರಹಕ್ಕೆ ಮೊದಲ ಅದ್ಯತೆ ನೀಡಬೇಕಾಗಿದೆ. ಕೇಂದ್ರ ಗೃಹ ಸಚಿವರೂ ಕೂಡ ಅಗತ್ಯ ನೆರವು ನೀಡುತ್ತಾರೆ ಎಂದರು. ಅಪಪಘಾತಗಳಲ್ಲಿ ಗಾಯಗೊಂಡ ನಾಗರೀಕರು ಮುಖ್ಯಮಂತ್ರಿ ಸಾಂತ್ವನ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ. ಈಗಾಗಲೇ 200 ಗಸ್ತು ವಾಹನಗಳಿವೆ. ಅದರ ಜತೆಗೆ ಇನ್ನೂ 88 ವಾಹನಗಳು ಸೇರ್ಪಡೆಯಾಗಿವೆ. ಹಗಲು ರಾತ್ರಿ ಗಸ್ತು ಹೆಚ್ಚಳ ಮಾಡಿ ಅಪರಾಧ ನಿಯಂತ್ರಣ ಮಾಡಬೇಕು. ಅದರಿಂದ ಸಮಾಜದಲ್ಲೂ ಪೊಲೀಸರ ಗೌರವ ಹೆಚ್ಚಳವಾಗುತ್ತದೆ ಎಂದರು.ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಸೈಬರ್ ಕ್ರೈಂ ಮತ್ತು ಅರ್ಥಿಕ ಅಪರಾಧಗಳ ನಡುವೆ ನೇರ ಸಂಬಂಧ ಇದೆ. ನಾರ್ಕೊಟಿಕ್ ಮತ್ತು ಸೈಬರ್ ಕ್ರೈಂ ನಡುವೆ ಅಂತರ್ ಸಂಬಂಧವಿದೆ. ಇತ್ತೀಚೆಗೆ ಸೈಬರ್ ಕ್ರೈಂ, ಆರ್ಥಿಕ ಅಪರಾಧ ಮತ್ತು ಮಾದಕ ವಸ್ತು ಮಾರಾಟ ಬಳಕೆ ಪ್ರಕರಣಗಳು ಹೆಚ್ಚಾಗಿವೆ. ಒಂದೊಂದು ಸೈಬರ್ ಠಾಣೆಗೆ ಹತ್ತು ಸಾವಿರಕ್ಕಿಂತ ಹೆಚ್ಚು ದೂರುಗಳು ಬಂದಾಗ ನಿರ್ವಹಣೆ ಕಷ್ಟವಾಗಿತ್ತು. ಹಾಗಾಗಿ ಬೆಂಗಳೂರು ವಿಭಾಗದಲ್ಲಿ ಎಂಟು ಸೈಬರ್ ಠಾಣೆಗಳನ್ನು ಪ್ರಾರಂಭಿಸುತ್ತಿದ್ದೇವೆ. ಈ ಠಾಣೆಗಳಲ್ಲಿ ಐಟಿ ತಜ್ಞರನ್ಬು 35,000ದಿಂದ 50,000ರೂ ವರಗೆ ವೇತನ ನೀಡಿ ಸೈಬರ್ ಠಾಣೆಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ನಮ್ಮ ಪೊಲೀಸರು ಸದಾ ಜಾಗೃತರಾಗಿರುತ್ತಾರೆ ಎಂದರು.ಬೆಂಗಳೂರಿನಲ್ಲಿ ಭಯೋತ್ಪಾದಕರ ಸ್ಲೀಪರ್ ಸೆಲ್ ಗಳಿವೆ ಎಂದು ಎನ್ ಐಎ ಮಾಹಿತಿ ಬಂದಿದೆ. ಹಾಗಾಗಿ ಬೆಂಗಳೂರಿಗೆ ಪ್ರತ್ಯೇಕ ಭಯೋತ್ಪಾಕ ನಿಗ್ರಹ ದಳ ಸ್ಥಾಪನೆ ಮಾಡುತ್ತಿದ್ದೇವೆ. ಬೆಂಗಳೂರನ್ನು ಭಯೋತ್ಪಾದಕ ಮುಕ್ತ ಹಾಗೂ ನಾಗರೀಕ ಸುರಕ್ಷ ನಗರವಾಗಿ ಮಾಡುವುದು ನಮ್ಮ ಗುರಿ ಎಂದರು.ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿರುವಂತೆ ಅಪರಾಧದ ಮಾದರಿ ಕೂಡ ಮುಂದುವರಿದಿರುತ್ತದೆ, ಅದಕ್ಕೆ ತಕ್ಕಂತೆ ಪೊಲೀಸರೂ ಮೇಲ್ದಜರ್ೆಗೇರಬೇಕು, ನಾನು ಕೂಡ ಸೈಬರ್ ಕ್ರೈಂ ಠಾಣೆಗೆ ದೂರು ಕೊಟ್ಟಿದ್ದೆ. ಆ ಸ್ಟೇಷನ್ ಮೇಲೆ ಎಷ್ಟು ಒತ್ತಡ ಇತ್ತೆಂದರೆ ಇದುವರೆಗೆ ರಿಸಲ್ಟ್ ಕೊಡಲು ಆಗಿಲ್ಲ. ಇತ್ತೀಚೆಗಂತೂ ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲಿ ಫೇಕ್ ನ್ಯೂಸ್ ಹಾವಳಿ ಹೆಚ್ಚಾಗಿದೆ. ಮೊದಲು ಇದನ್ನು ಮಟ್ಟ ಹಾಕಬೇಕಾಗಿದೆ. ಯುವ ಪೀಳಿಗೆ ಹೆಚ್ಚಾಗಿ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಪೊಲೀಸರು ಮನಸ್ಸು ಮಾಡಿದರೆ ಒಂದೇ ನಿಮಿಷದಲ್ಲಿ ಇದನ್ನು ನಿಯಂತ್ರಿಸಬಹುದು. ಶಾಲಾ- ಕಾಲೇಜುಗಳ ಬಳಿ ಡ್ರಗ್ಸ್ ಮಾರಾಟ ನಡೆಯುತ್ತಲೇ ಇದೆ. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿಮಾಡಿದರು.ಭಯೋತ್ಪಾದಕ ವಿಷಯದಲ್ಲಿ ಎಂದಿಗೂ ಹೊಂದಾಣಿಕೆ ಬೇಡ. ಯಾವುದೇ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಬ್ರಾಂಡ್ ಮಾಡುವ ಮೊದಲು ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಿ. ಇಲ್ಲವಾದರೆ ಅವರು ಸುಲಭವಾಗಿ ಹೊರ ಬರುತ್ತಾರೆ. ಅದಕ್ಕೆ ಅವಕಾಶ ಕೊಡಬಾರದು ಎಂದರು.