ಶಾಲಾ ಕೊಠಡಿ ಮತ್ತು ರಸ್ತೆ- ಸವಳು ಜವಳು ನಿರ್ಮೂಲನಾ ಕಾಮಗಾರಿಗೆ ಭೂಮಿ ಪೂಜೆ.
ಚಿಕ್ಕೋಡಿ, 02; ತಾಲೂಕಿನ ಯಡೂರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ 2.43 ಕೋಟಿ ರೂ ಅನುದಾನ ಮಂಜೂರಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.
ಸುಕ್ಷೇತ್ರ ಯಡೂರ ಗ್ರಾಮದಲ್ಲಿ 62 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ 4 ಹೊಸ ಶಾಲಾ ಕೊಠಡಿಗಳು, 1 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಹಾಗೂ 81 ಲಕ್ಷ ವೆಚ್ಚದ ಸವಳು-ಜವಳು ನಿರ್ಮೂಲನಾ ಯೋಜನೆಗೆ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಮಂಜೂರಾಗಿದೆ ಎಂದರು.
ಈ ಯೋಜನೆಗಳ ಮೂಲಕ ಶಿಕ್ಷಣ ವ್ಯವಸ್ಥೆ ಬಲಪಡಿಸಲು, ರಸ್ತೆ ಸಂಪರ್ಕ ಸುಧಾರಿಸಲು ಹಾಗೂ ಜಮೀನಿನಲ್ಲಿ ನಿಂತ ನೀರನ್ನು ಪೈಪ್‌ಲೈನ್ ಮುಖಾಂತರ ಹೊರತೆಗೆದು ಕೃಷಿಗೆ ಅನುಕೂಲ ಕಲ್ಪಿಸಲು ನಾನು ಹಾಗೂ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಬದ್ಧರಾಗಿದ್ದೇವೆ ಎಂದರು.
ಯಡೂರ ಗ್ರಾಮದ ಮುಖಂಡರಾದ ಜಯಪಾಲ ಬೋರಗಾಂವೆ ಅವರು ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಸಹಕರಿಸುವುದು ನಮ್ಮೆಲ್ಲರ ಸಾಮೂಹಿಕ ಹೊಣೆ. ಶಾಲಾ ಕೊಠಡಿಗಳಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಸೌಲಭ್ಯ ಸಿಗಲಿದೆ, ಉತ್ತಮ ರಸ್ತೆಯಿಂದ ಜನರ ಸಂಚಾರ ಸುಗಮವಾಗಲಿದೆ ಹಾಗೂ ಸವಳು-ಜವಳು ನೀರು ನಿಷ್ಕಾಷಣ ಯೋಜನೆಯಿಂದ ಕೃಷಿ ಭೂಮಿಯು ಉತ್ತಮ ಫಲವತ್ತಾಗಲಿದೆ. ಇದರಿಂದ ಜಮೀನಿನಲ್ಲಿ ನಿಂತ ನೀರಿನಿಂದ ಉಂಟಾಗುವ ಬೆಳೆ ಹಾನಿ ತಪ್ಪಲಿದೆ. ಪ್ರಕಾಶ ಹುಕ್ಕೇರಿ ಹಾಗೂ ಗಣೇಶ ಹುಕ್ಕೇರಿ ಅವರ ಮುಂದಾಳತ್ವದಲ್ಲಿ ಈ ಮಹತ್ವದ ಯೋಜನೆಗಳು ಸುಗಮವಾಗಿ ಪೂರ್ಣಗೊಳ್ಳಲಿವೆ ಎಂದು ಹೇಳಿದರು.
ಈ ವೇಳೆ ರಾಹುಲ ದೇಸಾಯಿ, ಬಾಳು ಧನಗರ, ಮಾರುತಿ ಶಿಂಧೆ, ಅಜೀತ ಕಿಲ್ಲೇದಾರ, ಸಂಜು ಪಿರಾಜೆ, ತೇಜು ಪಾಟೀಲ, ವಿಜಯ ಜಾಮದಾರ, ಸಚಿನ ಮಾನೆ, ಕಮತೆ ಸರ್, ಸುಕುಮಾರ ಚೌಗುಲೆ, ಪ್ರಶಾಂತ ಉಮರಾಣಿ, ಗುತ್ತಿಗೆದಾರ ಮಹೇಶ ಕಾಗವಾಡೆ, ಶಿವಾನಂದ ಕರೋಷಿ, ಕಿರಣ ಮಾಳಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.