ಚರಂಡಿ-ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಲೋಕದರ್ಶನ ವರದಿ

ಶೇಡಬಾಳ 06: ಕಳೆದ 25 ವರ್ಷಗಳಿಂದ ಕಾಗವಾಡ ಪಟ್ಟಣದ ಸಾರ್ವಜನಿಕರ ಮೂಲಭೂತ ಬೇಡಿಕೆಗಳಾಗಿದ್ದ ಕಾಮಗಾರಿಗಳು ಕಾಗವಾಡ ಕ್ಷೇತ್ರದ ಶಾಸಕರು ಹಾಗೂ ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮಂತ ಬಾಳಾಸಾಬ ಪಾಟೀಲರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಜಿಲ್ಲಾ ಪಂಚಾಯತ ಸದಸ್ಯ ಅಜೀತ ಚೌಗಲಾ ಹಾಗೂ ಹಿರಿಯ ಮುಖಂಡ ಸುಭಾಷ ಕಟಾರೆ ಹೇಳಿದರು.

ಅವರು ಶುಕ್ರವಾರ ದಿ. 6 ರಂದು ಕಾಗವಾಡ ಪಟ್ಟಣದ ಸಂತುಬಾಯಿ ಮಂದಿರ ಹತ್ತಿರ ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ಕರ್ನಾಟಕ ಸರ್ಕಾರದ ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮಂತ ಪಾಟೀಲರ ಅನುದಾನದಲ್ಲಿ ಮಂಜೂರಾದ ಎಸ್.ಸಿ. ಕಾಲೋನಿಯ ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. 

ಇಲ್ಲಿಯವರೆಗೆ ಕಾಗವಾಡ ಪಟ್ಟಣದ ಸರ್ವಾ೦ಗೀಣ ಅಭಿವೃದ್ಧಿಗಾಗಿ ಸಚಿವರು ಕೋಟ್ಯಾಂತರ ರೂ.ಗಳನ್ನು ಅನುದಾನವನ್ನು ನೀಡಿದ್ದಾರೆಂದು ಹೇಳಿದರು. ದಲಿತ ಮುಖಂಡ ಪ್ರಕಾಶ ದೋಂಡಾರೆ ಮಾತನಾಡಿ ಮಾನ್ಯ ಸಚಿವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಾಲೋನಿಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ದಲಿತರು ಅವರಿಗೆ ಚಿರಋಣಿಯಾಗಿದ್ದೇವೆಂದು ಹೇಳಿದರು.

ಕಾಗವಾಡ ಮತಕ್ಷೇತ್ರದಲ್ಲಿನ ಕಾಗವಾಡ, ಕಾತ್ರಾಳ, ಬಣಜವಾಡ ಎಸ್.ಸಿ.ಪಿ., ಎಸ್.ಟಿ.ಪಿ. ಯೋಜನೆಯಡಿಯಲ್ಲಿ 40 ಲಕ್ಷ ರೂ. ವೆಚ್ಚದ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು. 

ಈ ಸಮಯದಲ್ಲಿ ಜಿ.ಪಂ. ಸದಸ್ಯ ಅಜೀತ ಚೌಗಲಾ, ಹಿರಿಯ ಮುಖಂಡರಾದ ಸುಭಾಷ ಕಟಾರೆ, ಪ್ರಕಾಶ ಮಿರ್ಜೆ, ಅಪ್ಪಿ ಚೌಗಲಾ, ಶಿವಾಜಿ ಗಾಯಕವಾಡ, ಬಾಜಿರಾವ ಮೋರೆ, ರಾಜು ಮಾನೆ, ಬಾಬಾಸಾಹೇಬ ಚೌಗಲಾ, ಪ್ರಕಾಶ ದೋಂಡಾರೆ, ರವಿ ಪಾಟೀಲ, ಸುಭಾಷ ಪಾಟೀಲ, ಅಪ್ಪಾಸಾಬ ಪಾಟೀಲ, ವಿನೋದ ದೇವಣೆ, ವಿಠ್ಠಲ ಪವಾರ, ಬಾಳಾಸಾಬ ಕಾಂಬಳೆ, ಅವಿನಾಶ ದೇವಣೆ, ಜಾವೇದ ಶೇಖ, ಶಾಂತಿನಾಥ ಮೋಳೆ, ರಾಜು ವಡ್ಡರ, ವಿಠ್ಠಲ ಪವಾರ, ಶರದ ಪವಾರ, ಪ್ರವೀಣ ಸಿಂಧೆ, ಪ್ರಕಾಶ ಕಾಂಬಳೆ, ದೀಪಕ ಕಾಂಬಳೆ, ವಿಜಯ ಸಂಬಾಳೆ, ವಿಲಾಸ ಚಿಪ್ಪರಗೆ, ವಿಠ್ಠಲ ಗಾಡಿವಡ್ಡರ ಸೇರಿದಂತೆ ಅನೇಕರು ಇದ್ದರು.