ನಾಟಕಗಳು ಸಾಮಾಜಿಕ ಸಂದೇಶ ಸಾರುತ್ತವೆ:ಡಾ.ಪ್ರಕಾಶ ಗರುಡ

ಧಾರವಾಡ 12: ಸಮಾಜದಲ್ಲಿ ನಡೆಯುತ್ತಿರುವ ವಿಷಯ, ಘಟನೆ, ವಿಚಾರ ಹಾಗೂ ಸಮಸ್ಯೆಗಳು ಸೇರಿದಂತೆ ಹಲವಾರು ಪ್ರಚಲಿತ ವಿದ್ಯಮಾನಗಳ ಕುರಿತು ನಾಟಕಗಳು ಜನರಿಗೆ ಅರ್ಥಪೂರ್ಣವಾದ ಸಂದೇಶಗಳನ್ನು ನೀಡುತ್ತವೆ ಎಂದು ರಂಗನಿರ್ದೇಶಕರಾದ ಡಾ.ಪ್ರಕಾಶ ಗರುಡ ಅವರು ಹೇಳಿದರು. 

ಇಂದು ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ ಆಯೋಜಿಸಿದ್ದ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. ರಂಗಭೂಮಿಯು ಜನರಿಗೆ ಹಲವಾರು ವಿಷಯಗಳ ಕುರಿತು ಮನವರಿಕೆ ಮಾಡಿ ತಿಳುವಳಿಕೆಯನ್ನು ಮೂಡಿಸುತ್ತದೆ. ನೋಡುಗರಿಗೆ ಮನರಂಜನೆಯೊಂದಿಗೆ ಮಾಹಿತಿಯನ್ನು ನೀಡುತ್ತವೆ. ಬ್ರೆಕ್ಟ್‌ ನಾಟಕಗಳು ಸಮಕಾಲೀನ ತಲ್ಲಣಗಳನ್ನು ಪ್ರತಿಧ್ವನಿಸುತ್ತವಲ್ಲಿ ಪ್ರಮುಖ ಪಾತ್ರವಹಿಸಿವೆ. ರಂಗಾಯಣವು ಅನೇಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ರಂಗಭೂಮಿಯನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ ಎಂದು ಅವರು ಹೇಳಿದರು.       

ರಂಗಾಯಣವು ರಂಗಭೂಮಿಯ ಕಲೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಕಲಾವಿದರಿಗೂ ಹಲವಾರು ಅವಕಾಶಗಳನ್ನು ನೀಡಿ ಪ್ರೋತ್ಸಾಹವನ್ನು ನೀಡುತ್ತಿದೆ. ಆಧುನಿಕ ಭರಾಟೆಯಲ್ಲಿ ನಾಟಕಗಳು ನಶಿಸಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ರಂಗಾಯಣವು ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ರಂಗಭೂಮಿಯನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರಂಗಾಸಕ್ತರು ಬರುವುದರ ಮೂಲಕ ರಂಗಾಯಣದ ಬೆಳವಣಿಗೆಗೆ ಸಹಕಾರವನ್ನು ನೀಡಬೇಕು ಎಂದು ರಂಗಾಯಣ ನಿರ್ದೇಶಕರಾದ ಡಾ. ರಾಜು ತಾಳಿಕೋಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ರಂಗಾಯಣದ ಆಡಳಿತಾಧಿಕಾರಿಗಳಾದ ಶಶಿಕಲಾ ವೀ ಹುಡೇದ ಅವರು ಸ್ವಾಗತಿಸಿದರು.  ಸಾಹಿತಿಗಳು, ರಂಗಾಸಕ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು. ನಂತರ ಶಖೀಲ್ ಅಹ್ಮದ್ ಅವರು ನಿರ್ದೇಶಿಸಿದ “ತಿಂಡಿಗೆ ಬಂದ ತುಂಡೇರಾಯ” ನಾಟಕವನ್ನು ನಿರ್ದಿಗಂತ ಕಲಾವಿದರು ಪ್ರದರ್ಶಿಸಿದರು.