ನಮ್ಮನ್ನು ನಾವು ನೋಡಿಕೊಳ್ಳುವ ಮಾಧ್ಯಮವೇ ನಾಟಕ: ಡಾ. ಹೆಗಡೆ

Drama is the medium through which we look after ourselves: Dr. Hegde

ವಿಶ್ವ ರಂಗಭೂಮಿ ದಿನಾಚಾರಣೆ ಮತ್ತು “ರಂಗಸಖ” ಪ್ರಶಸ್ತಿ ಪ್ರದಾನ ಸಮಾರಂಭ 

ಬೆಳಗಾವಿ 28;  ತ್ರೇತಾಯುಗ  ಆರಂಭವಾಗುವ ಕಾಲದಲ್ಲಿ ನಾಟಕ ಹುಟ್ಟಿಕೊಂಡಿತು. ಭೂಮಿಯ ಮೇಲೆ ಏನು ನಡಿತಾಯಿದೆ, ಯಾವ್ಯಾವ ಮೌಲ್ಯಗಳು ಕುಸಿಯುತ್ತಿವೆ ಇದನ್ನೆಲ್ಲ ತಿಳಿದುಕೊಳ್ಳುವ ಕುರಿತಂತೆ ದೇವತೆಗಳು ಸಂದಿಗ್ಧ ಪರಿಸ್ತಿತಿಯಲ್ಲಿ ಸಿಲುಕಿಕೊಂಡಾಗ ಹುಟ್ಟಿಕೊಂಡದ್ದೇ ನಾಟಕ. ಈಗ ನಮ್ಮನ್ನು ನಾವು ಕಂಡುಕೊಳ್ಳುವ  ಮಾಧ್ಯಮವಾಗಿ ಕಾರ್ಯ ನಿರ್ವಹಿಸುತ್ತಲಿದೆ. ನಮ್ಮ ನೋವು, ನಲಿವು, ಸುಖ ದುಃಖಗಳ ಪ್ರತಿಬಿಂಬವಾಗಿ ನಾಟಕ ಕಾರ್ಯ ನಿರ್ವಹಿಸುತ್ತಲಿದೆ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಜಿ. ಎಂ. ಹೆಗಡೆಯವರು ಇಂದಿಲ್ಲಿ ಹೇಳಿದರು. 

ದಿ. 27 ಗುರುವಾರದಂದು ಸಾ. 5-30 ಕ್ಕೆ ತಿಲಕಚೌಕ ಹತ್ತಿರುವಿರುವ ಲೋಕಮಾನ್ಯ ರಂಗ ಮಂದಿರದಲ್ಲಿ ರಂಗಸಂಪದದವರು ವಿಶ್ವ ರಂಗಭೂಮಿ ದಿನಾಚಾರಣೆ ಮತ್ತು “ರಂಗಸಖ” ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದ್ದರು. 2025 ರ ರಂಗಸಖ ಪ್ರಶಸ್ತಿಯನ್ನು ಖ್ಯಾತ ಮೇಕಪ್ ಕಲಾವಿದರಾದ ಸಂತೋಷ ಮಹಾಲೆ ಇವರಿಗೆ ನೀಡಿ ಗೌರವಿಲಾಯಿತು.ಅತಿಥಿಗಳಾಗಿ ಆಗಮಿಸಿದ್ದ ಡಾ. ಜಿ. ಎಂ.ಹೆಗಡೆ ಮೇಲಿನಂತೆ ಅಭಿಪ್ರಾಯ ಪಟ್ಟರು. 2025ರ ರಂಗಸಖ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಖ್ಯಾತ ಮೇಕಪ್ ಕಲಾವಿದ ಸಂತೋಷ ಮಹಾಲೆ, ಪ್ರಶಸ್ತಿಯು ನನಗೆ ತುಂಬ ಸಂತೋಷವನ್ನುಂಟು ಮಾಡಿದೆ. ಮೆಕಪ್ ಕ್ಷೇತ್ರದಲ್ಲಿ ನಾನೇನಾದರೂ ಸಾಧನೆ ಮಾಡಿದ್ದೇನೆ ಎಂದರೆ ಅದು ರಂಗಸಂಪದ ಹಾಗೂ ನನ್ನ ತಂದೆಯವರು ಕಾರಣ ಅದಕ್ಕಾಗಿ ನನಗೆ ಸಂದ ಗೌರವವನ್ನು ನನ್ನ ತಂದೆಯವರಿಗೆ ಅರ​‍್ಿಸುತ್ತೇನೆ ಎಂದು ಹೇಳಿದ ಅವರು ರಂಗಸಂಪದದ ನಾಟಕಗಳಲ್ಲಿ ‘ಪರಿಮಳದವರು’ ನಾಟಕದಲ್ಲಿಯ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಪಾತ್ರದ ಮೇಕಪ್ ನನಗೆ ತುಂಭ ಖುಷಿಯನ್ನು ತಂದು ಕೊಟ್ಟಿದೆ ಎಂದು ಹೇಳಿದರು. 

ರಂಗ ಸಂಪದದ ಅಂಧ್ಯಕ್ಷರಾದ ಡಾ. ಅರವಿಂದ ಕುಲಕರ್ಣಿಯವರು ಮಾತನಾಡಿ ಮಾರ್ಚ 27 ವಿಶ್ವ ರಂಗಭೂಮಿ ದಿನಾಚರಣೆಯ ದಿನ. ಜಗತ್ತಿನ ತುಂಬೆಲ್ಲ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ರಂಗಸಂಪದ ಪ್ರತಿವರ್ಷವೂ ರಂಗಸಖ ಪ್ರಶಸ್ತಿ ನೀಡುವುದು ಮತ್ತು ಒಂದು ನಾಟಕ ಪ್ರದರ್ಶನದ ಮೂಲಕ ತಪ್ಪದೇ ಆಚರಿಸುತ್ತ ಬಂದಿದೆ ಎಂದು ಅಭಿಮಾನದಿಂದ ಹೇಳಲು ಬಯಸುತ್ತೇನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಅನನ್ಯ ತಂಡ ಬೆಂಗಳೂರು ಇವರಿಂದ ಖ್ಯಾತ ಕಿರುತೆರೆ ಕಲಾವಿದ ಎಸ್‌. ಎನ್‌. ಸೇತುರಾಮ ಅವರು ನಿರ್ದೇಶಿಸಿ ಅಭಿನಯಿಸಿರುವ ‘ತಳಿ’ ನಾಟಕ ಪ್ರದರ್ಶನಗೊಂಡಿತು. ಮಹಿಳಾ ಶೋಷಣೆಯನ್ನೇ ಮುಖ್ಯ ವಸ್ತುವನ್ನಾಗಿಟ್ಟುಕೊಂಡು ಈ ನಾಟಕವನ್ನು ಬರೆದಿದ್ದು. ನಾಟಕದ ಸಂಭಾಷಣೆ  ಪ್ರೇಕ್ಷಕರನ್ನು ಅಲ್ಲಲ್ಲಿ ತಲೆ ತಗ್ಗಿಸುವಂತೆ ಮಾಡುತ್ತದೆ. ಕುಟುಂಬ ಸಮೇತರಾಗಿ ಬಂದವರನ್ನು ಸಂಭಾಷಣೆಯು ಮುಜುಗರವನ್ನುಂಟು ಮಾಡುತ್ತದೆ. ಮುಖ್ಯ ಪಾತ್ರಧಾರಿ ಎಸ್‌. ಎನ್‌. ಸೇತುರಾಮ ಮಿಂಚಿದ್ದಾರೆ.  ಶ್ರೀಪತಿ ಮಂಜನಬೈಲು, ಸೌಮ್ಯ ಭಾಗವತ, ಅಪರ್ಣಾ ಗುಮಾಸ್ತೆ ತಮ್ಮ ಪಾತ್ರಗಳಿಗೆ ನ್ಯಾಯವನ್ನೊದಗಿಸಿದ್ದಾರೆ. ಪೂರ್ವಿ ರಾಜಪುರೋಹಿತ ಪ್ರಾರ್ಥಿಸಿದರು. ಅಧ್ಯಕ್ಷತೆಯನ್ನು ರಂಗಸಂಪದದ ಪೋಷಕರಾದ ಮಧ್ವಾಚಾರ್ಯ ಆಯಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾ.ಚ. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಸಿ. ಎಂ. ತ್ಯಾಗರಾಜ ಆಗಮಿಸಿದ್ದರು. ವಿಶ್ವ ರಂಗಭೂಮಿ ದಿನದ ಸಂದೇಶವನ್ನು ಪದ್ಮಾ ಕುಲಕರ್ಣಿ ವಾಚನ ಮಾಡಿದರು. ರಂಗಸಖ ಪ್ರಶಸ್ತಿ ವಾಚನವನ್ನು ಯೋಗೇಶ ದೇಶಪಾಂಡೆ ಮಾಡಿದರು. ಪ್ರಸಾದ ಕಾರಜೋಳ ವಂದಿಸಿದರು. ವೀಣಾ ಹೆಗಡೆ ನಿರೂಪಿಸಿದರು