ಡಾ.ಕೆ. ಸುಧಾಕರ್ ಪರ ತೆಲುಗಿನ ಬ್ರಹ್ಮಾನಂದ ಪ್ರಚಾರ

Brahmananda

ಚಿಕ್ಕಬಳ್ಳಾಪುರ, ನ 30-ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಅವರ ಪರವಾಗಿ ತೆಲುಗಿನ ಪ್ರಖ್ಯಾತ ಹಾಸ್ಯ ನಟ ಬ್ರಹ್ಮಾನಂದ ಪ್ರಚಾರ ನಡೆಸಿದರು. ಅವರ ತೆಲುಗು ಭಾಷೆಯ ಡೈಲಾಗ್ ಗಳಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಕೇಕೆ, ಶಿಳ್ಳೆ ಹಾಕಿ ಸಂಭ್ರಮಿಸಿದರು. 

ಹೈದ್ರಾಬಾದ್ ನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಸುಧಾಕರ್ ಸ್ವಗ್ರಾಮ ಪೆರೇಸಂದ್ರಕ್ಕೆ ಆಗಮಿಸಿದರು. ಪೆರೇಸಂದ್ರ ಕ್ರಾಸ್ ನಲ್ಲಿ ಭಾರೀ ರೋಡ್ ಶೋ ನಡೆಸಿದರು.

ಈ ವೇಳೆ ಮಾತನಾಡಿದ ಅವರು ,ಸುಧಾಕರ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದು, ಇಂತಹವರು ಮತ್ತೆ ಗೆಲ್ಲಬೇಕು. ಇವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿದರೆ ಗೆಲುವಿನ ವಿಜಯೋತ್ಸವದಲ್ಲಿ ಮತ್ತೆ ನಾನು ಭಾಗವಹಿಸುತ್ತೇನೆ ಎಂದರು. 

ತೆಲುಗಿನಲ್ಲೇ ಹಾಸ್ಯ ಭರಿತವಾಗಿ ಡೈಲಾಗ್ ಗಳ ಹೊಡೆದ ಬ್ರಹ್ಮಾನಂದ, ತಾಲೂಕಿನ ಮಂಡಿಕಲ್ಲು, ಕಮ್ಮಗುಟ್ಟಹಳ್ಳಿ ಮತ್ತಿತರ ಕಡೆ ಚುನಾವಣೆ ಪ್ರಚಾರ ನಡೆಸಿದರು. ಬ್ರಹ್ಮಾನಂದಂರನ್ನು ನೋಡಲು ಅವರ ಅಭಿಮಾನಿಗಳ ದಂಡೇ ನೆರದಿತ್ತು. ಜನಜಂಗುಳಿ ನಿಯಂತ್ರಿಸಲು ಪೋಲೀಸರು ಹರಸಾಹಸ ಪಟ್ಟರು.