ಎಐಸಿಸಿಗೆ ಸಭೆಯ ವರದಿ ಸಲ್ಲಿಸಿದ ಡಾ.ಜಿ.ಪರಮೇಶ್ವರ್

ಬೆಂಗಳೂರು,  ಜ.  6, ಪಕ್ಷ ಬಲವರ್ಧನೆ ಹಾಗೂ ಐಕ್ಯತೆ, ಸ್ಥಾನ ಹಂಚಿಕೆ ವಿಚಾರವಾಗಿ  ಹೈಕಮಾಂಡ್  ಸೂಚನೆ ಮೇರೆಗೆ ನಡೆದ ಸಭೆಯ ವರದಿಯನ್ನು ಕಾಂಗ್ರೆಸ್ ಹಿರಿಯ ನಾಯಕ  ಡಾ.ಜಿ.ಪರಮೇಶ್ವರ್  ಎಐಸಿಸಿಗೆ ರವಾನಿಸಿದ್ದಾರೆ.ಇಮೇಲ್ ‌ಮೂಲಕ ಸಭೆಯ ಎಲ್ಲ ಮಾಹಿತಿಯನ್ನು ವರದಿ ರೂಪದಲ್ಲಿ ಸಲ್ಲಿಸಿದ್ದಾರೆ.ವರದಿಯಲ್ಲಿ   ಕೆಪಿಸಿಸಿ ಅಧ್ಯಕ್ಷ ಬದಲಿಸುವುದಕ್ಕೆ ಯಾರ ಆಕ್ಷೇಪವೂ ಇಲ್ಲ. ಪಕ್ಷ ಸಂಘಟನೆ  ದೃಷ್ಟಿಯಿಂದ  ಆದಷ್ಟು ಬೇಗ ಅಧ್ಯಕ್ಷರ ನೇಮಕವಾಗಬೇಕೆಂದು ಪಕ್ಷದ ಮುಖಂಡರು ಕಾರ್ಯಕರ್ತರು   ಅಪೇಕ್ಷಿಸಿದ್ದಾರೆ. ಸಾರಥ್ಯಕ್ಕೆ ಡಿ.ಕೆ.ಶಿವಕುಮಾರ್ ಬಗ್ಗೆ ಹೆಚ್ಚು ಒಲವು   ವ್ಯಕ್ತವಾಗಿದೆ. ಅಲ್ಲದೇ ಎಂ.ಬಿ.ಪಾಟೀಲ್ ಹಾಗೂ ಈಶ್ವರ್ ಖಂಡ್ರೆ ಬಗ್ಗೆ ಸಹ ಕೆಲವರು   ಅಭಿಲಾಷೆ ವ್ಯಕ್ತಪಡಿಸಿ ಬಿಜೆಪಿಯಲ್ಲಿ  ಲಿಂಗಾಯತ ಸಮುದಾಯದ ಯಡಿಯೂರಪ್ಪ ಮುಖ್ಯಮಂತ್ರಿ   ಆಗಿರುವುದರಿಂದ ಅದೇ ಸಮುದಾಯದವರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದಲ್ಲಿ   ಪಕ್ಷಕ್ಕೆ ಲಾಭವಾಗಲಿದೆ ಎಂಬ ಲೆಕ್ಕಾಚಾರವಿದೆ. ವಿಪಕ್ಷ ನಾಯಕ ಮತ್ತು ಶಾಸಕಾಂಗ  ಪಕ್ಷದ  ನಾಯಕರ ಸ್ಥಾನಗಳನ್ನು ಒಬ್ಬರಿಗೆ ನೀಡುವುದು ಬೇಡ. ಪಕ್ಷ ಸಂಘಟನೆ ದೃಷ್ಟಿಯಿಂದ  ಎರಡನ್ನೂ  ಪ್ರತ್ಯೇಕಿಸುವಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ   ಉಲ್ಲೇಖಿಸಲಾಗಿದೆ.

ಎಐಸಿಸಿ ಮಟ್ಟದಲ್ಲಿ ಮತ್ತಿಬ್ಬರಿಗೆ ಅವಕಾಶ ಮಾಡಿಕೊಡಲು   ಮುಖಂಡರು ಸಭೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಧಿಕಾರದ ಆಸೆ ಬಿಟ್ಟು ಮುಂದೆ ಸಂಘಟನೆ   ಒತ್ತು ನೀಡಿ ಒಗ್ಗಟ್ಟಾಗಿರುವಂತೆ ಸಲಹೆ  ನೀಡಿದ್ದಾರೆ. ಇನ್ನಷ್ಟು ವಿಚಾರಗಳನ್ನು ಮುಖತಃ   ನಿಮ್ಮ ಜತೆ ಹಂಚಿಕೊಳ್ಳುವುದು ಇದೆ. ಹೀಗಾಗಿ ಭೇಟಿಯ ಅವಕಾಶಕ್ಕಾಗಿ ಕಾಯುತ್ತಿದ್ದೇನೆ   ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಮಯಾವಕಾಶಕ್ಕಾಗಿ ಮನವಿ ಮಾಡಿದ್ದಾರೆ‌   ಎನ್ನಲಾಗಿದೆ.