ಸೇವಾ ಬದ್ಧತೆ ಪ್ರದರ್ಶಿಸಿದ ಡಾ.ವಿಶಾಲ್ ಗೌಡ

ಲೋಕದರ್ಶನವರದಿ

ಮಹಾಲಿಂಗಪುರ : ಪ್ರವಾಹದಿಂದ ಜನತೆ ತಮ್ಮೆಲ್ಲ  ಸಾಮಾನು ಸರಮಜಾಮುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದಂತೆ ಜಾನುವಾರುಗಳನ್ನು ಅಷ್ಟೇ ಕಾಳಜಿಯಿಂದ ಸಾಗಿಸಿದ್ದಾರೆ.ಅವುಗಳ ಆರೋಗ್ಯದಲ್ಲಿ ಏರುಪೇರಾದಾಗ ಯುದ್ದೋಪಾದಿಯಲ್ಲಿ ಪಶು ವೈದ್ಯರೊಬ್ಬರು ಪ್ರವಾಹದ ದಿನದಿಂದ ಇಲ್ಲಿಯವರೆಗೆ ಹಗಲು ರಾತ್ರಿಯಲ್ಲೂ ಜಾನುವಾರುಗಳಿಗೆ ಚಿಕಿತ್ಸೆ ನೀಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಹೆಸರೆ ಡಾ.ವಿಶಾಲಗೌಡ. 

         ಸಮೀಪದ ಢವಳೇಶ್ವರ ಗ್ರಾಮದ ಸರಕಾರಿ ಪಶು ಆಸ್ಪತ್ರೆಯಲ್ಲಿ ವೈದ್ಯ ವೃತಿಯಲ್ಲಿ ತೊಡಗಿದ್ದಾರೆ. ಸರಳ ಸಜ್ಜನಿಕೆ,  ಪ್ರಾಮಾಣಿಕ ಸೇವೆ, ಮತ್ತು  ಗುಣಮಟ್ಟದ ಚಿಕಿತ್ಸೆಗೆ ಹೆಸರಾದವರು. ಢವಳೇಶ್ವರ ಮತ್ತು ಸುತ್ತಲಿನ ಗ್ರಾಮಗಳ ಹಸು, ಎತ್ತು, ಎಮ್ಮೆ, ಕುದುರೆ, ಕುರಿ, ಮೇಕೆ,ಎಲ್ಲ ಪ್ರಾಣಿಗಳಿಗೆ ಚಿಕಿತ್ಸೆ ನೀಡಿ ಜನರ ಮೆಚ್ಚುಗೆ ಪಡೆದಿದ್ದಾರೆ.  

            ಸಹಜ ಸ್ಥಿತಿಯಲ್ಲಿದ್ದ ದಿನಗಳಲ್ಲಿಯೇ ತಮ್ಮ ಸೇವಾನಿಷ್ಠೆಗೆ  ಹೆಸರಾಗಿದ್ದ ಅವರು ಪ್ರವಾಹದ ದಿನಗಳಲ್ಲಿ ಇವರ ಸೇವೆ ಸಾರ್ಥಕತೆ ಪಡೆಯಿತು. ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12 ರ ವರೆಗೂ ಊಟ, ನಿದ್ರೆಯನ್ನೂ ಲೆಕ್ಕಿಸದೆ ತಮ್ಮ ಪ್ರಾಮಾಣಿಕ ಸೇವೆಯನ್ನು ಡವಳೇಶ್ವರ್, ನಂದಗಾಂವ್ ಗ್ರಾಮಗಳಲ್ಲಿ   ಸಲ್ಲಿಸಿದ್ದಾರಲ್ಲದೆ ಖುದ್ದು ತಾವೆ ನಿಂತು ರೈತರಿಗೆ ತಾರತಮ್ಯ ಮಾಡದೆ ಮೇವು,ಹಿಂಡಿ ವಿತರಿಸಿ ರೈತರ ಮಧ್ಯ ಆಗುವ ಕ್ಷುಲ್ಲಕ ಜಗಳಗಳಿಗೆ ಇತಿಶ್ರೀ ಹಾಡಿದ್ದಾರೆ.  

            ಸಮಾಧಾನದಿಂದಲೇ ಜನತೆಯ ಸಿಟ್ಟನ್ನು ಸಹಿಸಿಕ್ಕೊಂಡು  ಸೇವೆ ಮಾಡಿ ಪಶುಗಳ ಆರೋಗ್ಯ ಸ್ಥಿರವಾಗಿರುವಂತೆ ನೋಡಿಕ್ಕೊಂಡಿದ್ದಾರೆ.  ಮನಸ್ಸು, ಹೃದಯ, ತಾಳ್ಮೆ, ಕ್ರಿಯಾಶೀಲತೆ, ಜಾನುವಾರುಗಳ ಮೇಲಿನ ಪ್ರೀತಿ ಎದ್ದು ಕಾಣುತ್ತದೆ 

              ಢವಳೇಶ್ವರ ಗ್ರಾಮದ 2800 ಜಾನುವಾರುಗಳು, ನಂದಗಾವನ 750 ಜಾನುವಾರುಗಳು ಪ್ರವಾಹ ಪರಿಣಾಮಕ್ಕೆ ಸಿಲುಕಿದವು,  ಅವುಗಳ ಸ್ಥಳಾಂತರ, ರಕ್ಷಣೆ ದೊಡ್ಡ ಸವಾಲಾಗಿತ್ತು,  ಆದರೆ  ಸರಕಾರ, ಸ್ವಯಂ ಸಅೇವಕರು,  ಸಾರ್ವಜನಿಕರ ಸಹಾಯ ಸಹಕಾರದಿಂದ ಅವುಗಳನ್ನು ರಕ್ಷಿಸಿ ಚಿಕಿತ್ಸೆ ನೀಡಲಾಯಿತು, ಈ ಸಮಯದಲ್ಲಿ 8 ಜಾನುವಾರುಗಳ ಹೆರಿಗೆಯನ್ನು ಸುರಕ್ಷಿತವಾಗಿ ಮಾಡಿಸಲಾಯಿತು , ಕರು ಸಮೇತ ಆರೋಗ್ಯವಾಗಿವೆ. ಇದುವರೆಗೂ ಸರಕಾರ 130 ಟನ್ , ದಾನಿಗಳು 50 ಟನ್ ಒಟ್ಟು 180 ಟನ್ ಹಸಿ ಮೇವು 50 ಕೆಜಿ ಯ 190 ಚೀಲ ಹಿಂಡಿ ವಿತರಿಸಲಾಗಿದೆ, ಬ್ಯಾಂಕ್ ಆಫ್ ಬರೋಡ 10 ಸಾವಿರ ರೂ. ಮೌಲ್ಯದ ಔಷಧಿ ವಿತರಿಸಿದೆ . ಸದ್ಯದಲ್ಲಿ ಎಲ್ಲಾ ಜಾನುವಾರುಗಳೂ ಆರೋಗ್ಯವಾಗಿವೆ. ಅನಿರೀಕ್ಷಿತ ಆಘಾತಕ್ಕೊಳಗಾಗಿರುವ ಜಾನುವಾರು ಸಬಲಗೊಳ್ಳಲು ಖನಿಜ ಮಿಶ್ರಣ ಆಹಾರ ದ ಅವಶ್ಯಕತೆ ಇದೆ. 

           ಆದರೂ ಅನಾರೋಗ್ಯದಿಂದ ಢವಳೇಶ್ವರದ 1 ಹಸು,  2 ಎಮ್ಮೆ  ಮತ್ತು ನಂದಗಾಂವನ 1 ಹಸು, 4 ಮೇಕೆಗಳು ಮರಣ ಹೊಂದಿವೆ.ಎಂದು ಪಶು ವೈದ್ಯ ವಿಶಾಲಗೌಡ ಹೇಳುತ್ತಾರೆ.   

            ನಾವು ಮನುಷ್ಯರು,  ನಮಗೆ ಬಂದ ಕಷ್ಟ ನೋವುಗಳನ್ನು ನಾವು ಹೇಳಿಕೊಳ್ಳುತ್ತೇವೆ. ಆದರೆ ಮೂಕ ಪ್ರಾಣಿಗಳ ನೋವು ಸಂಕಟ ಅರಿತು,  ಚಿಕಿತ್ಸೆ ನೀಡಿದ ಪಶು ವೈದ್ಯ ಡಾ.ವಿಶಾಲಗೌಡರಿಗೆ  ಮಲ್ಲು ಕಮತಗಿ, ಲಕ್ಷ್ಮಣ ಪಾಟೀಲ, ಮಲ್ಲವ್ವ ಪಾಟೀಲ, ಅಶೋಕ ಪಾಟೀಲ. ಢವಳೇಶ್ವರ ಸಂತ್ರಸ್ತರು ಅಭಿನಂದನೆ ಸಲ್ಲಿಸಿದ್ದಾರೆ.