ಬಳ್ಳಾರಿ, ಜೂ 12,ಜ್ವರದ ಲಕ್ಷಣಗಳನ್ನು ಹೊಂದಿದವರೇ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ಗೆ ಬಲಿಯಾಗುತ್ತಿರುವುದರಿಂದ, ಅಂತಹ ಲಕ್ಷಣಗಳ್ಳುವರನ್ನು ಪ್ರತ್ಯೇಕಿಸಿ ಪರೀಕ್ಷಿಸುವಂತೆ ಸೂಚನೆ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.ಶುಕ್ರವಾರ ನಗರದ ವಿಮ್ಸ್ ಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 3 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಅವುಗಳಲ್ಲಿ ಶೇ.97ರಷ್ಟು ಜನರಿಗೆ ರೋಗ ಲಕ್ಷಣಗಳೇ ಇಲ್ಲ. ಆಗಸ್ಟ್ ಅಂತ್ಯಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಲಿವೆ ಎಂಬ ಪರಿಣಿತರ ವರದಿ ಅನುಸಾರ ತಕ್ಕ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.60 ವರ್ಷ ಮೇಲ್ಪಟ್ಟವರ ಪ್ರಕರಣಗಳನ್ನು ಮೊದಲಿಗೆ ಪತ್ತೆಹಚ್ಚಿ ಅವರನ್ನು ಪರೀಕ್ಷಿಸಲು ತಿಳಿಸಲಾಗಿದೆ. ಜೊತೆಗೆ, ಹವಾಮಾನ ಬದಲಾವಣೆಯಿಂದ ಹಾಗೂ ಸಾಮಾನ್ಯವಾಗಿ ಕೆಮ್ಮು, ನೆಗಡಿ, ಜ್ವರದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರು ಫೀವರ್ ಕ್ಲಿನಿಕ್ ಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಆನಂದಸಿಂಗ್, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ವಿಮ್ಸ್ ನಿರ್ದೇಶಕ ಡಾ.ಬಿ.ದೇವಾನಂದ್ ಉಪಸ್ಥಿತರಿದ್ದರು.