ಡಾ. ಆರ್. ಸಿ. ಹಿರೇಮಠರು ಬಹುಮುಖಿ ಚಿಂತಕರಾಗಿದ್ದರು

ಧಾರವಾಡ 18: ಕರ್ನಾ ಟಕ ವಿಶ್ವವಿದ್ಯಾಲಯವನ್ನು ಕಟ್ಟಿದವರು ಪಾವಟೆಯವರು, ನಂತರ ಇದನ್ನು ಬೆಳೆಸಿದವರಲ್ಲೊಬ್ಬರು ಡಾ. ಆರ್. ಸಿ. ಹಿರೇಮಠರು. ಇವರೊಬ್ಬ ಸಂಶೋಧಕರು, ಬರಹಗಾರರು, ವಚನಕಾರರು, ಕವಿಗಳು ಹೀಗೆ ಇವರು ಬಹುಮುಖಿ ಚಿಂತಕರಾಗಿದ್ದರು. ಆರ್. ಸಿ. ಹಿರೇಮಠರು ಹಕ್ಕಿಯ ಹಿಕ್ಕಿಯಾಗಿ ಬಿದ್ದರೂ ಮಹಾವೃಕ್ಷವಾಗಿ ಬೆಳೆದು ನಿಂತವರು. ಭಗವಂತನ ಪ್ರೇರಣೆ ಪಡೆದವರು,  ಇವರು ಸಂಶೋಧನೆಗೆ ಒಂದು ವಿವೇಕತೆ, ವಿನಯತೆ, ನಮ್ರತೆ ತುಂಬಿದವರು ಎಂದು ಕ.ವಿ.ವಿ. ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ  ಸಹಾಯಕ ಪ್ರಾಧ್ಯಾಪಕ ಡಾ. ಮುದೇನೂರು ನಿಂಗಪ್ಪ ಹೇಳಿದರು. 

ಕರ್ನಾ ಟಕ  ವಿದ್ಯಾವರ್ಧಕ ಸಂಘವು ಡಾ. ಆರ್. ಸಿ. ಹಿರೇಮಠ ದತ್ತಿ ಅಂಗವಾಗಿ ಆಯೋಜಿಸಿದ್ದ `ಡಾ. ಆರ್. ಸಿ. ಹಿರೇಮಠರವರ ಬಹುಮುಖಿ ಚಿಂತನೆ' ವಿಷಯದ ಮೇಲೆ ಉಪನ್ಯಾಸ ನೀಡುತ್ತಾ ಇವರು ಮಾತನಾಡುತ್ತಿದ್ದರು.

ಆರ್. ಸಿ. ಹಿರೇಮಠರು ಸೃಜನಶೀಲ ಕವಿಗಳೂ ಹೌದು. ಇವರು  ಸಾಹಿತ್ಯ, ಇತಿಹಾಸ, ಭಾಷಾ ವಿಜ್ಞಾನ ಪ್ರಾಚ್ಯವಸ್ತು ಸಂಶೋಧನೆ ಮತ್ತು ಚಾಲುಕ್ಯ, ರಾಷ್ಟ್ರಕೂಟರು, ಮೊಗಲರ ಕಾಲದ ಎಲ್ಲ ಇತಿಹಾಸವನ್ನು ಬಲ್ಲವರು. ಹುಡುಕಿ, ಸಂಗ್ರಹಿಸಿ ಸಂಪಾದನೆ ಮಾಡಿದವರು.  ಅವರ ಯೋಜನೆಗಳಿಗೆ ಒಂದು ಸ್ಪಷ್ಟತೆ ಇತ್ತು. ಹಿರೇಮಠರ ಹತ್ತಿರ ಸಮಾಜದಲ್ಲಿ ಅತೀ ಗಣ್ಯರ ಸಾಲಿನಲ್ಲಿದ್ದಂಥ ಸುಮಾರು 39 ವಿದ್ಯಾರ್ಥಿ ಗಳಿಗೆ ಪಿ.ಎಚ್.ಡಿ. ಮಾರ್ಗದರ್ಶನ ಮಾಡಿದವರು. ಯಾವುದೇ ಟಿಪ್ಪಣಿ ಇಲ್ಲದೇ ಪಾಠ ಮಾಡುತ್ತಿದ್ದರು. ಅವರು ಪಾಠ ಮಾಡುವಾಗ ಅತೀ  ಭಾವುಕರಾಗುತ್ತಿದ್ದರು. ಯಾವುದೇ ಒಂದು ಸನ್ನಿವೇಶ ಬಂದಾಗ ಆ ಪಾತ್ರದಲ್ಲಿ ತಾವೇ ಇದ್ದಾರೆನ್ನುವ ಹಾಗೇ ತಲ್ಲಿನರಾಗಿ ವಿದ್ಯಾರ್ಥಿ ಗಳಿಗೆ ಮನಮುಟ್ಟುವ ರೀತಿಯಲ್ಲಿ ಪಾಠ ಮಾಡುತ್ತಿದ್ದರು. ಇವರು ಮೂರ್ತಿ , ಶಿಲ್ಪಕಲೆಗಳ ಕುರಿತು ಬಹಳ ಅಧ್ಯಯನ ಮಾಡಿದ್ದಾರೆ, ಜೈನ ಧರ್ಮ, ಬೌದ್ಧ ಧರ್ಮ, ಸನಾತನ ಧರ್ಮ, ಪಾಲಿ ಭಾಷೆಗಳ ಕುರಿತು ಅಧ್ಯಯನ ಮಾಡಿದ್ದಾರೆ. ಯಾವುದೇ ಒಂದು ವಿಶ್ವವಿದ್ಯಾಲಯದ ಅದರ ಒಂದು ವಿಭಾಗಕ್ಕೆ ಹೆಸರು ಇಡುವುದು ಸಾಮಾನ್ಯವಲ್ಲ. ಕರ್ನಾ ಟಕ ವಿಶ್ವವಿದ್ಯಾಲಯ ಕನ್ನಡ ವಿಭಾಗಕ್ಕೆ ಡಾ. ಆರ್. ಸಿ. ಹಿರೇಮಠರ ಹೆಸರನ್ನು ಇಟ್ಟಿರುವುದು ಶ್ಲಾಘನೀಯ. ಇವರು ಕನ್ನಡ ವಿಶ್ವಕೋಶ ಯೋಜನೆ ಹಾಕಿದವರು, ಇವರ ಯೋಜನೆಗಳನ್ನು ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾಲಯಗಳು ಸಹ ಅಳವಡಿಸಿಕೊಂಡಿದ್ದವು. ಆರ್. ಸಿ. ಹಿರೇಮಠರ ಸಂಶೋಧನೆಗಳು ಯಾರ ಹುಟ್ಟಿನ ಬಗ್ಗೆ, ಕುಲದ ಬಗ್ಗೆ, ಜಾತಿಯ ಬಗ್ಗೆ ಎಂದೂ ಗೊಂದಲ ಹುಟ್ಟಿಸಿಲ್ಲ. ವಚನ ಸಾಹಿತ್ಯ, ವ್ಯಾಕರಣ ಸಾಹಿತ್ಯವನ್ನು  ಓದುವವರು ಆರ್. ಸಿ. ಹಿರೇಮಠರನ್ನು ನೆನೆಯಲೇಬೇಕು. ಕನ್ನಡ, ಸಂಸ್ಕೃತ, ಇಂಗ್ಲೀಷ ಹೀಗೆ ಎಲ್ಲ ಭಾಷೆಗಳ ಜೊತೆ ಆತ್ಮೀಯತೆ  ಇಟ್ಟುಕೊಂಡವರು. ಆರ್. ಸಿ. ಹಿರೇಮಠರ ವಚನಸಾಹಿತ್ಯ, ಅವರ ಷಟಷ್ಥಳ ಸಂಪುಟ ಹಾಗೂ ಅವರ ಇತರ ಸಾಹಿತ್ಯದ ಮೇಲೆಯೇ ಪಿ.ಎಚ್.ಡಿ. ಮಾಡಬಹುದು.

ವಚನ ಸಾಹಿತ್ಯ, ಹಳಗನ್ನಡ ಸಾಹಿತ್ಯ, ಆಧುನಿಕ ಕನ್ನಡ ಸಾಹಿತ್ಯದ ವಿದ್ಯಾರ್ಥಿ ಗಳು ಆರ್.ಸಿ. ಹಿರೇಮಠರ ಮಾರ್ಗದಲ್ಲಿ ನಡೆಯುತ್ತಾರೆ. ಅವರ ಪ್ರತಿಯೊಂದು ಕವನಗಳು ನಿಧಿಗಳಿದ್ದ ಹಾಗೆ. ವಿಶ್ವವಿದ್ಯಾಲಯದಲ್ಲಿ ಬಸವ ಪೀಠ ಸ್ಥಾಪನೆ ಮಾಡಿದವರು. ಅವರು ಬದುಕು, ಬರವಣಿಗೆ ಮೀರಿ ಓದಿ ಬೆಳೆದವರು. ಅವರ ಬರವಣಿಗೆಗೆ ಯಾವುದೇ ಟೀಕೆ, ಟಿಪ್ಪಣೆ ಬಂದರೆ ಅವುಗಳನ್ನು ತಾಳ್ಮೆಯಿಂದ ಸ್ವೀಕರಿಸುತ್ತಿದ್ದರು ಎಂದು ಡಾ. ಮುದೇನೂರ ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಎಂ. ಎಂ. ಲಕ್ಷ್ಮೆಟ್ಟಿ ಮಾತನಾಡಿ, ಯಾರು ಸಾಧಿಸಬೇಕು ಎಂಬ ಗುರಿ ಇಟ್ಟುಕೊಂಡು ಆ ಗುರಿಗೆ ತಕ್ಕ ಗುರುಗಳನ್ನು ಹುಡುಕಿಕೊಂಡು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೋ  ಅವರು ಸಮಾಜದಲ್ಲಿ ಮಹಾನ್ ವ್ಯಕ್ತಿಗಳಾಗಿ ಬೆಳೆಯುತ್ತಾರೆ, ಅದೇ ಸಾಲಿನಲ್ಲಿ ಆರ್. ಸಿ. ಹಿರೇಮಠರು ಒಬ್ಬರು. ಹುಟ್ಟಿನಿಂದ ಕಷ್ಟದಲ್ಲಿ ಇದ್ದರೂ ಕಂತಿ ಭಿಕ್ಷೆ ಬೇಡಿ, ವಿದ್ಯಾಭ್ಯಾಸ ಮಾಡಿ ಇಡೀ ಕನ್ನಡ ನಾಡಿಗೆ ಕೀರ್ತಿ  ತಂದ ವ್ಯಕ್ತಿ. ಸಮುದ್ರದ ನೀರನ್ನು ಬೊಗಸೆಯಲ್ಲಿ ಹಿಡಿದಿಡುವುದು ಸಾಧ್ಯವೆ ? ಹಾಗೇ ಆರ್. ಸಿ. ಹಿರೇಮಠರ ವ್ಯಕ್ತಿತ್ವವನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ ಎಂದರು.

ಡಾ. ಅರ್. ಸಿ. ಹಿರೇಮಠರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ವೇದಿಕೆಯಲ್ಲಿ ದತ್ತಿ ದಾನಿಗಳ ಪರವಾಗಿ ರಾಜು ಹಿರೇಮಠ ಇದ್ದರು. ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ) ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ  ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ ತುರಮರಿ ನಿರೂಪಿಸಿ, ವಂದಿಸಿದರು.    

ಸಂಘದ ಸಹಕಾರ್ಯದರ್ಶಿ  ಸದಾನಂದ ಶಿವಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಾನಂದ ಭಾವಿಕಟ್ಟಿ ಹಾಗೂ ಡಾ. ಸಂಗಮನಾಥ ಲೋಕಾಪುರ, ಬಿ. ಎಸ್. ಶಿರೋಳ, ರಾಮಚಂದ್ರ ಧೋಂಗಡೆ, ಸಿ.ಎಂ. ಚನ್ನಬಸಪ್ಪ ಹಾಗೂ ಆರ್. ಸಿ. ಹಿರೇಮಠರ ಪರಿವಾರದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.