ಡಾ. ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಲೋಕದರ್ಶನ ವರದಿ

ಕೊಪ್ಪಳ 04: ನಗರದ ಅಶೋಕ ವೃತ್ತದಲ್ಲಿ ಹೈದರಾಬಾದ್ನ ಪಶುವೈದ್ಯೆ ಡಾ. ಪ್ರಿಯಾಂಕಾ ರೆಡ್ಡಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಕ್ರೂರ ಕೊಲೆ ಮಾಡಿದವರನ್ನು ಉಗ್ರವಾಗಿ  ಶಿಕ್ಷೆ ವಿಧಿಸಬೇಕೆಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ-ಎಐಡಿಎಸ್ಓ, ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ-ಎಐಡಿವೈಓ ಕೊಪ್ಪಳ ಜಿಲ್ಲಾ ಸಮಿತಿ ಜಂಟಿಯಾಗಿ ಘಟನೆಯನ್ನು ಖಂಡಿಸಿ ಸಂಘಟನೆಯ ಪ್ರಮುಖರು ಮತ್ತು ವಿದ್ಯಾರ್ಥಿಗಳು ತೀವ್ರವಾಗಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಘೋಷಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು. 

ಪ್ರತಿಭಟನೆಯ ನೇತೃತ್ವವಹಿಸಿದ ಕೊಪ್ಪಳದ ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಯುವ ಪಶುವೈದ್ಯ ದಿನನಿತ್ಯದ ಕೆಲಸ ಮುಗಿಸಿ ಮನೆಗೆ ತೆರಳುವಾಗ ನಾಲ್ಕು ಜನ ದುಷ್ಕರ್ಮಿಗಳು ಸಹಾಯ ಮಾಡುವ ನೆಪವೊಡ್ಡಿ ದುಷ್ಕೃತ್ಯ ಎಸಗಿದ್ದಾರೆ. ಉಸಿರುಗಟ್ಟಿಸಿ ಸಾಯಿಸಿದ ಮೃತದೇಹವನ್ನು ಸುಟ್ಟಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಭಾರತ ಒಂದು ಮಹಾನ್ ಸಾಂಸ್ಕೃತಿಕ ವೈವಿಧ್ಯತೆಗಳನ್ನು ಹೊಂದಿರುವ ಸ್ತ್ರೀಯರನ್ನು ಗೌರವದಿಂದ ಕಾಣುವಂತಹ ನಾಡಾಗಿತ್ತು. ಆದರೆ ಇಂಥ ಘಟನೆಗಳು ಮರುಕಳಿಸುತ್ತಿರುವುದು ನೋವಿನ ಸಂಗತಿ. ಇದಕ್ಕೆಲ್ಲಾ ಇವತ್ತಿನ ರಾಜಕೀಯ ವ್ಯವಸ್ಥೆ ಹದಗೆಟ್ಟಿರುವುದು. ಸ್ವಹಿತಾಸಕ್ತಿಗಳಿಗಾಗಿ ಪವಿತ್ರ ರಾಜಕೀಯ ವ್ಯವಸ್ಥೆಗೆ ದ್ರೋಹ ಬಗೆದು ನೊಂದವರ ನೋವಿನ ಸಮಸ್ಯೆಗಳಿಗೆ ಸ್ಪಂದಿಸದೆ ತಮ್ಮ ಅಧಿಕಾರದ ಲಾಲಸಗೆ ಕೆಳಮಟ್ಟಕ್ಕೆ ಇಳಿದಿದ್ದಾರೆ. ಇಂಥ ಘಟನೆಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆತಗ್ಗಿಸುವಂತಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿಗಳು ಮಹಿಳೆಯರು ಓದಿನ ಜೊತೆಗೆ ಹೋರಾಡಲು ಮುಂದಾಗಬೇಕೆಂದು ಕರೆ ನೀಡಿದರು.

ಎಐಡಿವೈಒ ಸಂಘಟನೆ ಜಿಲ್ಲಾ ಕಾರ್ಯದಶರ್ಿ ಶರಣು ಗಡ್ಡಿ ಮಾತನಾಡಿ, ಇದೊಂದು ಅಮಾನವೀಯ ಸಂಗತಿಯಾಗಿದ್ದು ಪ್ರತಿಯೊಬ್ಬರ ಹೃದಯ ಕಲಕುವಂತ ಕ್ರೂರ ಘಟನೆ ಕೇವಲ ಹೈದರಾಬಾದ್ನಲ್ಲಿ ಲಷ್ಟೇ ಅಲ್ಲದೆ ದೇಶಾದ್ಯಂತ ಘಟನೆಯನ್ನು ಖಂಡಿಸಿ ಪ್ರತಿಭಟನೆ ಮೂಲಕ ಕಠೋರವಾಗಿ ಖಂಡಿಸಲಾಗುತ್ತದೆ. ದೇಶದಲ್ಲಿ ಮಹಿಳೆಯರಿಗೆ ಭದ್ರತೆ ಒದಗಿಸುವಲ್ಲಿ ಆಳ್ವಿಕೆ ಸರ್ಕಾರಗಳು ವಿಫಲವಾಗಿವೆ. ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಕಿರುಕುಳ, ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದರೂ ಶಿಕ್ಷೆ ಪ್ರಮಾಣ ಮಾತ್ರ ಕಡಿಮೆ ಇದೆ. ಮಹಿಳೆಯರ ಅಭದ್ರತೆಗೆ ಕಾರಣವಾದ ಅಶ್ಲೀಲ ಸಿನಿಮಾ, ಜಾಹೀರಾತುಗಳನ್ನು ನಿಷೇಧಿಸದೆ ವ್ಯಾಪಕ ಪ್ರಚಾರಕ್ಕೆ ಅನುಮತಿ ನೀಡುತ್ತಿರುವ ಪರಿಣಾಮ ಮಹಿಳೆಯರ ಬದುಕು ಅತಂತ್ರ ಸ್ಥಿತಿಗೆ ತಲುಪಿದೆ. ಹಾಗಾಗಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ವಿಧಿಸಬೇಕು, ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಜೂಡೋ, ಕರಾಟೆ ಕಲಿಸಿ ಸ್ತ್ರೀಯರ ರಕ್ಷಣೆಗೆ ಶಕ್ತಿ ತುಂಬಲು ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ಎಐಡಿಎಸ್ಒ ಸಂಘಟನೆಯ ಜಿಲ್ಲಾ ಸಂಚಾಲಕ ರಮೇಶ್ ವಂಕಲಕುಂಟಿ, ದೇವರಾಜ್, ಎಐಡಿವೈಓ ಸಂಘಟನೆಯ ಜಿಲ್ಲಾ ಸಂಘಟನಾಕಾರರಾದ ಶರಣಬಸವ ಪಾಟೀಲ್, ಕಾರ್ಯಕರ್ತರಾದ ರಾಯಣ್ಣ ಗಡ್ಡಿ ಹುಲ್ಲೇಶ್, ಪ್ರಭು, ರಾಜಾಬಕ್ಷಿ, ಮಂಜುನಾಥ್, ಭೀಮೇಶ್, ಪ್ರಶಾಂತ್, ಅಫ್ರೀನ್, ಶಾಹಿದಾ, ಕೀತರ್ಿ, ಉಷಾ ಸೇರಿದಂತೆ ಕಾಲೇಜಿನ  ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.