ವಚನ ಸಾಹಿತ್ಯ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಡಾ.ಫ.ಗು.ಹಳಕಟ್ಟಿ: ಕೆ.ಇ.ಚಿದಾನಂದಪ್ಪ

ವಚನ ಸಾಹಿತ್ಯ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಡಾ.ಫ.ಗು.ಹಳಕಟ್ಟಿ: ಕೆ.ಇ.ಚಿದಾನಂದಪ್ಪ  Dr. Ph. Gu. Halakatti who dedicated his life to the preservation of Vachana literature: KE Chidanand

ಬಳ್ಳಾರಿ  02: ಡಾ.ಫಕೀರ​‍್ಪ ಗುರುಬಸಪ್ಪ ಹಳಕಟ್ಟಿಯವರು ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ. ರಾಜ್‌ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣದಲ್ಲಿ ಬುಧವಾರ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ 'ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಶರಣರ ಜೀವನ ಮೌಲ್ಯಗಳನ್ನು ಕಾಲಾತೀತವಾದ ಕಾಲಗರ್ಭದಲ್ಲಿ, ಹುದುಗಿ ಹೋಗಿದ್ದ ವಚನ ಸಾಹಿತ್ಯವನ್ನು ಶೋಧಿಸಿ, ಅನ್ವೇಷಿಸಿ ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿ ಸಂಶೋಧನಾ ಕ್ಷೇತ್ರಕ್ಕೆ ಡಾ.ಫ.ಗು.ಹಳಕಟ್ಟಿ ಅವರು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು. 

ಒಂದು ವೇಳೆ ಶರಣ ಸಾಹಿತ್ಯದ ಕಡೆಗೆ ಲಕ್ಷ್ಯ ಹರಿಸದೇ ಇದ್ದರೆ ಇಂದು ನಮಗೆ ಹಲವಾರು ಶರಣರ, ವಚನಕಾರರ ವಚನಗಳು ದೊರಕುತ್ತಿರಲಿಲ್ಲ. ಕತ್ತಲ ಕಾಲ ಗರ್ಭದಲ್ಲಿದ್ದ ವಚನಗಳನ್ನು ಒಬ್ಬ ಸಾಮಾನ್ಯ ವಕೀಲರಾಗಿದ್ದುಕೊಂಡು ಶರಣರ ತತ್ವಾದರ್ಶಗಳು ಅವರೊಳಗಿದ್ದ ವೈಚಾರಿಕ ಮಾನವ ಪ್ರಜ್ಞೆಯನ್ನು ಎತ್ತಿ ತೋರಿಸಿದ ಕೀರ್ತಿ ಡಾ.ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದರು. 

ರಾವ್ ಬಹುದ್ದೂರ್ ವೈ.ಮಹಾಬಲೇಶ್ವರ​‍್ಪ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಎ.ತಿಮ್ಮನಗೌಡ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಡಾ.ಫ.ಗು.ಹಳಕಟ್ಟಿಯವರದು ವೈವಿಧ್ಯಮಯ ವ್ಯಕ್ತಿತ್ವ. ಶಿಕ್ಷಣ, ಸಾಹಿತ್ಯ ಮತ್ತು ಸಹಕಾರ ಕ್ಷೇತ್ರಗಳಿಂದ ಬಾಳು ಬಂಗಾರ ಎಂದು ತಿಳಿದವರು. ಕನ್ನಡ ಮತ್ತು ಕರ್ನಾಟಕ ಅವರ ಜೀವನದ ಉಸಿರಾಗಿತ್ತು ಎಂದು ಹೇಳಿದರು. 

1880  ಜುಲೈ 2 ರಂದು ಜನಿಸಿದ ಡಾ.ಫ.ಗು.ಹಳಕಟ್ಟಿ ಅವರು ಧಾರವಾಡದ ಗುರುಬಸಪ್ಪ ಹಳಕಟ್ಟಿಯವರ ಪುತ್ರನಾಗಿ ತಂದೆಯ ಸಮಾಜ ಸೇವಾಸಕ್ತ ಶರಣ ಗುಣಗಳನ್ನು ಬಳುವಳಿಯಾಗಿ ಪಡೆದುಕೊಂಡು ಮದ್ರಾಸ್‌ನಲ್ಲಿ ಉನ್ನತ ಶಿಕ್ಷಣ ಪಡೆದು ವಿಜಯಪುರದಲ್ಲಿ ವಕೀಲಿ ವೃತ್ತಿ ಆರಂಭಿಸಿದರು ಎಂದು ಹೇಳಿದರು. 

ಡಾ.ಫ.ಗು.ಹಳಕಟ್ಟಿಯವರು ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೋಲೆಗಳನ್ನು ಹುಡುಕಿ ತಂದು, ವಚನಗಳನ್ನು  ಮುದ್ರಿಸಿದವರು. ಹಳಕಟ್ಟಿಯವರು ಸ್ವತಃ ಮೊಳೆಗಳನ್ನು ಜೋಡಿಸಿ, ಅಚ್ಚು ಹಾಕಿ, ಪೆಡಲ್ ತುಳಿದು, ಮುದ್ರಿಸಿ ಪ್ರಕಟಿಸಿದ ಸಾಹಿತ್ಯದಿಂದ 250 ವಚನಕಾರರ ವಚನಗಳನ್ನು, ಸಾಹಿತ್ಯವನ್ನು ಹೊರತಂದರು. ಆ ಮುಂಚೆ ಕೇವಲ 50 ವಚನಕಾರರ ವಚನಗಳು ಬೆಳಕು ಕಂಡಿದ್ದವು. ಇದು ವಚನ ಸಾಹಿತ್ಯಕ್ಕೆ ಅವರು ನೀಡಿದ ಅಮೋಘ ಕೊಡುಗೆ. ಹಾಗಾಗಿ ಅವರನ್ನು ‘ವಚನ ಪಿತಾಮಹ' ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು. 

ಡಾ.ಫ.ಗು.ಹಳಕಟ್ಟಿ ಅವರ ಸಾಹಿತ್ಯ ಸೇವೆ ಮೆಚ್ಚಿ 1926ರಲ್ಲಿ ಬಳ್ಳಾರಿಯಲ್ಲಿ ನಡೆದ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು ಎಂದು ಈ ಸಂದರ್ಭದಲ್ಲಿ ಮೆಲುಕು ಹಾಕಿದರು. 

ಕಾರ್ಯಕ್ರಮದಲ್ಲಿ ಬಳ್ಳಾರಿಯ ದೊಡ್ಡಯ್ಯ ವಿ.ಕಲ್ಲೂರು ಅವರ ತಂಡದವರು ವಚನ ಸಂಗೀತ ಪ್ರಸ್ತುತಪಡಿಸಿದರು. 

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಉಪತಹಶೀಲ್ದಾರ ಮಹಮ್ಮದ್ ಸಾಧಿಕ್ ಭಾಷಾ, ಜಿಲ್ಲಾ ದೈಹಿಕ ಶಿಕ್ಷಕ ಕೊಟ್ರೇಶ್, ನಿವೃತ್ತ ಪಿಎಸ್‌ಐ ಹುಸೇನ್ ಸೇರಿದಂತೆ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.