ಡಾ. ಮಹಾಂತೇಶ ಮಲ್ಲನಗೌಡರು ಮುಗ್ಧ ಮನಸ್ಸಿನ ಪ್ರತಿಭಾವಂತ ಕವಿಗಳು

ಲೋಕದರ್ಶನ ವರದಿ

ಕೊಪ್ಪಳ 03: ಕೊಪ್ಪಳದ ಹಿರಿಯ ತಲೆಮಾರಿನ ಲೇಖಕ, ಕವಿ, ಕಥೆಗಾರ, ಸಂಪಾದಕ, ಗೀತ ರಚನೆಕಾರ, ಸಂಘಟಕ, ಭಾಷಣಕಾರರಾದ ಡಾ.ಮಹಾಂತೇಶ ಮಲ್ಲನಗೌಡರು ರಾಜ್ಯಮಟ್ಟದ ಜ.ಚ.ನಿ. ಪ್ರಶಸ್ತಿ ಸ್ವೀಕರಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ. ಇವರು ಯಾರನ್ನೂ ದ್ವೇಷಿಸದೇ ಎಲ್ಲರನ್ನೂ ಪ್ರೀತಿಸುವ ಮತ್ತು ಶಿಷ್ಯರ ಏಳಿಗೆಯಲ್ಲಿಯೇ ಸಂತೋಷ ಕಂಡು ಅವರ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವ ಅಪರೂಪ ಸ್ವಭಾವದ ಸಾಹಿತಿಗಳು. 'ಚಿಗುರು', 'ಯುಟೋಪಿಯಾ', 'ಇಂಚರ', 'ಪರಿವರ್ತನೆ', 'ಸ್ಪಂದನ', ,'ಪರಾಗ', 'ಹಾಡಿನ ಕೋಗಿಲೆ', 'ಕವನಗಳಲ್ಲಿ ಕುವೆಂಪು', 'ಬಾನಂಗಳದ ಚುಕ್ಕಿಗಳು', 'ಕೊಪಣ ಕಾವ್ಯ, 'ಕೊಪಣ ಕಿಂಕಲ' ಎನ್ನುವ ಗ್ರಂಥಗಳನ್ನು ಹೊರತಂದರು.  ಹಳ್ಳಿಯ ಪರಿಸರದಲ್ಲಿ ಬೆಳೆದು ಇಂಗ್ಲೀಷ ಪ್ರಾಧ್ಯಾಪಕರಾಗಿರುವ ಇವರು ಸಹ ಕಾವ್ಯಾಭಿವ್ಯಕ್ತಿಯನ್ನು ಕಂಡುಕೊಂಡದ್ದು ಕನ್ನಡ ಭಾಷೆಯಲ್ಲಿ ಎನ್ನುವುದು ಅಷ್ಟೇ ಸ್ವಾರಸ್ಯಕರವಾದ ಸಂಗತಿಯಾಗಿದೆ. ಇವರು ಇಂಗ್ಲೀಷನಲ್ಲಿ ಪದ್ಯ ಬರೆಯುವಷ್ಟು ಹಿಡಿತವನ್ನು ಸಾಧಿಸಿಕೊಂಡು 2002 ರಲ್ಲಿ ಇಂಗ್ಲೀಷ ಕವನಗಳ ಸಂಕಲನ 'ಲೇಟದೇರ್ ಬಿ ಲೈಟ್ ಕವನ ಸಂಕಲವನ್ನು ಹೊರತಂದಿರುವುದ ಸಹ ನಿಜವಾಗಿಯೂ ಸೋಜಿಗದ ಸಂಗತಿಯಾಗಿದೆ. 'ಚುಂಬನ' ಭಾವಗೀತೆಗಳ ಧ್ವನಿಸುರುಳಿ ಹೊರತರುವುದರ ಮೂಲಕ ಕೊಪ್ಪಳದ 'ಪ್ರೇಮಕವಿ' ಎಂದೇ ಖ್ಯಾತಿ ಪಡೆದರು. 'ಓ ಪ್ರೇಮದೇವತೆ' ಚಲನಚಿತ್ರಕ್ಕೆ ಸಾಹಿತ್ಯ ರಚನೆ ಮಾಡಿರುವುದರ ಮೂಲಕ 'ಚಲನಚಿತ್ರ ಸಾಹಿತಿ'ಯಾದರು. ತಮ್ಮ ಪಾಡಿಗೆ ತಾವು ಕಾವ್ಯ ಬರೆಯುವುದರಲ್ಲಿಯೇ ಸಂತೋಷ ಪಡುವ ಇವರು ಏಕಾಂತವನ್ನು ತುಂಬ ಇಷ್ಟಪಡುತ್ತಾರೆ. ಡಾ.ಮಹಾಂತೇಶ ಮಲ್ಲನಗೌಡರು ಮುಗ್ಧ ಮನಸ್ಸಿನ ಪ್ರತಿಭಾವಂತ ಕವಿಗಳು ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.

ಅವರು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ರಾಜೂರು ಗ್ರಾಮದ ಶರಣಬಸವೇಶ್ವರ ಮಠದಲ್ಲಿ ಡಾ. ಮಹಾಂತೇಶ ಮಲ್ಲನಗೌಡರಿಗೆ ಡಾ.ಜ.ಚ.ನಿ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿ ಮಾತನಾಡಿದರು.

ಡಾ.ಮಹಾಂತೇಶ ಮಲ್ಲನಗೌಡರು ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ, ನಾನು ಜೀವನದಲ್ಲಿ ಹಲವಾರು ಏರು-ಪೇರುಗಳನ್ನು ಕಾಣುತ್ತಾ ಸಾಗಿದ್ದಾಗ ನನಗೆ ನೆಲೆಕೊಟ್ಟ ಊರು ಕೊಪ್ಪಳ. ನಾನು ಕೊಪ್ಪಳವನ್ನು, ಕೊಪ್ಪಳದ ಸ್ನೇಹಿತರನ್ನು ಆಧ್ಯಾತ್ಮಿಕವಾಗಿ ನೋಡುತ್ತೇನೆಯೇ ಹೊರತು ಲೌಕಿಕವಾಗಿ ಅಲ್ಲ. ನಾನು ಕೊಪ್ಪಳಕ್ಕೆ ಕೊಟ್ಟಿದ್ದಕ್ಕಿಂತ, ಕೊಪ್ಪಳ ನನಗೆ ನೀಡಿದ್ದೇ ಹೆಚ್ಚು. ಈ ನೆಲದ ಋಣವನ್ನು ತೀರಿಸಲಸಾಧ್ಯ. ನಾನು ಇಂತಹ ಪವಿತ್ರವಾದ ಸ್ಥಳದಲ್ಲಿ ಈ ನಾಡಿನ ಶ್ರೇಷ್ಠ ಸಾಹಿತಿ ಡಾ.ಜ.ಚ.ನಿ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಾನು ಈ ಮಠದ ಶ್ರೀಗಳಿಗೆ ಚಿರಋಣಿಯಾಗಿದ್ದೇನೆ.  ಭಾರತ ಯೋಗ ಭೂಮಿಯಾಗಿದೆ.  ಸಾಧು-ಸತ್ಪುರಷರು ಜನಿಸಿದ ನಾಡಿದು. ಮಹಾಪುರುಷರು ಹೇಳಿದ ಮಮತೆ, ಮಮಕಾರ, ವಾತ್ಸಲ್ಯ, ಪರೋಪಕಾರ ಗುಣಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಆದರೆ ಇತ್ತೀಚಿನ ಅತಿಯಾದ ಫೇಸ್ ಬುಕ್ ಮತ್ತು ವಾಟ್ಸಪ್ಗಳ ಆಕರ್ಷಣೆಗಳಿಂದ ಯುವಜನತೆ ತಾವು ಹಾಳಾಗುವುದಲ್ಲದೆ ಇಡೀ ವಾತಾವರಣ ಕಲುಷಿತಗೊಳ್ಳುತ್ತಿರುವುದು ನೋವಿನ ಸಂಗತಿ. ನಾವು ಮಕ್ಕಳ ಮನಸ್ಸನ್ನು ಹೊಂದಬೇಕಾಗಿದೆ. ಮಕ್ಕಳ ರಾಜ್ಯವೇ ದೇವರ ರಾಜ್ಯ. ದೇವರನ್ನು ಮಕ್ಕಳಲ್ಲಿ ಕಾಣಬೇಕು. ಏಕೆಂದರೆ ಮಕ್ಕಳ ಮನಸ್ಸು ಪರಿಶುದ್ಧವಾದುದು. 'ಜಗವೆಲ್ಲ ನಗುತಿರಲಿ, ಜಗದಳಿವು ನನಗಿರಲಿ' ಎಂದು ಈಶ್ವರ ಸಣಕಲ್ ಅವರು ಹೇಳಿದ ಹಾಗೆಯೇ ನಾವು ಕೂಡ ಇನ್ನೊಬ್ಬರ ನೋವಿನಲ್ಲಿ ಪಾಲ್ಗೊಳ್ಳಬೇಕು ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ವಿಠ್ಠಲ್ರಾವ್ ಗಾಯಕವಾಡ ಅವರು ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡುತ್ತಾ, ಡಾ.ಮಹಾಂತೇಶ ಮಲ್ಲನಗೌಡರು ಬಹಳ ಸರಳರು, ಸಾತ್ವಿಕರು. ಎಲ್ಲರೊಂದಿಗೆ ಬೆರೆಯುವ ಅಪರೂಪದ ಸ್ನೇಹಜೀವಿಗಳು. ಹಿರಿಯರು-ಕಿರಿಯರು ಭೇದ-ಭಾವ ಇಲ್ಲದೆ ಎಲ್ಲರನ್ನೂ ಪ್ರೋತ್ಸಾಹಿಸುತ್ತಾ, ಎಲ್ಲರ ಏಳಿಗೆಯನ್ನು ಬಯಸುತ್ತಿರುವ ಪ್ರತಿಭಾ ಪೋಷಕರು. ಅತ್ಯಂತ ಪಾಂಡಿತ್ಯಪೂರ್ಣ ಜ್ಞಾನವನ್ನು ಹೊಂದಿದ್ದರೂ ಸಹಿತ ಅಹಂಕಾರದಿಂದ ಗಾವುದ ದೂರವಿದ್ದಾರೆ. ಇಂಗ್ಲೀಷ ಪ್ರಾಧ್ಯಾಪಕರಾಗಿದ್ದರೂ ಕನ್ನಡದಲ್ಲಿ ಕಥೆ, ಕವನ, ವೈಚಾರಿಕ ಲೇಖನಗಳನ್ನು ಬರೆದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ಅಡ್ನೂರು- ರಾಜೂರಿನ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ನವಲಗುಂದ ಗವಿಮಠದ ಬಸವಲಿಂಗ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ಡಾ.ಫಕೀರಪ್ಪ ವಜ್ರಬಂಡಿ, ವೀರಣ್ಣ ನಿಂಗೋಜಿ, ಶರಣಬಸಪ್ಪ ದಾನಕೈ, ಶರಣಪ್ಪ ಸ.ಪಾಟೀಲ, ರುದ್ರಪ್ಪ ಭಂಡಾರಿ, ಶರಣಪ್ಪ ಸೊಂಪೂರು, ಮಲ್ಲಪ್ಪ ಕಂದಗಲ್, ಜಗದೀಶ ಬಡಿಗೇರ, ದೇವಪ್ಪ ಅರಕೇರಿ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಫಕೀರಸಾಬ ನದಾಪ್ ನಿರೂಪಿಸಿದರು. ಸಂಗಪ್ಪ ಅಂಗಡಿ ಸ್ವಾಗತಿಸಿದರು. ಶರಣಪ್ಪ ಮುಂಡರಗಿ ವಂದಿಸಿದರು.