ಬೆಂಗಳೂರು, ಅ 11: ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಒಡೆತನದ ತುಮಕೂರಿನಲ್ಲಿರುವ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳಿಂದ ಶುಕ್ರವಾರ ಕೂಡ ದಾಖಲೆಗಳ ಶೋಧ ಕಾರ್ಯ ಮುಂದುವರೆದಿದೆ. ಈಗಾಗಲೇ 7 ಮಂದಿ ಐಟಿ ಅಧಿಕಾರಿಗಳ ತಂಡ ಸ್ಥಳಕ್ಕಾಗಮಿಸಿದ್ದು, ಪ್ರಾಂಶುಪಾಲ ಡಾ.ರವಿ ಪ್ರಕಾಶ್ ಅವರನ್ನು ಕೂರಿಸಿಕೊಂಡು ಖಾಸಗಿ ಕೋಣೆಯಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ನಿನ್ನೆ ವಶಪಡಿಸಿಕೊಂಡಿದ್ದ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಸೀಟ್ ಕಡತಗಳ ದಾಖಲೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಕೋಲಾರದಲ್ಲಿರುವ ಕೇಂದ್ರ ಮಾಜಿ ಸಚಿವ ಆರ್.ಎಲ್. ಜಾಲಪ್ಪ ಒಡೆತನದ ದೇವರಾಜು ಅರಸು ವೈದ್ಯಕೀಯ ಕಾಲೇಜಿನಲ್ಲಿ ಅಧಿಕಾರಿಗಳಿಂದ ಇಂದು ಕೂಡ ದಾಖಲೆಗಳ ಪರಿಶೀಲನೆ ಮುಂದುವರೆದಿದೆ. ಐಟಿ ಅಧಿಕಾರಿಗಳ ಮನವಿ ಮೇರೆಗೆ ಕಾಲೇಜು ಆವರಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಕಾಲೇಜಿನ ತಾಂತ್ರಿಕ ವಿಭಾಗದಲ್ಲಿ ಅಧಿಕಾರಿಗಳಿಂದ ಶೋಧ ಕಾರ್ಯ ಮುಂದುವರೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿರುವ ಆರ್. ಜಾಲಪ್ಪ ಅವರ ಮಗ ರಾಜೇಂದ್ರ ನಿವಾಸದಲ್ಲಿಯೂ ಐಟಿ ಅಧಿಕಾರಿಗಳು, ಬೆಳಗ್ಗೆಯಿಂದ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ರಾತ್ರಿ ಐಟಿ ಇಲಾಖೆಯ ಅಧಿಕಾರಿಗಳು ಅಲ್ಲಿಯೇ ಮಲಗಿದ್ದು, ಇಂದು ಬೆಳಗ್ಗೆ ಎದ್ದು, ದೊಡ್ಡಬಳ್ಳಾಪುರದ ಇಂಜಿನಿಯರಿಂಗ್ ಕಾಲೇಜು, ಕೋಲಾರದ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ರಾಜೇಂದ್ರ, ಪತ್ನಿ ಸುಜಾತಾ, ರಾಕೇಶ್ ಮನೆಯಲ್ಲೇ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.