ಸಂಶಯವು ವಿದ್ಯಾರ್ಥಿಯ ಶಕ್ತಿಯನ್ನು ಕುಗ್ಗಿಸುತ್ತದೆ: ವಿರಕ್ತಮಠ

Doubt weakens student energy said Viraktamatha

ಧಾರವಾಡ 18: ವಿದ್ಯಾರ್ಥಿಗಳು ಅಧ್ಯಯನದ ಸಂದರ್ಭದಲ್ಲಿ ವಿನಾಕಾರಣ ಭಯ ಹಾಗೂ ಸಂಶಯ ಪಡಬಾರದು. ಸಂಶಯವು ವಿಧ್ಯಾರ್ಥಿಯ ಶಕ್ತಿಯನ್ನು ಕುಗ್ಗಿಸುತ್ತದೆ. ಶ್ರದ್ಧೆಯ ವೈರಿಯೇ ಸಂಶಯ ಎಂದು ಆರ್‌.ಎಲ್‌.ಎಸ್‌. ಪ್ರೌಢ ಶಾಲೆಯ ಸ್ಥಾನಿಕ ಮಂಡಳಿ ಕಾರ್ಯಾಧ್ಯಕ್ಷ ಎ. ಸಿ. ವಿರಕ್ತಮಠ ಹೇಳಿದರು. 

ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ನಗರದ ಆರ್‌. ಎಲ್‌. ಎಸ್‌. ಪ್ರೌಢ ಶಾಲೆಯಲ್ಲಿ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ಭಯಮುಕ್ತ ಪರೀಕ್ಷೆ ಎದುರಿಸುವುದು ಹೇಗೆ” ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. 

ಮುಂದುವರೆದು ಮಾತನಾಡಿದ ಅವರು, ವಿದ್ಯಾರ್ಥಿಗಳು ಅಧ್ಯಯನ ನಿರತರಾದಾಗ ಅನ್ಯ ವಿಷಯಗಳು ಮನ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ಶ್ರದ್ಧೆ, ಬದ್ದತೆ, ಆತ್ಮ ವಿಶ್ವಾಸದಿಂದ ಖಂಡಿತಾ ಯಶಸ್ಸು ನಿಮ್ಮದಾಗುತ್ತದೆ. ಉತ್ಸಾಹ ಬರಿತರಾಗಿ ಪ್ರೀತಿಯಿಂದ ಓದಬೇಕು. ಓದುವುದು ಎಷ್ಟು ಮುಖ್ಯವೋ ನಿಮ್ಮ ಬರವಣಿಗೆಯು ಅಷ್ಟೇ ಮುಖ್ಯ ಎಂದ ಅವರು, ಕ.ವಿ.ವ ಸಂಘದ ಈ ಪ್ರಯತ್ನ ಮೆಚ್ಚಲೇಬೇಕು. ಮನವನ್ನು ಆಕರ್ಷಿಸುವ ಸಂಗತಿಗಳಿಂದ ವಿದ್ಯಾರ್ಥಿಗಳು ದೂರವಿರಬೇಕೆಂದು ಹೇಳಿದರು. 

ಡಿಮ್ಹಾನ್ಸ ಮನೋಆರೋಗ್ಯ ಸಮಾಜ ಕಾರ್ಯಕರ್ತರಾದ ಪ್ರಶಾಂತ ಪಾಟೀಲ ಉಪನ್ಯಾಸ ನೀಡಿ.  ವಿದ್ಯಾರ್ಥಿಗಳಿಗೆ ಸಮಯ ಪರಿಪಾಲನೆ ಮುಖ್ಯ, ಸಮಯ ಹಣಕ್ಕಿಂತಲೂ ಶ್ರೇಷ್ಠ, ಗೃಹ ವೇಳಾ ಪಟ್ಟಿಯೊಂದಿಗೆ  ಅಧ್ಯಯನ ಮಾಡಬೇಕು. ನಿರಂತರವಾಗಿ ಓದಬರದು ಅಲ್ಪ ವಿಶ್ರಾಂತಿಯೂ ಮುಖ್ಯ. ಓದುವಾಗ ಆರೋಗ್ಯದ ಕಡೆ ಗಮನ ಹರಿಸಬೇಕು. ಹಾರ್ಡ್‌ವರ್ಕ್‌ ಬದಲಾಗಿ ಸ್ಮಾರ್ಟ್‌ ವರ್ಕ್‌ಗೆ ಆದ್ಯತೆ ಕೊಡಬೇಕು. ನಿಷ್ಪ್ರಯೋಜಕವಾದ ಹಾಳು ಹರಟೆ ಸಲ್ಲದು. ಅರ್ಥ ಮಾಡಿಕೊಂಡು ಪುನಃ ಪುನಃ ಓದುವದರಿಂದ, ಬರೆಯುವದರಿಂದ ಸ್ಮರಣ ಶಕ್ತಿ ಹೆಚ್ಚುವುದು ಎಂದರು. 

ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸಿ. ವ್ಹಿ. ಕಣಬರಗಿ ಮಾತನಾಡಿ, ಜ್ಞಾನಕ್ಕಿಂತ ಮಿಗಿಲಾದುದು ಯಾವುದು ಇಲ್ಲ. ಜ್ಞಾನವೇ ನಿಮ್ಮ ಸಂಪತ್ತು. ಜ್ಞಾನ ಸಂಪಾದನೆಗೆ ಪ್ರಯತ್ನ, ಪರಿಶ್ರಮ ಬಹಳ ಮುಖ್ಯ. ಅಭ್ಯಾಸ ಒಂದು ತಪಸಿದ್ದಂತೆ ಎಂದು ಹೇಳಿದರು. 

ಆರ್‌.ಎಲ್‌.ಎಸ್ ಪ್ರೌಢ ಶಾಲೆಯ ಉಪ ಪ್ರಾಚಾರ್ಯರಾದ ಆರ್‌.ಬಿ. ಬಾನಪ್ಪನವರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಹಿರಿಯ ಶಿಕ್ಷಕ ಎಂ.ಆರ್‌. ಹಿರೇಮಠ ಸ್ವಾಗತಿಸಿ, ನಿರೂಪಿಸಿದರು. ಕ.ವಿ.ವ ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಯ್‌. ಸಿ. ನೇಕಾರ ವಂದಿಸಿದರು. 

ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಕಲ್ಯಾಣಶೆಟ್ಟರ, ಪ್ರಮೀಳಾ ಜಕ್ಕಣ್ಣವರ, ಎಂ.ಎಸ್‌. ನರೇಗಲ್,ಎಂ.ಜಿ. ದೇವಜಿ, ವಾಯ್‌.ಎಂ. ಬೊಮ್ಮನಹಳ್ಳಿ, ಬಿ.ವ್ಹಿ. ಸಾಲಿ, ಎ.ಝೆಡ್‌. ಸರಖಾಜಿ ಹಾಗೂ ಯುವರಾಜ ಸೇರಿದಂತೆ ಸಿಬ್ಬಂದಿಗಳು ಇದ್ದರು. ಕೊನೆಯಲ್ಲಿ ಪರೀಕ್ಷೆ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಜರುಗಿತು.