ಲೋಕದರ್ಶನ ವರದಿ
ಕೊಪ್ಪಳ ೨೩: ಕೊಪ್ಪಳ ತಾಲೂಕಿನ ಗುಳದಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 360 ಮಕ್ಕಳಿಗೆ ಗ್ರಾಮದ ಒಬ್ಬ ಸಾಮಾನ್ಯ ಯುವರೈತ ಟೀ ಶರ್ಟ್ ವಿತರಣೆ ಮಾಡಿ ಶಿಕ್ಷಣಪ್ರೇಮವನ್ನು ಮೆರೆದಿದ್ದಾರೆ.
ಗುಳದಳ್ಳಿ ಗ್ರಾಮ ಪಂಚಾಯ್ತಿಯ ಮಾಜಿ ಉಪಾಧ್ಯಕರೂ ಹಾಗೂ ಹಾಲಿ ಸದಸ್ಯರು ಆಗಿರುವ ಹನುಮಂತಪ್ಪ ಹುಲಿಗಿ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಶಾಲೆಯ ಎಲ್ಲ ಮಕ್ಕಳಿಗೆ ಟೀ ಶರ್ಟ್ ವಿತರಣೆ ಮಾಡಿ ಸರ್ಕಾರಿ ಶಾಲೆಯ ಬಗೆಗಿನ ತಮ್ಮ ಕಾಳಜಿಯನ್ನು ತೋರಿದ್ದಾರೆ.
ಬುಧವಾರ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಟೀ ಶರ್ಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಭೀಮಪ್ಪ ಹೂಗಾರ, ಶಿಕ್ಷಣಪ್ರೇಮಿಗಳು ನೀಡುವ ಸಹಕಾರ ಮತ್ತು ಪ್ರೋತ್ಸಾಹದಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತಷ್ಟು ಸುಲಭವಾಗುತ್ತದೆ. ಮಕ್ಕಳ ಸರ್ವಾಗೀಣ ಅಭಿವೃದ್ಧಿಗೆ ಇಂತಹ ಶಿಕ್ಷಣಪ್ರೇಮಿಗಳು ಉದಾರದಿಂದ ಸಹಾಯ, ಸಹಕಾರ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ ಮುದ್ಲಾಪೂರ ಮಾತನಾಡಿ, ಈ ಶಾಲೆಯಲ್ಲಿ ಬಹುತೇಕ ಬಡಮಕ್ಕಳೇ ಅಭ್ಯಾಸ ಮಾಡುತ್ತಿದ್ದು, ಇಂತಹ ದಾನಿಗಳ ಹಾಗೂ ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಮಕ್ಕಳಲ್ಲಿ ಮತ್ತು ಶಿಕ್ಷಕರಲ್ಲಿ ಮತ್ತಷ್ಟು ಉತ್ಸಾಹ ಇಮ್ಮಡಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಯುವಕರಾದ ಮೈಲಾರಪ್ಪ ಕಲ್ಗುಡಿ, ಸೋಮಲಿಂಗಪ್ಪ ಹುಡೇದ, ರವಿ ಯಡ್ಡೋಣಿ, ಉಮರ್ಸಾಬ ಮಾಳೆಕೊಪ್ಪ, ಪ್ರಭಾಕರ ಬಡಿಗೇರ, ಷಣ್ಮುಖ ಕಬ್ಬಿಣದ, ಸಂಜೀವಪ್ಪ ಹಾರ್ಮೋನಿಯಂ ಮಾಸ್ತರ್ ಮತ್ತು ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಶಾಲಾ ಶಿಕ್ಷಕ ಸಿಬ್ಬಂದಿಯವರು ಉಪಸ್ಥಿತರಿದ್ದರು.