ಸಂಸ್ಕೃತಿಹೀನ, ಉದ್ಧಟತನದ ಟೀಕೆಗೆ ಬಗ್ಗುವುದಿಲ್ಲ; ನಾವು ಪ್ರಶ್ನೆ ಕೇಳುತ್ತೇವೆ, ನೀವು ಉತ್ತರಿಸಬೇಕು- ನಡ್ಡಾ ವಿರುದ್ಧ ಸಿದ್ದರಾಮಯ್ಯ ಟೀಕಾಪ್ರಹಾರ

ಬೆಂಗಳೂರು, ಏ.3, ಕಾಂಗ್ರೆಸ್  ಅಧ್ಯಕ್ಷೆ ಸೋನಿಯಾ ಗಾಂಧಿಯವರ ಕುರಿತಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ  ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.ಕಾಂಗ್ರೆಸ್  ಅಧ್ಯಕ್ಷರಾದ ಸೋನಿಯಾ ಗಾಂಧಿಯವರ ಸದುದ್ದೇಶದ, ರಚನಾತ್ಮಕ ಟೀಕೆಯನ್ನು  ಸಹಿಸಿಕೊಳ್ಳಲಾಗದಷ್ಟು ಅಸಹಿಷ್ಣು ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ  ಅವರ ಟೀಕೆ, ಅವರ ಉದ್ಧಟತನ ಮತ್ತು ಕೀಳುಮಟ್ಟದ ಮನಸ್ಥಿತಿಯನ್ನು ಬಿಂಬಿಸುತ್ತದೆ. ಇದನ್ನು  ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
ಸಾವಿನಿಂದ  ಹಿಡಿದು ರೋಗದವರೆಗೆ ಎಲ್ಲದರಲ್ಲಿಯೂ ರಾಜಕೀಯ ಲಾಭದ ಲೆಕ್ಕಾಚಾರ ಮಾಡುತ್ತಿರುವ ಬಿಜೆಪಿ  ನಾಯಕರ ದುರಾಲೋಚನೆಯನ್ನು ಸಹಿಸಿಕೊಂಡರೆ ಜನತೆಗೆ ನಾವು ದ್ರೋಹ ಬಗೆದಂತಾಗುತ್ತದೆ. ನಾವು  ಪ್ರಶ್ನೆ ಮಾಡುತ್ತೇವೆ, ನೀವು ಉತ್ತರಿಸಬೇಕು. ದೇಶದ ಮೊದಲ ಕೊರೊನಾ ವೈರಸ್ ಪೀಡಿತ  ವ್ಯಕ್ತಿ ಪತ್ತೆಯಾಗಿರುವುದು ಜನವರಿ 30ರಂದು. ಈ ಬಗ್ಗೆ ಎಚ್ಚರದಿಂದ ಇರಬೇಕು, ನಿರ್ಲಕ್ಷ  ಮಾಡಬಾರದೆಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿರುವುದು ಫೆಬ್ರವರಿ 12ರಂದು.  ಇದರಲ್ಲಿ ಯಾವ ಕೀಳು ರಾಜಕೀಯ ಇತ್ತು ನಡ್ಡಾ ಅವರೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಅಮೆರಿಕ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದಾಗ ಆ ದೇಶದಲ್ಲಿ 80 ಜನರಿಗೆ  ಕೊರೊನಾ ಸೋಂಕು ತಗಲಿತ್ತು. ಭಾರತದಲ್ಲಿ 20 ಜನರಲ್ಲಿ ಸೋಂಕು ಪತ್ತೆಯಾಗಿತ್ತು.  ಹೀಗಿದ್ದರೂ ಗುಜರಾತ್‌ನಲ್ಲಿ ಲಕ್ಷ ಲಕ್ಷ ಜನರನ್ನು ಸೇರಿಸಿ ಜಾತ್ರೆ ಮಾಡಿದವರು ಯಾರು? ಈ  ನಿರ್ಲಕ್ಷ್ಯಕ್ಕೆ ಯಾರು ಹೊಣೆ?  ಮಾರ್ಚ್ 16ರ ವರೆಗೆ ಆರು ದೇಶಗಳನ್ನು ಹೊರತುಪಡಿಸಿ  ಉಳಿದೆಲ್ಲ ದೇಶಗಳ ವಿಮಾನ ಪ್ರಯಾಣಿಕರನ್ನು ಪರೀಕ್ಷೆ ಮಾಡದೆ ದೇಶದೊಳಗೆ ಬಿಟ್ಟವರು ಯಾರು?  ಹೀಗೆ ಬಂದಿದ್ದ ಎರಡು ಲಕ್ಷ ಪ್ರಯಾಣಿಕರಲ್ಲಿ ಪರೀಕ್ಷೆ ಗೊಳಗಾದವರು ಎಷ್ಟು ಮಂದಿ? ಇದು  ನಿಮ್ಮ ಸಿದ್ಧತೆಯೇ ನಡ್ಡಾ ಅವರೇ? ಎಂದು ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
ಅಧಿವೇಶನ  ಮುಂದೂಡುವಂತೆ ಕಾಂಗ್ರೆಸ್ ಪಕ್ಷ  ಒತ್ತಾಯಿಸಿದ ನಂತರವೂ ಲೋಕಸಭಾ ಅಧಿವೇಶನ ಮತ್ತು  ಕರ್ನಾಟಕದಲ್ಲಿ ವಿಧಾನಸಭಾ ಅಧಿವೇಶನ ನಡೆಸಿದ್ದು ಯಾರು? ಜನತಾ ಕರ್ಫ್ಯೂ ಹೇರಿದ ನಂತರ  ಲಾಕ್‌ಡೌನ್ ಆಗುವ ವರೆಗಿನ‌ ಮೂರು ದಿನಗಳ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ  ನಡೆಸಿ ಅಧಿಕಾರ ಹಿಡಿಯುವುದು ಕೊರೊನಾ ಎದುರಿಸುವ ಸಿದ್ಧತೆಗಿಂತಲೂ ಆದ್ಯತೆಯ  ವಿಷಯವಾಗಿತ್ತೇ ನಡ್ಡಾ ಅವರೇ? ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
ಜನತಾ ಕರ್ಫ್ಯೂ ಹೇರಿ ಚಪ್ಪಾಳೆ ತಟ್ಟಲು ಹೇಳಿ, ಜನ  ಬೀದಿಗಿಳಿದು ಮೆರವಣಿಗೆ ಮಾಡುವಂತೆ ಮಾಡಿದ್ದು ಯಾರು? ಕರ್ನಾಟಕದ ಮುಖ್ಯಮಂತ್ರಿ  ಯಡಿಯೂರಪ್ಪ ಮದುವೆಗೆ ಹೋಗ್ತಾರೆ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಗುಂಪು ಕಟ್ಟಿಕೊಂಡು ದೇವಸ್ಥಾನಕ್ಕೆ ಹೋಗ್ತಾರೆ. ಇವರಿಗೆ ಲಾಕ್‌ಡೌನ್ ಇರಲಿಲ್ಲವೇ?  ಜನರಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಅವಕಾಶ ನೀಡದೆ, ದಿಢೀರನೇ ಲಾಕ್ ಡೌನ್ ಘೋಷಿಸಿ  ಅರಾಜಕತೆಯನ್ನು ಸೃಷ್ಟಿಸಿದ್ದು ಯಾರು? ಬಡಜನತೆ ಮೈಲುಗಟ್ಟಲೆ ಕಾಲ್ನಡಿಗೆಯಲ್ಲಿ ಊರಿಗೆ  ಹೊರಟು ಬೀದಿಪಾಲಾಗುವಂತೆ ಮಾಡಿದ್ದು ಯಾರು ನಡ್ಡಾ ಅವರೇ? ಎಂದು ಮಾಜಿ ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.
ನಿಮ್ಮ  ಪ್ರಧಾನಿಯವರು ಕೈಗೊಳ್ಳುವ ಅಡ್ಡಕಸುಬಿ ನಿರ್ಧಾರಗಳಿಂದ ಜನ ಬವಣೆ ಪಡುತ್ತಿರುವಾಗ ಮತ್ತು  ಅದರಿಂದಾಗಿಯೇ ಕೊರೊನಾ ವೈರಸ್ ಸೋಂಕು ಉಲ್ಬಣಗೊಳ್ಳುತ್ತಿರುವಾಗ ಜವಾಬ್ದಾರಿಯುತ ವಿರೋಧ  ಪಕ್ಷವಾಗಿ ನಾವು ಸುಮ್ಮನಿರಬೇಕೆಂದು ನೀವು ಬಯಸುತ್ತೀರಾ? ಕ್ಷಮಿಸಿ, ನಡ್ಡಾ ಅವರೇ, ನಾವು ದೇಶದ ಜನತೆಗೆ ನಿಷ್ಠರಾಗಿರುವವರು, ಅವರ ಪರವಾಗಿ ದನಿ ಎತ್ತುವುದನ್ನು ನಿಲ್ಲಿಸುವುದಿಲ್ಲ. ನಿಮ್ಮ ಸಂಸ್ಕೃತಿಹೀನ, ಉದ್ಧಟತನದ ಟೀಕೆಗೆ ಬಗ್ಗುವುದಿಲ್ಲ. ನಾವು ಪ್ರಶ್ನೆ ಕೇಳುತ್ತೇವೆ, ನೀವು ಉತ್ತರಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ  ಅವರು ನಡ್ಡಾ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.